ಸಾರಾಂಶ
ಹೊಸಪೇಟೆ: ಶಿಕ್ಷಕರನ್ನು ಅಮಾನತು ಮಾಡಲು ನನಗೆ ಭಾರೀ ನೋವಾಗುತ್ತದೆ. ಶಿಕ್ಷಕರು ಯಾವುದೇ ಕಾರಣಕ್ಕೂ ಅಮಾನತಾಗಬಾರದು. ಜಗತ್ತಿನಲ್ಲಿ ಏನೇ ಬದಲಾದರೂ ಶಿಕ್ಷಕರ ವೃತ್ತಿ ಬದಲಾಗಲ್ಲ. ಎಷ್ಟೇ ಟೆಕ್ನಾಲಜಿ ಬಂದರೂ ಮೇಷ್ಟ್ರು ಪಾಠ ಮಾಡಬೇಕು. ವಿದ್ಯಾರ್ಥಿಗಳು ಓದಲೇಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.
ನಗರದ ಸಾಯಿಲೀಲಾ ಕಲ್ಯಾಣ ಮಂಟಪದಲ್ಲಿ ಸೋಮವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಿಕ್ಷಕರು ಶಾಲೆಗಳಲ್ಲಿ ಪಾಠ ಮಾಡಬೇಕು. ನಾವು ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿದಾಗ ಶಿಕ್ಷಕರೇ ಇಲ್ಲ ಎಂದಾಗ ಏನೂ ಮಾಡಬೇಕು. ಕೆಲ ಅನಿವಾರ್ಯ ಕಾರಣಗಳಿಂದ ನಾವು ಶಿಕ್ಷಕರನ್ನು ಅಮಾನತು ಮಾಡಬೇಕಾಗುತ್ತದೆ. ಆದರೂ ನೋವಾಗುತ್ತದೆ. ಈ ಸ್ಥಿತಿ ಶಿಕ್ಷಕರು ತಂದುಕೊಳ್ಳಬಾರದು ಎಂದು ಸೂಚ್ಯವಾಗಿ ಹೇಳಿದರು.ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಕೆಎಎಸ್ ಅಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳು ಆಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಹಾಗಾಗಿ ಶಿಕ್ಷಕರು ನಕಾರಾತ್ಮಕವಾಗಿ ಆಲೋಚನೆ ಮಾಡದೇ, ಸಕಾರಾತ್ಮಕ ಆಲೋಚನೆಯೊಂದಿಗೆ ಮಕ್ಕಳಿಗೆ ಪಾಠ ಮಾಡಬೇಕು. ಮನುಷ್ಯ ಸತ್ತ ಮೇಲೂ ಆತನ ಜೊತೆಗೆ ಜ್ಞಾನ ಹೋಗುತ್ತದೆ. ಈ ಜ್ಞಾನವನ್ನು ಶಿಕ್ಷಕರು ನೀಡುತ್ತಾರೆ. ಶಿಕ್ಷಕ ವೃತ್ತಿಗೆ ಸಮಾಜದಲ್ಲಿ ಗೌರವ ಇದೆ. ಈ ಗೌರವವನ್ನು ಕಾಪಾಡಿಕೊಂಡು ಸಾಗಬೇಕು ಎಂದರು.
ಈಗಿನ ಶಿಕ್ಷಕರು ಪಂಚ ಶುದ್ಧತೆ ಹೊಂದಬೇಕಿರುವುದು ಅವಶ್ಯ ಇದೆ. ತನು, ಮನ, ಭಾವ, ನುಡಿ, ನಡೆ ಶುದ್ಧಇಟ್ಟುಕೊಳ್ಳಬೇಕು. ಜಪಾನ್ ದೇಶದಲ್ಲಿ ಶಿಕ್ಷಣ ಚೆನ್ನಾಗಿದೆ. ಶಿಕ್ಷಣ ಕ್ಷೇತ್ರ ಉತ್ತಮವಾಗಿದ್ದರೆ, ಸಮಾಜ ಕೂಡ ಸುಧಾರಿಸುತ್ತದೆ ಎಂದರು.ಜಿಪಂ ಸಿಇಒ ಎನ್.ಮಹಮ್ಮದ್ ಅಲಿ ಅಕ್ರಂ ಶಾ ಮಾತನಾಡಿ, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆದರ್ಶ ಗುಣಗಳನ್ನು ಶಿಕ್ಷಕರು ಹೊಂದಬೇಕು. ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕಾಗಿ ನಾನು ಸದಾ ಸಿದ್ಧನಾಗಿರುವೆ. ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ನಾವೆಲ್ಲರೂ ಸೇರಿ ಶ್ರಮಿಸೋಣ ಎಂದರು.
ಹುಡಾ ಅಧ್ಯಕ್ಷ ಮಹಮ್ಮದ್ ನಿಯಾಜಿ, ಗ್ಯಾರಂಟಿ ಯೋಜನೆಗಳ ಪ್ರತಿಷ್ಠಾನ ಸಮಿತಿ ಅಧ್ಯಕ್ಷ ಕುರಿ ಶಿವಮೂರ್ತಿ ಮಾತನಾಡಿದರು. ಶಾಸಕ ಎಚ್.ಆರ್. ಗವಿಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವೆ. ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡುವೆ ಎಂದರು. ಜಿಲ್ಲೆಯ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆಗಳ 15 ಶಿಕ್ಷಕರನ್ನು ಸನ್ಮಾನಿಸಲಾಯಿತು.ಡಿಡಿಪಿಐ ಹನುಮಕ್ಕ, ಬಿಇಒ ಚನ್ನಬಸಪ್ಪ, ಶಿಕ್ಷಕರ ಸಂಘಗಳ ಅಧ್ಯಕ್ಷರಾದ ಅಕ್ಕಮಹಾದೇವಿ, ಬಸವರಾಜ ಸಂಗಪ್ಪ, ಬಸವರಾಜ, ಮಾರ್ಗದಪ್ಪ, ಶೇಖರ ಹೊರಪೇಟೆ, ಸುಧಾದೇವಿ, ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನಗೌಡ, ವೀರಭದ್ರಪ್ಪ ಮತ್ತಿತರರರಿದ್ದರು. ಜಿಲ್ಲೆಯ ಆರು ತಾಲೂಕುಗಳ ಶಿಕ್ಷಕರು ಭಾಗವಹಿಸಿದ್ದರು.
ಹೊಸಪೇಟೆಯಲ್ಲಿ ಸೋಮವಾರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಚಾಲನೆ ನೀಡಿದರು.