ಶಿಕ್ಷಕರು, ವಿದ್ಯಾರ್ಥಿಗಳು ಶಾಲೆಯ ನಿಜವಾದ ಆಸ್ತಿ

| Published : May 27 2024, 01:05 AM IST

ಸಾರಾಂಶ

ಮೊದಲು ಶಿಕ್ಷಕನಲ್ಲಿ ತನ್ನ ವಿಷಯದ ಬಗ್ಗೆ ಆಳವಾದ ಜ್ಞಾನ, ಅದನ್ನು ವ್ಯಕ್ತಪಡಿಸುವ ಕೌಶಲ್ಯವಿದ್ದರೆ ಆತ ಖಂಡಿತವಾಗಿಯೂ ಮಕ್ಕಳ ಮೆಚ್ಚಿನ ಶಿಕ್ಷಕನಾಗುತ್ತಾನೆ

ನರೇಗಲ್ಲ: ಶಾಲೆಯ ನಿಜವಾದ ಆಸ್ತಿ ಶಿಕ್ಷಕ ಮತ್ತು ವಿದ್ಯಾರ್ಥಿಗಳು. ಎಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಸಂಬಂಧ ಚೆನ್ನಾಗಿರುತ್ತದೆಯೋ ಆ ಶಾಲೆ ಚೆನ್ನಾಗಿರುತ್ತದೆ ಮತ್ತು ಇತರರಿಗೆ ಮಾದರಿಯೂ ಆಗಿರುತ್ತದೆ ಎಂದು ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ ತಿಳಿಸಿದರು.

ಅವರು ಸ್ಥಳೀಯ ಶ್ರೀಅನ್ನದಾನೇಶ್ವರ ಪದವಿ ಸಭಾಂಗಣದಲ್ಲಿ ಅಕ್ಷರ ಭಾರತ ಪ್ರತಿಷ್ಠಾನ ಗದಗ ಮತ್ತು ಶ್ರೀಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಆಶ್ರಯದಲ್ಲಿ ನಡೆದಿರುವ ಶಿಕ್ಷಕರ ಪುನಃಶ್ಚೇತನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕ ವಿಷಯ ಕುರಿತು ಮಾತನಾಡಿದರು.

ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಎಂದಿಗೂ ಒತ್ತಡ ಹೇರಬಾರದು. ಪ್ರೀತಿಯಿಂದ ಅವರ ಮನಸ್ಸನ್ನು ಗೆಲ್ಲುವ ಕಾರ್ಯವಾಗಬೇಕು. ಮೊದಲು ಶಿಕ್ಷಕನಲ್ಲಿ ತನ್ನ ವಿಷಯದ ಬಗ್ಗೆ ಆಳವಾದ ಜ್ಞಾನ, ಅದನ್ನು ವ್ಯಕ್ತಪಡಿಸುವ ಕೌಶಲ್ಯವಿದ್ದರೆ ಆತ ಖಂಡಿತವಾಗಿಯೂ ಮಕ್ಕಳ ಮೆಚ್ಚಿನ ಶಿಕ್ಷಕನಾಗುತ್ತಾನೆ. ಮುಖ್ಯ ಶಿಕ್ಷರೊಂದಿಗೆ ಉಳಿದ ಸಿಬ್ಬಂದಿ ಸೌಜನ್ಯದಿಂದ, ಪ್ರೀತಿಯಿಂದ ವರ್ತಿಸಿ ಸಹಕಾರ ನೀಡುವುದನ್ನು ರೂಢಿಸಿಕೊಳ್ಳಬೇಕು. ವಿಜ್ಞಾನ ವಿಷಯದ ಶಿಕ್ಷಕರು ಕಪ್ಪು ಹಲಗೆಯ ಬಳಕೆ ಹೆಚ್ಚಾಗಿ ಮಾಡಬೇಕು ಮತ್ತು ಪಠ್ಯದಲ್ಲಿನ ಚಿತ್ರಗಳನ್ನು ಸುಂದರವಾಗಿ ಚಿತ್ರಿಸುವ ಕಲೆ ತಮ್ಮಲ್ಲಿ ಬೆಳೆಸಿಕೊಳ್ಳಬೇಕು. ಶಿಕ್ಷಕನ ಮಾತು ನಿಖರವಾಗಿರಬೇಕು, ಮಕ್ಕಳ ಮನಸ್ಸನ್ನು ಮುಟ್ಟುವಂತೆ ಮತ್ತು ತಟ್ಟುವಂತೆ ಇರಬೇಕು ಎಂದರು.

ಉಪನ್ಯಾಸಕ ರಮೇಶ ಕುಲಕರ್ಣಿ ನಿರೂಪಿಸಿದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ ವೀರಾಪೂರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಬೂದಿಹಾಳ ಪರಿಚಯಿಸಿದರು.

