ರಾಜ್ಯದಲ್ಲಿ 72 ವೈದ್ಯಕೀಯ ಕಾಲೇಜುಗಳಿದ್ದು, ಲಕ್ಷಾಂತರ ಸಂಖ್ಯೆ ಯುವ ವೈದ್ಯರು ವೃತ್ತಿಗೆ ಬರುತ್ತಿದ್ದಾರೆ. ಕಲಿಕಾ ಹಾಗೂ ಚಿಕಿತ್ಸಾ ಗುಣಮಟ್ಟದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಿದೆ. ಆಧುನಿಕ ತಂತ್ರಜ್ಞಾನದ ಅರಿವು ಹೊಂದುವ ಜತೆಗೆ ಚಿಕಿತ್ಸೆಯಲ್ಲೂ ನೈತಿಕತೆ ಮೂಲಕ ಸಮಾಜಕ್ಕೆ ಮಾದರಿಯಾಗಿರಬೇಕು.

ಹುಬ್ಬಳ್ಳಿ:

ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನ, ಸೈದ್ಧಾಂತಿಕ ಹಾಗೂ ಸಾಕ್ಷಿ ಆಧರಿತ ಸೇವೆ ಅತ್ಯಂತ ಪ್ರಮುಖವಾಗಿದ್ದು, ವೈದ್ಯ ವಿದ್ಯಾರ್ಥಿಗಳು ಈ ಮೂರನ್ನು ಅಳವಡಿಸಿಕೊಂಡಲ್ಲಿ ವೈದ್ಯ ವೃತ್ತಿಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವೆಂದು ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್‌ ಸಿ ಹೇಳಿದರು.

ನಗರದ ಕೆಎಂಸಿ-ಆರ್ ಐ ಕಾಲೇಜು ಸಭಾಂಗಣದಲ್ಲಿ ಶಸ್ತ್ರಚಿಕಿತ್ಸಾ ವಿಭಾಗ ಹಾಗೂ ಅಸೋಸಿಯೇಷನ್ ಆಫ್‌ ಮಿನಿಮಲ್ ಅಕ್ಸೆಸ್ ಸರ್ಜನ್ಸ್ ಆಫ್‌ ಇಂಡಿಯಾ (ಎಎಂಎಎಸ್ ಐ) ಶುಕ್ರವಾರ ಆಯೋಜಿಸಿದ್ದ ಲ್ಯಾಪ್ ಪ್ರೋ 2026 ಸರ್ಜನ್‌ಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ 72 ವೈದ್ಯಕೀಯ ಕಾಲೇಜುಗಳಿದ್ದು, ಲಕ್ಷಾಂತರ ಸಂಖ್ಯೆ ಯುವ ವೈದ್ಯರು ವೃತ್ತಿಗೆ ಬರುತ್ತಿದ್ದಾರೆ. ಕಲಿಕಾ ಹಾಗೂ ಚಿಕಿತ್ಸಾ ಗುಣಮಟ್ಟದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಿದೆ. ಆಧುನಿಕ ತಂತ್ರಜ್ಞಾನದ ಅರಿವು ಹೊಂದುವ ಜತೆಗೆ ಚಿಕಿತ್ಸೆಯಲ್ಲೂ ನೈತಿಕತೆ ಮೂಲಕ ಸಮಾಜಕ್ಕೆ ಮಾದರಿಯಾಗಿರಬೇಕು. ಆಗ ಮಾತ್ರ ಉತ್ತಮ ವೈದ್ಯರಾಗಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ವಿಶ್ವದಲ್ಲೇ ಭಾರತದ ವೈದ್ಯಕೀಯ ಕ್ಷೇತ್ರದಲ್ಲಿ ಅಪರಿಮಿತ ಜ್ಞಾನ, ಅತ್ಯುನ್ನತ ಕೌಶಲ್ಯ ಮಾದರಿಯಾಗಿದೆ. ಆದರೆ, ಅದರ ದತ್ತಾಂಶ ಸಂಗ್ರಹ ಮತ್ತು ದಾಖಲೆಗಳ ಮುದ್ರಣ ಆಗುತ್ತಿಲ್ಲ. ಆದರೆ, ವಿದೇಶದಲ್ಲಿ ಈ ಕೆಲಸ ವ್ಯವಸ್ಥಿತ ನಡೆಯುತ್ತಿದೆ. ಹಾಗಾಗಿ ವಿದೇಶದ ವೈದ್ಯಕೀಯ ಸಾಧನೆಗಳು ಬೆಳಕಿಗೆ ಬರುತ್ತಿವೆ ಎಂದರು.

