ಸಾರಾಂಶ
ಶೇಷಮೂರ್ತಿ ಅವಧಾನಿ
ಕನ್ನಡಪ್ರಭವಾರ್ತೆ ಕಲಬುರಗಿ-ಇಂದು ಸೆ.5, ಶಿಕ್ಷಕರ ದಿನಾಚರಣೆ, ಮಾಜಿ ರಾಷ್ಟ್ರಪತಿ, ಶಿಕ್ಷಣ ತಜ್ಞರಾಗಿದ್ದ ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮದಿನವನ್ನೇ ಶಿಕ್ಷಕರನ್ನು ಗೌರವಿಸಲು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಮಕ್ಕಳ ಸ್ನೇಹಿಯಾಗಿ ಪಾಠ ಪ್ರವಚನ ಪ್ರಾಮಾಣಿಕವಾಗಿ ಮಾಡುತ್ತ ಶಾಲೆಗೆ ಬರುವ ಮಕ್ಕಳಲ್ಲೇ ದೇವರನ್ನು ಕಾಣುವ ಶಿಕ್ಷಕರ ಬೋಧನೆಯ ಹಲವು ಕೌಶಲ್ಯಗಳ ಬಗ್ಗೆ ಕನ್ನಡಪ್ರಭದ ಒಳನೋಟ ಇಲ್ಲಿದೆ.
ಗಡಿನಾಡ ಮಕ್ಕಳ ಹೃದಯ ಗೆದ್ದ ಶಿಕ್ಷಕ ರವೀಂದ್ರಮಹಾರಾಷ್ಟ್ರ ಗಡಿ ನಂದಗೂರು ಪ್ರಾಥಮಿಕ ಶಾಲೆ ಶಿಕ್ಷಕ ರವೀಂದ್ರ ರುದ್ರವಾಡಿ, ಗಡಿ ಗ್ರಾಮೀಣ ಭಾಗದಲ್ಲಿ ಸವಾಲುಗಳನ್ನು ಎದುರಿಸುತ್ತ ವಿನೂತನ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಆಸಕ್ತಿ ಮೂಡಿಸುತ್ತಿದ್ದಾರೆ.
ಶಿಕ್ಷಕ ರವೀಂದ್ರರ ಸ್ಫೂತಿಯಿಂದಾಗಿ ಮಕ್ಕಳು ಕಥೆ- ಕವನ ರಚಿಸಿದ್ದಾರೆ, ಶಾಲಾ ಪತ್ರಿಕೆ ''''''''ಅಂಕುರ'''''''' ರೂಪಿಸಿ ಪ್ರಕಟಿಸಿದ್ದಾರೆ. ಶಾಲಾ ಬ್ಯಾಂಕ್ ನಿರ್ವಹಿಸಿದ್ದಾರೆ. ಬೀಜದುಂಡೆ ಮಾಡಿ ಚೆಲ್ಲಿದ್ದಾರೆ, ಶಾಲೆಯಲ್ಲೇ ಸಸಿ ತಯಾರಿಸಿ ಸಮುದಾಯದಲ್ಲಿ ಉಚಿತವಾಗಿ ಹಂಚಿದ್ದಾರೆ. ಕಲಿಕೆಯ ಮೂಲಕ ಗುಣಾತ್ಮಕ ಕಲಿಕೆಯನ್ನು ಸಾಧಿಸಿದ್ದಾರೆ.ಭಾಷಾ ಸೂಕ್ಷ್ಮತೆ ಹೊಂದಿದ ಗಡಿಗ್ರಾಮದಲ್ಲಿ ಬಹುಭಾಷಾ ಕಲಿಕೆಗೆ ಉತ್ತೇಜನ ನೀಡಿದ್ದಾರೆ. ಗ್ರಾಮ ಸ್ವಚ್ಛತೆ, ಪೌಷ್ಟಿಕ ಆಹಾರ ಜಾಗೃತಿ, ಮಕ್ಕಳ ಹಕ್ಕುಗಳು, ಪ್ಲಾಸ್ಟಿಕ್ ಬಳಕೆಯ ಜಾಗೃತೆ, ಪರಿಸರ ಸಂರಕ್ಷಣೆಯ ಪಾಠಗಳನ್ನು ಎಳವೆಯಲ್ಲೇ ಮಕ್ಕಳಿಗೆ ನೀಡಿದ್ದಾರೆ. ''''''''ಶಾಲಾ ವಿದ್ಯಾರ್ಥಿಗಳ ನೈತಿಕ ಮತ್ತು ಶಿಸ್ತು ಸಂಘಟನಾ ಸಮಿತಿ'''''''' ರಚಿಸಿಕೊಂಡು ಮಕ್ಕಳು ಎಲ್ಲ ಚಟುವಟಿಕೆಗಳನ್ನು ಯೋಜಿಸಿಕೊಳ್ಳುತ್ತಾರೆ. ಇದರಿಂದ ಮಕ್ಕಳು ಸಾಮಾಜಿಕ ಜವಾಬ್ದಾರಿಯನ್ನು ಅರಿಯುವಂತಾಗಿದೆ.