ಲೆಕ್ಕಪತ್ರ ಅವಶ್ಯಕ: ಒಂದು ಶಾಲೆ,ಸಂಸ್ಥೆ ಪಾರದರ್ಶಕವಾಗಿದೆ ಎಂಬುದು ತಿಳಿಯುವುದೇ ಅದರ ಲೆಕ್ಕಪತ್ರಗಳ ಆಧಾರದಲ್ಲಿ.ಆದ್ದರಿಂದ ಶಾಲೆಯ ಮುಖ್ಯ ಶಿಕ್ಷಕರು,ಪ್ರಾಚಾರ್ಯರು,ಸಂಸ್ಥೆಯ ಅಧ್ಯಕ್ಷರು ಲೆಕ್ಕ ಪತ್ರ ಸರಿಯಾಗಿ ಇರಿಸಬೇಕಾದುದು ಅವಶ್ಯಕ ಎಂದು ಗದಗನ ಖ್ಯಾತ ಲೆಕ್ಕ ಪರಿಶೋಧಕ ಆನಂದ ಪೋತ್ನಿಸ್ ಹೇಳಿದರು.

ಶಿಕ್ಷಕರ ಪುನಃಶ್ಚೇತನ ಶಿಬಿರದಲ್ಲಿ ಸಂಸ್ಥೆಯ ಲೆಕ್ಕ ಪತ್ರಗಳು ವಿಷಯದ ಬಗ್ಗೆ ಮಾತನಾಡಿದ ಅವರು, ಯಾವುದೇ ಸಂಸ್ಥೆ, ಶಾಲೆಗೆ ಹರಿದು ಬರುವುದು ಸಾರ್ವಜನಿಕರ ದುಡ್ಡು. ಅದನ್ನು ಎಲ್ಲಿಯೂ ಪೋಲು ಮಾಡದಂತೆ ರಕ್ಷಿಸಬೇಕಾದುದು ಸಂಸ್ಥೆಯ ಮುಖ್ಯಸ್ಥರ ಪ್ರಥಮ ಕಾರ್ಯವಾಗಿದೆ. ಆದ್ದರಿಂದ ಅವರು ಮೊದಲ ದಿನದಿಂದಲೆ ಲೆಕ್ಕ ಪತ್ರಗಳನ್ನು ಅತ್ಯಂತ ಜಾಗೃತೆಯಿಂದ ಇರಿಸಬೇಕಾದುದು ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.

ಸಮಾರೋಪ ಸಮಾರಂಭ: ನಿಗದಿತ ಗೋಷ್ಠಿಗಳು ಮುಗಿಯುತ್ತಿದ್ದಂತೆ ಸಮಾರೋಪ ಸಮಾರಂಭ ಜರುಗಿತು. ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಡಾ.ಕೆ.ಬಿ. ಧನ್ನೂರ ಮಾತನಾಡಿ, ಸಂಸ್ಥೆಯ ಹಿಂದಿನ ಅಧ್ಯಕ್ಷರಾಗಿದ್ದ ಲಿಂ.ಡಾ.ಅಭಿನವ ಅನ್ನದಾನ ಮಹಾಸ್ವಾಮಿಗಳವರ ದೂರದೃಷ್ಟಿಯನ್ನು ನಾವೆಂದಿಗೂ ಮರೆಯುವಂತಿಲ್ಲ. ಶಿಕ್ಷಣ ಪ್ರೇಮಿಗಳಾಗಿದ್ದ ಅವರು ಅನೇಕ ಶೈಕ್ಷಣಿಕ ಸುಧಾರಣೆಗಳಿಗೆ ಕಾರಣರಾಗಿದ್ದರು. ಅವರ ನೆರಳಿನಲ್ಲಿಯೆ ಸಾಗಿರುವ ಇಂದಿನ ಪೀಠಾಧಿಪತಿ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರು ಶಾಲಾ ಪ್ರಾರಂಭಕ್ಕೆ ಮುಂಚೆ ಮೂರು ದಿನಗಳ ಕಾಲ ನಿಮ್ಮೆಲ್ಲರಿಗೂ ಈ ಒಂದು ತರಬೇತಿ ಶಿಬಿರ ಏರ್ಪಡಿಸಿ ನಿಮ್ಮಲ್ಲಿ ಚೈತನ್ಯ ತುಂಬಿದ್ದಾರೆ.ಮುಂದಿನ ದಿನಗಳಲ್ಲಿ ನೀವುಗಳು ನಿಮ್ಮ ನಿಮ್ಮ ತರಗತಿಗಳಲ್ಲಿ ಇದನ್ನು ಸದುಪಯೋಗಪಡಿಸಿಕೊಳ್ಳಿರಿ ಎಂದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯ ಮೇಲೆ ಸಂಸ್ಥೆಯ ಆಡಳಿತಾಧಿಕಾರಿ ಎನ್.ಆರ್.ಗೌಡರ,ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ,ಲೆಕ್ಕ ಪರಿಶೋಧಕ ಆನಂದ ಪೋತ್ನಿಸ್, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಬಸವರಾಜ ವೀರಾಪೂರ, ಶೈಕ್ಷಣಿಕ ಸಲಹೆಗಾರ ಎಂ.ಎಸ್.ದಢೇಸೂರಮಠ ಇದ್ದರು.

ಪ್ರಾಧ್ಯಾಪಕ ಕಲ್ಲಯ್ಯ ಹಿರೇಮಠ ನಿರೂಪಿಸಿದರು. ಮುಖ್ಯ ಶಿಕ್ಷಕ ಎಂ.ವಿ. ವೀರಾಪೂರ ಸ್ವಾಗತಿಸಿದರು. ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ ವಂದಿಸಿದರು.