ವಿಪತ್ತುಗಳು ಆಕಸ್ಮಿಕವಾಗಿ ಘಟಿಸುವುದರಿಂದ ತಕ್ಷಣ ಸ್ಪಂದಿಸಿ, ಜನ, ಪ್ರಾಣಿ, ಪಕ್ಷಿಗಳ ಪ್ರಾಣ, ಆಸ್ತಿ-ಪಾಸ್ತಿಗಳನ್ನು ರಕ್ಷಿಸಲು ವಿಪತ್ತು ನಿರ್ವಹಣೆಯ ಅಣುಕು ಪ್ರದರ್ಶನಗಳು ಸಹಾಯಕವಾಗುತ್ತವೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಹೇಳಿದರು

ಧಾರವಾಡ: ವಿಪತ್ತುಗಳು ಆಕಸ್ಮಿಕವಾಗಿ ಘಟಿಸುವುದರಿಂದ ತಕ್ಷಣ ಸ್ಪಂದಿಸಿ, ಜನ, ಪ್ರಾಣಿ, ಪಕ್ಷಿಗಳ ಪ್ರಾಣ, ಆಸ್ತಿ-ಪಾಸ್ತಿಗಳನ್ನು ರಕ್ಷಿಸಲು ವಿಪತ್ತು ನಿರ್ವಹಣೆಯ ಅಣುಕು ಪ್ರದರ್ಶನಗಳು ಸಹಾಯಕವಾಗುತ್ತವೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಹೇಳಿದರು.

ಶುಕ್ರವಾರ ರಾಯಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಎಚ್.ಪಿ.ಸಿ.ಎಲ್. ಆಯಿಲ್ ಘಟಕದಲ್ಲಿ ಜಿಲ್ಲಾಡಳಿತದಿಂದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಹಾಗೂ ವಿಜಯವಾಡದ ಎನ್‍ಡಿಆರ್‌ಎಫ್‌ ತಂಡದ ಸಹಯೋಗದಲ್ಲಿ ಆಯೋಜಿಸಿದ್ದ ಗ್ಯಾಸ್ ಸೋರಿಕೆ ಅವಘಡ ತಡೆಗಟ್ಟುವ ಅಣುಕು ಪ್ರದರ್ಶನ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿವಿಧ ರೀತಿಯಲ್ಲಿ ವಿಪತ್ತುಗಳು ಆಕಸ್ಮಿಕವಾಗಿ ಘಟಿಸಿದರೂ ಸಂಬಂಧಿಸಿದ ಇಲಾಖೆಗಳು ತಕ್ಷಣ ಸಮನ್ವಯ ಸಾಧಿಸಿ, ಪರಿಸ್ಥಿತಿ ನಿಯಂತ್ರಣಕ್ಕೆ ತರಬೇಕು. ವಿಪತ್ತು ನಿರ್ವಹಣೆಯಲ್ಲಿ ಭಾಗವಹಿಸುವ ಸಿಬ್ಬಂದಿಗೆ ಅಗತ್ಯ ತರಬೇತಿ ಹಾಗೂ ಭಾಗವಹಿಸುವ ಕುರಿತು ಪುನರ್ ಮನನ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.

ಅಪಘಾತ, ಟ್ಯಾಂಕರ್ ಸೋರಿಕೆ, ಅಗ್ನಿ ಅವಘಡ, ನೆರೆ ಮುಂತಾದ ವಿಪತ್ತುಗಳ ನಿರ್ವಹಣೆಗೆ ತಾಂತ್ರಿಕ ಮತ್ತು ಆಧುನಿಕ ಉಕರಣಗಳು ಹಾಗೂ ಕೌಶಲ್ಯಭರಿತ ಮಾನವ ಸಂಪನ್ಮೂಲ ಅಗತ್ಯವಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ವಿವಿಧ ರೀತಿಯ ಜೀವ ರಕ್ಷಕ ಉಪಕರಣ, ಸಾಧನ, ಸಲಕರಣೆಗಳನ್ನು ಅಗ್ನಿಶಾಮಕ ಇಲಾಖೆಗೆ ನೀಡಲಾಗಿದೆ ಎಂದರು.

ಮುಖ್ಯವಾಗಿ ಕಂದಾಯ, ಪೊಲೀಸ್, ಕೈಗಾರಿಕೆ ಇಲಾಖೆ, ಆರೋಗ್ಯ, ಸಾರಿಗೆ ಮತ್ತು ಎನ್.ಡಿ.ಆರ್‌.ಎಫ್. ಅಗ್ನಿಶಾಮಕ ಇಲಾಖೆಗಳು ಪರಸ್ಪರ ಸಂಪರ್ಕ ಮತ್ತು ಸಮನ್ವಯದಿಂದ ಕೆಲಸ ಮಾಡಬೇಕು. ವಿಪತ್ತು ಸಂಭಿವಿಸಿದಾಗ ಹೆಚ್ಚಿನ ಅನಾಹುತ, ಹಾನಿ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಸಿಲಿಂಡರ್ ಬ್ಲಾಸ್ಟ್ ಪ್ರಕರಣಗಳು ಹೆಚ್ಚುತ್ತಿದ್ದು, ಸಿಲಿಂಡರ್ ಬಳಕೆ ಕುರಿತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಮತ್ತು ಶಾಲಾ ಕಾಲೇಜುಗಳಲ್ಲಿ ತಿಳಿವಳಿಕೆ, ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಭುವನೇಶ ಪಾಟೀಲ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಹಾಯಕ ನಿರ್ದೇಶಕ ರಾಜಶೇಖರ ಕಂಟೆಪ್ಪಗೌಡರ ವಂದಿಸಿದರು. ಅಣುಕು ಪ್ರದರ್ಶನದ ಸಂದರ್ಭದಲ್ಲಿ ಜಿಲ್ಲಾ ಎಸ್ಪಿ ಗುಂಜನ್ ಆರ್ಯ, ಎನ್.ಡಿ.ಆರ್‌.ಎಫ್‌. ತಂಡದ ಕಮಾಂಡೆಂಟ್ ಪ್ರದೀಪ್ ಕುಮಾರ, ಕಾರ್ಖಾನೆಗಳ ಜಂಟಿ ನಿರ್ದೇಶಕ ರವೀಂದ್ರನಾಥ ರಾಠೋಡ, ವೆಂಕಟೇಶ ರಾಠೋಡ, ಹೆಸ್ಕಾಂ ಅಧೀಕ್ಷಕ ಅಭಿಯಂತರ ಕೆ.ವಿ. ಪಾಗಿ, ರಾಯಪುರ ಎಚ್.ಪಿ.ಸಿ.ಎಲ್. ಮುಖ್ಯಸ್ಥ ದೇವ ಧೃವ, ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ, ತಹಸೀಲ್ದಾರ ಡಾ. ಡಿ.ಎಚ್. ಹೂಗಾರ, ವೈದ್ಯಾಧಿಕಾರಿ ಡಾ ಕೆ.ಎನ್.ತನುಜಾ, ಅಗ್ನಿಶಾಮಕ ಅಧಿಕಾರಿ ಬಸವರಾಜ ಕರಿಲಿಂಗಣ್ಣನವರ, ವೆಂಕಟೇಶ ಬುಳ್ಳಾ ಇದ್ದರು. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸದಸ್ಯರು, ಸಂಬಂಧಿಸಿದ ಅಧಿಕಾರಿಗಳು ಭಾಗವಹಿಸಿದ್ದರು.