ಸಾರಾಂಶ
ರೋಣ: ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎನ್ನುವ ರಾಜ್ಯ ಕಾಂಗ್ರೆಸ್ ಕಳೆದ 10 ತಿಂಗಳಿನಿಂದ ಒಂದೇ ಒಂದು ಅಭಿವೃದ್ಧಿ ಕೆಲಸ ಕೈಗೊಂಡಿಲ್ಲ. ಈ ಚುನಾವಣೆಯಲ್ಲೂ ಮತ್ತೆ ಗ್ಯಾರಂಟಿ ಕಾರ್ಡ್ ಹಿಡಿದುಕೊಂಡು ಮೋಸ ಮಾಡಲು ಕಾಂಗ್ರೆಸ್ ಬರುತ್ತಿದ್ದು, ಜನತೆ ಆ ಕಾರ್ಡ್‌ನ್ನು ಹರಿದು ಅವರ ಮುಖಕ್ಕೆ ಎಸೆಯಿರಿ ಎಂದು ಮಾಜಿ ಸಿಎಂ, ಹಾವೇರಿ- ಗದಗ ಲೋಕಸಭೆ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಜನತೆಗೆ ಕರೆನೀಡಿದರು.
ತಾಲೂಕಿನ ಕುರಹಟ್ಟಿ ಗ್ರಾಮದಲ್ಲಿ ಹಾವೇರಿ - ಗದಗ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜರುಗಿದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.ಕಾಂಗ್ರೆಸ್ ನೆಲೆ ಕಾಣದ ಪಕ್ಷವಾಗಿದೆ. ಜನರ ಬಳಿ ಬರಲು ಕಾಂಗ್ರೆಸ್ಸಿಗೆ ಯಾವುದೇ ದಾರಿ ಇಲ್ಲ. ಗ್ಯಾರಂಟಿ ಮೂಲಕ ಜನರನ್ನು ಮೋಸ ಮಾಡುತ್ತಿದೆ ಎಂದು ಬೊಮ್ಮಾಯಿ ಕಿಡಿಕಾರಿದರು.
ಕೃತಜ್ಞತೆಗೆ ಇದೊಂದು ಅವಕಾಶವಿದೆ: ಕೋವಿಡ್ ಸಂದರ್ಭದಲ್ಲಿ ದೇಶದ 130 ಕೋಟಿಗೂ ಅಧಿಕ ಜನರಿಗೆ ಲಸಿಕೆ ನೀಡಿ ಜೀವ ಉಳಿಸಿದವರು ಮೋದಿ. ಅವರಿಗೆ ಕೃತಜ್ಞತೆ ಸಲ್ಲಿಸಬೇಕಿದೆ. ಒಂತಹ ಅವಕಾಶ ಚುನಾವಣೆ ಮೂಲಕ ಸಿಕ್ಕಿದ್ದು, ಜನತೆ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನ ಮಂತ್ರಿಗಳನ್ನಾಗಿಸುವ ಮೂಲಕ ಕೃತಜ್ಞತೆ ಸಲ್ಲಿಸಬೇಕು ಎಂದರು.ಮಾಜಿ ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಗೃಹಲಕ್ಷ್ಮೀ ಹಣ ಇನ್ನೂ ಹಲವು ಮಹಿಳೆಯರಿಗೆ ದೊರೆತಿಲ್ಲ. ಪ್ರಗತಿಯಲ್ಲಿದೆ ಎಂದು ತೋರಿಸುತ್ತದೆ. ಕಾಂಗ್ರೆಸ್ ಗ್ಯಾರಂಟಿಗಳಿಗೆ ಜನರು ಮರಳಾಗಬೇಡಿ. ಅಭಿವೃದ್ಧಿಯ ಬಗ್ಗೆ ಕಾಳಜಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವನ್ನು ನೋಡಿ ಮತ ನೀಡಿ ಎಂದರು.
ತಾಲೂಕಿನ ಸವಡಿ, ಚಿಕ್ಕಮಣ್ಣೂರ, ಕುರಹಟ್ಟಿ, ಕೊತಬಾಳ, ಹಿರೇಹಾಳ, ಮಾಡಲಗೇರಿ, ನೈನಾಪುರ, ಮುಶಿಗೇರಿ, ಶಾಂತಗೇರಿ, ಇಟಗಿ ಮುಂತಾದ ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಜರುಗಿತು.ಜಿಪಂ ಮಾಜಿ ಅಧ್ಯಕ್ಷ ನಿಂಗಪ್ಪ ಕೆಂಗಾರ, ಅಶೋಕ ನವಲಗುಂದ, ಬಿಜೆಪಿ ರೋಣ ಮಂಡಲ ಅಧ್ಯಕ್ಷ ಮುತ್ತಣ್ಣ ಕಡಗದ, ಬಸವರಾಜ ಕೊಟಗಿ, ಬಿ.ಎಂ. ಸಜ್ಜನ, ಹೊಳೆಆಲೂರ ಮಂಡಲ ಅಧ್ಯಕ್ಷ ಮುತ್ತಣ್ಣ ಜಂಗಣ್ಣವರ, ಅಶೋಕ ವನ್ನಾಲ, ಬಸವಂತಪ್ಪ ತಳವಾರ ಸುರೇಶಗೌಡ ಪಾಟೀಲ, ಶೇಖರಗೌಡ ಪಾಟೀಲ, ಅನಿಲ ಪಲ್ಲೇದ, ಶಿವಾನಂದ ಜಿಡ್ಡಿಬಾಗಿಲ, ಮಂಜುನಾಥ ಕೊಪ್ಪದ, ಉಮೇಶ ಪಾಟೀಲ, ಶರಣಪ್ಪ ಪ್ಯಾಟಿ, ಮಲ್ಲು ಮಾದರ, ಇಂದಿರಾ ತೇಲಿ, ಮಜುರಪ್ಪ ಶಾಂತಗೇರಿ, ತಾಪಂ ಮಾಜಿ ಸದಸ್ಯ ಶೇಖರಗೌಡ ಚನ್ನಪ್ಪಗೌಡ್ರ ಉಪಸ್ಥಿತರಿದ್ದರು.