ಖ್ಯಾತ ಲ್ಯಾಪ್ರೋ ಸ್ಕೋಪಿ ಸರ್ಜನ್ ಡಾ.ಸಿ. ಪಳನಿವೇಲು ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಸರ್ಜರಿಗೆ ಮಾನ್ಯತೆ ಹೆಚ್ಚಿದೆ. ಇದರ ಜತೆಗೆ ಸಂಶೋಧನೆಗಳಿಗೂ ಆದ್ಯತೆ ನೀಡಲಾಗುತ್ತಿದೆ. ತಂತ್ರಜ್ಞಾನ ಸದ್ಬಳಕೆಯಿಂದ ಹೊಸ ಆವಿಷ್ಕಾರ ಸಾಧ್ಯ. ಸಂಶೋಧನೆ ಆಧರಿತ ಸೇವೆಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು. ಕೆಎಂಸಿ ಆರ್‌ಐ ನಿರ್ದೇಶಕ ಡಾ. ಈಶ್ವರ ಹೊಸಮನಿ ಪ್ರಾಸ್ತಾವಿಕ ಮಾತನಾಡಿ, ರೋಗಿಗಳ ಆರೈಕೆ ಜತೆಗೆ ಕೌಶಲ ಅಭಿವೃದ್ಧಿ ಮುಖ್ಯವಾಗುತ್ತದೆ. ಆಧುನಿಕ ತಂತ್ರಜ್ಞಾನದ ಅರಿವು ಮೂಡಿಸಲು ಕೆಎಂಸಿಆರ್‌ಐ ಶ್ರಮಿಸುತ್ತಿದೆ ಎಂದರು.ಡಾ. ಸಿ. ಪಳನಿವೇಲು ಅವರ ಆತ್ಮಕಥೆ ‘ಗಟ್ಸ್’ ಕನ್ನಡ ಅನುವಾದಿತ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಡಾ. ಕಸ್ತೂರಿ ಡೋಣಿಮಠ, ಡಾ. ವೀಣಾ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ. ಸೂರ್ಯಕಾಂತ ಕಲ್ಲೂರಾಯ, ಮುರುತ್ ಪಾಂಡಿಯನ್, ರೋಶನ್ ಶೆಟ್ಟಿ, ವಸಂತ ಶೆಟ್ಟಿ, ಡಾ. ಕೆ.ಜಿ. ಬ್ಯಾಕೋಡಿ, ಡಾ. ದಿವಾಕರ ಗಡ್ಡಿ, ಡಾ. ನಾಸ್ ಜಾಹಾನ್ ಶೇಖ್, ವಿಜಯ ಕಾಮತ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ಎರಡು ದಿನಗಳ ಸಮಾವೇಶದಲ್ಲಿ ಸರ್ಜರಿ ಕ್ಷೇತ್ರದಲ್ಲಿ ಅಗುತ್ತಿರುವ ಹೊಸ ಬೆಳವಣಿಗೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಲ್ಯಾಪ್ರೋಸ್ಕೋಪಿ ಕೀ ಹೋಲ್ ಸರ್ಜರಿ ಕುರಿತು ತಜ್ಞ ವೈದ್ಯರು, ಪರಿಣಿತರಿಂದ ಉಪನ್ಯಾಸ ಹಾಗೂ ಸಂವಾದ ನಡೆಯಲಿದೆ. ಅಲ್ಲದೇ ಲ್ಯಾಪ್ರೋಸ್ಕೋಪಿ ಸರ್ಜರಿ ಮಾಡುವ ನೇರ ಪ್ರದರ್ಶನ ಮಾಡಲಾಗುತ್ತಿದೆ.