ಶಿಕ್ಷಕ ರವೀಂದ್ರ ರುದ್ರವಾಡಿಯವರ ವೃತ್ತಿ ಬದ್ಧತೆ, ಮಕ್ಕಳ ಕುರಿತ ಕಾಳಜಿಯಿಂದಾಗಿ ನಂದಗೂರು ಶಾಲೆಯ ವಿದ್ಯಾರ್ಥಿಗಳ ಸಾಧನೆ ಹೆಚ್ಚಿದೆ.ಮರಳಲ್ಲಿ ತಿದ್ದಿತೀಡಿ ಕಲಿಸುವ ಶಿಕ್ಷಕಿ ಶೈಲಶ್ರೀ
ಪ್ರಾಥಮಿಕ ಶಾಲೆಗೆ ಬರುವ ಮಕ್ಕಳಲ್ಲಿ ಕಲಿಕೆ ಆಸಕ್ತಿ ಅರಳಿಸಲು ಸರ್ಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶೈಲಶ್ರೀ ಇವರು ಮಕ್ಕಳಿಗೆ ಪರಿಸರದಲ್ಲಿ ಲಭ್ಯವಿರುವ ಮರಳು, ಕಲ್ಲು, ಕಟ್ಟಗೆ ಹೀಗೆ ಹಲವು ಹತ್ತು ಪದಾರ್ಥಗಳಿಂದಲೇ ಅವರಲ್ಲಿನ ಸೂಪ್ತ ಕಲಿಕಾ ಪ್ರವೃತ್ತಿ ಅರಳಿಸುತ್ತಿದ್ದಾರೆ.ಮಕ್ಕಳಲ್ಲಿ ಕನ್ನಡ, ಇಂಗ್ಲೀಷ್ ಅಕ್ಷರಾಭ್ಯಾಸದ ಕಲಿಕಾಸಕ್ತಿ ಕೆರಳಿಸಲು ಮರಳು ಬಳಸಿ, ಕೈ ಬೆರಳಿನಿಂದ ಅಲ್ಲಿಯೇ ಮೂಲಾಕ್ಷರ ಪದ ಕಲಿಸುವ ಸಾಹಸ ಮಾಡುತ್ತಿದ್ದಾರೆ. ಈ ಕಲಿಕಾ ಪದ್ಧತಿಯಿಂದ ಕಮರವಾಡಿ ಶಾಲೆಯ ಪ್ರಾಥಮಿಕ ಮಕ್ಕಳಲ್ಲಿ ಹೊಸ ಅಕ್ಷರ ಕಲಿಯಬೇಕೆಂಬ ಹಂಬಲದಲ್ಲಿ ಹೆಚ್ಚು ಮುಂದೆ ಬರುತ್ತಿವೆ.
ಸುತ್ತಲಿನ ಪರಿಕರ ಬಳಸಿ ಆಕೃತಿ ಮಾಡಿ ಗಣಿತ, ರೇಖಾಗಣಿತ ಹೇಳಿಕೊಟ್ಟು ಮಕ್ಕಳಲ್ಲಿನ ವಿಷಯಾಸಕ್ತಿ ಹೆಚ್ಚಿಸುತ್ತಿದ್ದಾರೆ. ಧ್ವನಿ ಏರಿಳಿತ ಮಾಡುವ ಮೂಲಕ ತರಗತಿಲ್ಲಿ ಮಕ್ಕಳಲ್ಲಿ ಇಂಗ್ಲಿಷ್ ಕಲಿಕಾಸಕ್ತಿ ಅರಳಿಸುತ್ತಿದ್ದಾರೆ.ಸಂತೆಗೆ ಕಳುಹಿಸಿ ಲೆಕ್ಕ ಕಲಿಸುವ ಜಯಶ್ರೀ
ಚಿತ್ತಾಪುರದ ಕಮರವಾಡಿ ಸರ್ಕಾರಿ ಶಾಲೆಯ ಶಿಕ್ಷಕಿ ಜಯಶ್ರೀ ಶಿರವಾಳ ಮಕ್ಕಳಲ್ಲಿನ ಗಣಿತ ಕಲಿಕಾಸಕ್ತಿ ಅರಳಿಸುತ್ತಿದ್ದಾರೆ. ಊರಲ್ಲಿ ನಡೆವ ವಾರದ ಸಂತೆಗೆ ಶಾಲಾ ಮಕ್ಕಳನ್ನು ಕಳುಹಿಸಿಕೊಟ್ಟು ಹಣಕಾಸಿನ ವಹಿವಾಟು, ಖರೀದಿ ಸಂಗತಿಗಳು, ಕೂಡಿ, ಕಳೆವ, ಗುಣಿಸಿ ಭಾಗಿಸುವ ಲೆಕ್ಕ ಹೇಳಿಕೊಡುತ್ತಿದ್ದಾರೆ. ಮಕ್ಕಳಲ್ಲಿನ ಕಲಿಕಾಸಕ್ತಿ ಹೆಚ್ಚಿಸುವ ಉದ್ದಶದಿಂದ ಇಂತಹ ಪ್ರಾಯೋಗಿಕ ಹಾಗೂ ವಿನೂತನ ಶೈಲಿ ಈ ಶಿಕ್ಷಕಿ ರೂಢಿಸಿಕೊಂಡಿದ್ದು, ಮಕ್ಕಳನ್ನು ಗಣಿತದತ್ತ ಕರೆತರುತ್ತಿದ್ದಾರೆ. ಇದು ಮಕ್ಕಳು ಗಣಿತವನ್ನು ಸರಳವಾಗಿ ಕಲಯಲು ಸಹಕಾರಿ.ಸರಳ ಪ್ರಯೋಗ: ಅಗಾಧ ಜ್ಞಾನದ ಮಂಜುಳಾ ಮೇಡಂ
ಕಮರವಾಡಿ ಶಾಲೆಯ ಮುಖ್ಯ ಶಿಕ್ಷಕಿ ಮಂಜುಳಾ, ಸರಳ ಪ್ರಯೋಗಗಳ ಮೂಲಕವೇ ಮಕ್ಕಳಿಗೆ ಪರಿಸರ, ವಿಜ್ಞಾನ ಪಾಠ ಹೇಳಿ ಮೆಚ್ಚುಗೆ ಪಡೆದವರು. ಸರಳ ಪರಿಕರ ಮೂಲಕ ನೀರಲ್ಲಿ ಕರಗುವ, ಮುಳುಗುವ ವಸ್ತುಗಳ ಚಟುವಟಿಕೆ ಮಾಡಿಸುತ್ತ, ಬಣ್ಣದ ಕಾಗದ ಬಳಸಿ ರಸ್ತೆ ನಿಯಮ ತಿಳಿಸುವ, ಸಸ್ಯಗಳು ಸೂರ್ಯನ ಶಾಖದಿಂದ ಹೇಗೆ ಬೆಳೆಯುತ್ತವೆಂಬುದನ್ನು ಪ್ರಯೋಗ ಮೂಲಕ ಹೇಳುವುದು, ಆಹಾರ, ಜೀವ ಪೋಷಕಗಳು, ಪ್ರೋಟಿನ್, ವಿಟಮಿನ್ ಪ್ರಯೋಗಗಳ ಮೂಲಕ ಪಾಠ ಮಾಡಿಸುತ್ತ ಮಕ್ಕಳಲ್ಲಿ ವಿಜ್ಞಾನ, ಪರಿಸರ ಜ್ಞಾನ ಬೆಳೆಯುವಂತೆ ಮಾಡುತ್ತಿದ್ದಾರೆ.ಶಿಕ್ಷಕ ವೀರಣ್ಣ ಸ್ಮಾರ್ಟ್ ಕ್ಲಾಸ್ ಬಳಸಿ ಪಾಠ
ವೀರಣ್ಣ ವಿಶ್ವಕರ್ಮ, ಚಿತ್ತಾಪುರದ ಕಮರವಾಡಿ ಶಾಲೆಯಲ್ಲಿ ಗಣಿತ, ವಿಜ್ಞಾನ ಶಿಕ್ಷಕರಾಗಿ, ಮೂರ್ತ ರೂಪದಲ್ಲಿ ಮಕ್ಕಳಿಗೆ ಪಾಠ ಹೇಳುವುದೇ ಆಗಿದೆ. ಸಸ್ಯಗಳ ಪೋಷಣೆಯ ವಿಷಯದ ಪಾಠದಲ್ಲಿ ಸಸ್ಯಗಳನ್ನೇ ಬಳಸಿ, ಗಣಿತದ ಚತುರ್ಭುಜ ಪಾಠದಲ್ಲಿ ಕಿಟ್, ಚಾರ್ಟ್ ಬಳಸಿ ಪಾಠ ಮಾಡುವ ಮೂಲಕ ಮಕ್ಕಳಿಗೆ ವಿಷಯ ಗ್ರಹಿಕೆಯಾಗುವಂತೆ ಮಾಡುತ್ತಿದ್ದಾರೆ. ಸ್ಮಾರ್ಟ್ ಕ್ಲಾಸ್ ಬಳಸಿ ಪಾಠ ಮಾಡುವ ವೀರಣ್ಣ, ಗಣಿತ, ವಿಜ್ಞಾನದ ಪಾಠಗಳನ್ನೆಲ್ಲ ಸಿದ್ಧಪಡಿಸಿ, ಯೂಟ್ಯೂಬ್ ನಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ.ಮಕ್ಕಳಿಗೆ ಕಲಿಕಾಸಕ್ತಿ ಕೆರಳಿಸಿದ ಶಿಕ್ಷಕ ರವಿಚಂದ್ರ ಸಿಬಾರಿ
