ಸಾರಾಂಶ
ಬೆಂಗಳೂರು : ಲೋಕಸಭಾ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮುಂದೂಡಿದ್ದ ರಾಜ್ಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು ಮತ್ತು ಮುಖ್ಯಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪುನಾರಂಭಿಸಲು ಸೂಚಿಸಿ ಶಿಕ್ಷಣ ಇಲಾಖೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ.
ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ವರ್ಗಾವಣೆ ಪ್ರಕ್ರಿಯೆಯನ್ನು ಈ ಮೊದಲು ನಿಗದಿಪಡಿಸಿದ್ದ ವೇಳಾಪಟ್ಟಿಯಂತೆ ಮುಂದುವರೆಸಲು ಸಾಧ್ಯವಾಗದ ಕಾರಣ ಪರಿಷ್ಕರಿಸಲಾಗಿದೆ. ಪ್ರಮುಖವಾಗಿ ಈಗಾಗಲೇ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿರುವ ಹಿನ್ನೆಲೆಯಲ್ಲಿ ಈ ವರ್ಷಕ್ಕೆ ಸೀಮಿತಗೊಳಿಸಿ ವಲಯ ವರ್ಗಾವಣೆಯನ್ನು ಕೈಬಿಟ್ಟು ಇತರೆ ವರ್ಗಾವಣೆ ಮುಂದುವರೆಸುವುದಾಗಿ ತಿಳಿಸಿದೆ.
ಕೋರಿಕೆ ಮತ್ತು ಪರಸ್ಪರ ವರ್ಗಾವಣೆ ಅರ್ಜಿ ಸಲ್ಲಿಸಲು ಇದ್ದ ಕಾಲಾವಕಾಶವನ್ನು ಜೂ.20ರವರೆಗೆ ವಿಸ್ತರಿಸಲಾಗಿದೆ. ವರ್ಗಾವಣೆಗೆ ಅರ್ಜಿ ಸಲ್ಲಿಸಿದ ಶಿಕ್ಷಕರ ಅರ್ಹತೆ ಪರಿಶೀಲಿಸಿ, ಬರುವ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮವಾಗಿ ಜು.18ಕ್ಕೆ ವರ್ಗವಣಾ ಕೌನ್ಸೆಲಿಂಗ್‌ಗೆ ಅರ್ಹರಿರುವ ಶಿಕ್ಷಕರ ಅಂತಿಮ ಜೇಷ್ಠತಾ ಪಟ್ಟಿಯನ್ನು ಜು.18ಕ್ಕೆ ಪ್ರಕಟಿಸಬೇಕು. ಜು.10ಕ್ಕೆ ಎಲ್ಲ ಜಿಲ್ಲಾ ಉಪನಿರ್ದೇಶಕರ ವ್ಯಾಪ್ತಿಯಲ್ಲಿ ವರ್ಗಾವಣೆಗೆ ಖಾಲಿ ಇರುವ ಹುದ್ದೆಗಳ ಪಟ್ಟಿ ಪ್ರಕಟಿಸಬೇಕು ಎಂದು ಸೂಚಿಸಲಾಗಿದೆ.
ಜಿಲ್ಲಾ ಹಂತದಲ್ಲಿ ಅಂತಿಮ ಜೇಷ್ಠತಾ ಪಟ್ಟಿಯಲ್ಲಿ ಕನಿಷ್ಠ 5 ವರ್ಷ ಸೇವಾ ಅವಧಿ ಪೂರ್ಣಗೊಳಿಸಿರುವ ಪ್ರಾಥಮಿಕ ಶಿಕ್ಷಕರಿಗೆ ಜು.19ರಂದು, ಪ್ರೌಢ ಶಾಲಾ ಶಿಕ್ಷಕರಿಗೆ ಜು.20ರಂದು ಸ್ಥಳ ನಿಯುಕ್ತಿಗೊಳಿಸಬೇಕು. ನಿರ್ದಿಷ್ಟ ಪಡಿಸಿದ ಹುದ್ದೆಗಳ ಕೌನ್ಸೆಲಿಂಗ್ ನಂತರ ಉಳಿಕೆಯಾದ ಶಿಕ್ಷಕರನ್ನು ಜು.22ರೊಳಗೆ ಜಿಲ್ಲೆಯೊಳಗೆ ಮರುಹೊಂದಾಣಿಕೆ ಮಾಡಬೇಕು. ಅಂತಿಮ ಜೇಷ್ಠತಾ ಪಟ್ಟಿಯಲ್ಲಿ ಕನಿಷ್ಠ 3 ವರ್ಷ ಸೇವೆ ಸಲ್ಲಿಸಿದವರ ಸ್ಥಳ ನಿಯುಕ್ತಿಯನ್ನು ಜು.30ರಂದು ನಡೆಸಬೇಕು. ವಿಭಾಗೀಯ ಹಂತದಲ್ಲಿ ಲಭ್ಯವಿರುವ ಖಾಲಿ ಹುದ್ದೆಗಳನ್ನು ಆ.1ರಂದು ಪ್ರಕಟಿಸಿ ಆ.2ರಿಂದ 9ವರೆಗೆ ಹಂತ ಹಂತವಾಗಿ ಸ್ಥಳ ನಿಯುಕ್ತಿ ಪ್ರಕ್ರಿಯೆ ನಡೆಸಬೇಕು. ಆ.27ರೊಳಗೆ ಪೂರ್ಣ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಇಲಾಖೆ ಸೂಚಿಸಿದೆ.
ಬಳ್ಳಾರಿ-ವಿಜಯನಗರ ಶಿಕ್ಷಕರಿಗೆ ಅಭಿಮತ ವರ್ಗಾವಣೆ
ಬಳ್ಳಾರಿ ಜಿಲ್ಲೆ ವಿಭಜಿಸಿ ವಿಜಯನಗರ ಜಿಲ್ಲೆಯನ್ನು ಹೊಸದಾಗಿ ರಚಿಸಿರುವ ಹಿನ್ನೆಲೆಯಲ್ಲಿ ಆ ಜಿಲ್ಲೆಗಳ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಮೂಲ ಜಿಲ್ಲೆಗೆ ಸ್ಥಳ ನಿಯುಕ್ತಿಗೊಳಿಸಲು ಅಭಿಮತ ವರ್ಗಾವಣೆಗೆ ಶಿಕ್ಷಣ ಇಲಾಖೆ ಅವಕಾಶ ನೀಡಿದೆ. ಆದರೆ, 2023-24ನೇ ಸಾಲಿನಲ್ಲಿ ಈ ಎರಡು ಜಿಲ್ಲೆಗಳಿಂದ ಹೊರಗೆ ಮತ್ತು ಹೊರಗಿನ ಜಿಲ್ಲೆಗಳಿಂದ ಈ ಎರಡು ಜಿಲ್ಲೆಗಳಿಗೆ ಕೋರಿಕೆ ವರ್ಗಾವಣೆಯಾದವರಿಗೆ ಅಭಿಮತ ವರ್ಗಾವಣೆಗೆ ಅವಕಾಶವಿಲ್ಲ. ಅಭಿಮತ ವರ್ಗಾವಣೆಗೊಂಡವರು ಈ ಬಾರಿಯ ಸಾಮಾನ್ಯ ವರ್ಗಾವಣೆಗೆ ಅರ್ಹರಾಗಿರುವುದಿಲ್ಲ ಎಂಬಿತ್ಯಾದಿ ಷರತ್ತುಗಳನ್ನು ವಿಧಿಸಲಾಗಿದೆ.