ಶಿಕ್ಷಕನ ಬೀಳ್ಕೊಡುಗೆ ವೇಳೆ ವಿದ್ಯಾರ್ಥಿಗಳ ಕಣ್ಣೀರು

| Published : Dec 15 2023, 01:30 AM IST

ಶಿಕ್ಷಕನ ಬೀಳ್ಕೊಡುಗೆ ವೇಳೆ ವಿದ್ಯಾರ್ಥಿಗಳ ಕಣ್ಣೀರು
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕನ ಬೀಳ್ಕೊಡುಗೆ ವೇಳೆ ವಿದ್ಯಾರ್ಥಿಗಳ ಕಣ್ಣೀರು

ಕನ್ನಡಪ್ರಭವಾರ್ತೆ ಕೊಲ್ಹಾರ

ತಾಲೂಕಿನ ಕುಪಕಡ್ಡಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಶಿಕ್ಷಕ ಆಶಿಫ್ ಮಕಾನದಾರ ವರ್ಗಾವಣೆಯಾಗಿದ್ದು, ಅವರ ಬೀಳ್ಕೊಡುಗೆ ಸಮಾರಂಭದ ವೇಳೆ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಗುರುವಾರ ಭಾವುಕರಾದರು.

ಶಾಲೆಯಲ್ಲಿ ಮೂರು ವರ್ಷ ಇಂಗ್ಲಿಷ್‌ ವಿಷಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ತವರು ಜಿಲ್ಲೆ ಬಾಗಲಕೋಟೆಗೆ ಜಿಪಿಟಿ ಶಿಕ್ಷಕರಾಗಿ ನೇಮಕಗೊಂಡು ವರ್ಗಾವಣೆಯಾಗಿದ್ದರು. ಶಾಲೆಯಲ್ಲಿ ಕ್ರೀಯಾಶೀಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಕ್ಕಳೊಂದಿಗೆ ವಿವಿಧ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಿದ್ದರು. ತಮ್ಮ ನೆಚ್ಚಿನ ಗುರುಗಳನ್ನು ವಿದ್ಯಾರ್ಥಿಗಳು ಭಾರವಾದ ಹೃದಯದಿಂದ ಬೀಳ್ಕೊಟ್ಟರು. ವಿದ್ಯಾರ್ಥಿಗಳು ಕಣ್ಣೀರು ಹಾಕುತ್ತ ಅವರ ಕಾಲು ಹಿಡಿದು ಅಭಿಮಾನ ತೋರಿದರು. ಅವರೊಂದಿಗೆ ಶಿಕ್ಷಕರೂ ಸಹ ಬಾವುಕರಾಗಿ ಕಣ್ಣೀರಾದರು.

ಶಾಲೆಯ ಶಿಕ್ಷಕ ಹಣಮಂತ ಬಿರಾದಾರ ಹಾಗೂ ಶಿಕ್ಷಕಿ ಹೇಮಾವತಿ ಮಾತನಾಡಿ, 200 ಮಕ್ಕಳಿರುವ ನಮ್ಮ ಶಾಲೆಯಲ್ಲಿ ಶಿಕ್ಷಕ ಆಶಿಫ್‌ ಮಕಾನದಾರ ಸದಾ ಶಾಲೆ ಹಾಗೂ ಮಕ್ಕಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ನಾವೆಲ್ಲ ಈ ಶಾಲೆಯಲ್ಲಿ ಒಂದೇ ಕುಟುಂಬದ ಸದಸ್ಯರಂತೆ ಕಾರ್ಯನಿರ್ವಹಿಸುತ್ತಿದ್ದೆವು. ಅವರ ವರ್ಗಾವಣೆಯಿಂದ ಬೇಸರ ತಂದಿದೆ ಎಂದರು.

ಮುಖ್ಯ ಶಿಕ್ಷಕ ಸಿದ್ದು ಕೊಟ್ಯಾಳ ಮಾತನಾಡಿ, ಒಬ್ಬ ಶಿಕ್ಷಕನಿಗೆ ನಿಜವಾದ ಆಸ್ತಿ ಎಂದರೆ ಅದು ಮಕ್ಕಳು. ಮಕಾನದಾರ ವರ್ಗಾವನೆಯಿಂದ ಶಾಲೆಯ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ದುಃಖವನ್ನುಂಟು ಮಾಡಿದೆ. ಅದಕ್ಕೆ ಕಾರಣ ಅವರು ನಮ್ಮೆಲ್ಲರ ಮೇಲೆ ಇಟ್ಟ ಪ್ರೀತಿ, ಉತ್ತಮ ಕಲಿಕೆ ಹಾಗೂ ಒಡನಾಟ ಎಂದರು. ಮಕ್ಕಳ ಪ್ರೀತಿ ಕಂಡು ಮೂಕವಿಸ್ಮತರಾದ ಮಕಾನದಾರವರಿಗೆ ಆಧುನಿಕ ಯುಗದಲ್ಲಿಯೂ ಗುರು ಶಿಷ್ಯರ ಸಂಬಂಧದ ಮಹತ್ವ ತೋರಿಸುತ್ತದೆ. ಪ್ರಾಮಾಣಿಕ ಶಿಕ್ಷಕರಿಗೆ ಇದಕ್ಕಿಂತ ದೊಡ್ಡ ಪ್ರಶಸ್ತಿ ಬೇಕೆ ? ಎಂದರು.

ಶಿಕ್ಷಕರಾದ ಆನಂದ ಹೊಲ್ದೂರ, ಸಾಂತವೀರ ನಾಗರಳ್ಳಿ, ಬಾಬು ಪವಾರ, ಕವಿತಾ ಹಿರೇಮಠ, ರೇಣುಕಾ ಗಣಿ ಸೇರಿ ಸಿಬ್ಬಂದಿ ಉಪಸ್ಥಿತರಿದ್ದು ಶುಭ ಕೋರಿದರು.