ಕಮಲಾಪುರದ ಡೊಂಗರಗಾಂವ್ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರವಿಚಂದ್ರ ಸಿಬಾರಿ, ಮಕ್ಕಳ ಒಡನಾಡಿ. ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯರು. ವಿದ್ಯಾರ್ಥಿ ಸುರೇಶ್ ಉದ್ದ ಜಿಗಿತ ವೈಯಕ್ತಿಕ ಸ್ಪರ್ಧೆಯಲ್ಲಿ ಹೋಬಳಿ, ತಾಲೂಕು, ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಲು ಈ ಶಿಕ್ಷಕ ಪ್ರಮುಖ ಪಾತ್ರ ವಹಿಸಿದ್ದಾರೆ, ಸೇವಾದಳ ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್ ಇನ್ನಿತರ ಚಟುವಟಿಕೆಯಲ್ಲಿ ಭಾಗವಹಿಸಿರುವ ಇವರು ಸಾಮಾಜಿಕ ಸೇವೆಯಲ್ಲಿ ಕೂಡ ತೊಡಗಿಕೊಂಡಿದ್ದಾರೆ.ಸಾಹಿತ್ಯ ಅರಿವು ಮೂಡಿಸುವ ಅಂಬರಾಯ ಮಡ್ಡೆ
ಕನ್ನಡ ಸಾಹಿತ್ಯ ಅರಿವು ಮೂಡಿಸಿದ ಶಿಕ್ಷಕ ಅಂಬರಾಯ ಮಡ್ಡೆ, ಮಹಾಗಾಂವ ಕ್ರಾಸ್ ಸರ್ಕಾರಿ ಶಾಲೆಯಲ್ಲಿ ಬೋಧಿಸುತ್ತಿದ್ದು, ಚುಟುಕು, ಕವನ, ಕಥೆ ರಚಿಸಲು ಪ್ರೇರಣೆ ನಿಡ್ಡಿದ್ದಾರೆ. ಪದಗಳ ಪರಿಚಯ, ಒತ್ತಾಕ್ಷರ ಅರಿವು, ವಾಕ್ಯಗಳ ಪರಿಪೂರ್ಣ ಅರಿವು, ವ್ಯಾಕರಣ ಕಲಿಕೆಗೆ ಆದ್ಯತೆ ನೀಡಿದ್ದಾರೆ. ಸರ್ಕಾರದ ಕಲಿಕೆಯ ಯೋಜನೆಗೆ ತಕ್ಕಂತೆ ಮಕ್ಕಳಿಗೆ ಸಿದ್ದಪಡಿಸುವದು, ಎಫ್ ಎಲ್ ಏನ್ ಚಟುವಟಿಕೆ, ಕ್ರಿಯಾಯೋಜನೆ, ಕ್ರಿಯಾಸಂಶೋಧನೆ, ಕಲಿಕಾ ಫಲ, ಸಾಮರ್ಥ್ಯಗಳಿಗೆ ದೈನಂದಿನ ಚಟುವಟಿಕೆ ನಿರಂತರ ಜಾರಿಯಲ್ಲಿರಿಸಿದ್ದಾರೆ. ಮಕ್ಕಳಲ್ಲಿ ಕನ್ನಡ ಭಾಷೆ ಬಗ್ಗೆ ಆಸಕ್ತಿ ಮೂಡಿಸಿ ಪದ ಸಾಮರ್ಥ್ಯ, ಮಾತುಗರಿಕೆ, ಭಾಷಣ, ಅಶುಭಾಷಣ, ಗ್ರಹಿಕೆಯುಕ್ತ ಕೌಶಲ್ಯ ಬೆಳೆಸಿದ್ದಾರೆ.