ತಂತ್ರಜ್ಞಾನದಿಂದ ಅಧ್ಯಾಪನ ಆಧುನಿಕಗೊಳ್ಳಲಿ: ಐಐಟಿ ಧಾರವಾಡದ ಪ್ರೊ.ಕೆ.ವಿ.ಜಯಕುಮಾರ್‌

| Published : Jan 03 2025, 12:31 AM IST

ತಂತ್ರಜ್ಞಾನದಿಂದ ಅಧ್ಯಾಪನ ಆಧುನಿಕಗೊಳ್ಳಲಿ: ಐಐಟಿ ಧಾರವಾಡದ ಪ್ರೊ.ಕೆ.ವಿ.ಜಯಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ತಂತ್ರಜ್ಞಾನಗಳ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ಅಧ್ಯಾಪನ ಕ್ರಮವನ್ನು ಮತ್ತಷ್ಟು ಆಧುನಿಕಗೊಳಿಸಿಕೊಳ್ಳಿ ಎಂದು ಐಐಟಿ ಧಾರವಾಡದ ಸಲಹೆಗಾರ ಪ್ರೊ.ಕೆ.ವಿ.ಜಯಕುಮಾರ್‌ ಕರೆ ನೀಡಿದರು. ಶಿವಮೊಗ್ಗದಲ್ಲಿ ಆಧುನಿಕ ತಂತ್ರಜ್ಞಾನ ಮೂಲಕ ಗುಣಮಟ್ಟದ ಶಿಕ್ಷಣ ಅವಕಾಶ ಮತ್ತು ಸವಾಲುಗಳು ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಆಧುನಿಕ ತಂತ್ರಜ್ಞಾನ ಶಿಕ್ಷಣ ಅವಕಾಶ, ಸವಾಲುಗಳ ಕುರಿತ ವಿಚಾರ ಸಂಕಿರಣ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ತಂತ್ರಜ್ಞಾನಗಳ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ಅಧ್ಯಾಪನ ಕ್ರಮವನ್ನು ಮತ್ತಷ್ಟು ಆಧುನಿಕಗೊಳಿಸಿಕೊಳ್ಳಿ ಎಂದು ಐಐಟಿ ಧಾರವಾಡದ ಸಲಹೆಗಾರ ಪ್ರೊ.ಕೆ.ವಿ.ಜಯಕುಮಾರ್‌ ಕರೆ ನೀಡಿದರು.

ನಗರದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಗುರುವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಆಧುನಿಕ ತಂತ್ರಜ್ಞಾನ ಮೂಲಕ ಗುಣಮಟ್ಟದ ಶಿಕ್ಷಣ ಅವಕಾಶ ಮತ್ತು ಸವಾಲುಗಳು ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

21 ನೇ ಶತಮಾನದ ವಿದ್ಯಾರ್ಥಿಗಳಿಗೆ 20 ನೇ ಶತಮಾನದ ಹಳೆಯ ಶಿಕ್ಷಣ ಪದ್ಧತಿಯಲ್ಲಿಯೇ ಅಧ್ಯಾಪನ ಮಾಡಲಾಗುತ್ತಿದೆ. ತರಗತಿಗಳಲ್ಲಿ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಓದುವುದು ತಾಂತ್ರಿಕ ಅಧ್ಯಾಪನವಲ್ಲ‌. ಅದರ ಆಚೇಗಿನ ತಾಂತ್ರಿಕ ಆವಿಷ್ಕಾರಗಳನ್ನು ಬಳಸಿ ವಿದ್ಯಾರ್ಥಿಗಳನ್ನು ತಲುಪಲು ಶಿಕ್ಷಕ ಸಮೂಹ ಆಸಕ್ತಿ ತೋರಬೇಕಿದೆ ಎಂದು ಹೇಳಿದರು.

ಜಗತ್ತಿನಲ್ಲಿ 250 ಮಿಲಿಯನ್ ವಿದ್ಯಾರ್ಥಿಗಳು ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ಓದುತ್ತಿದ್ದಾರೆ. ಇಂಟರ್ನೆಟ್ ಮೂಲಕ ಎಂಥಹ ವಿಚಾರಗಳನ್ನು ತಿಳಿಯಬಹುದು ಎಂಬ ಅಂಧತ್ವದಲ್ಲಿದ್ದಾರೆ. ತಾವು ನೋಡುವ ಅಪ್ಲಿಕೇಶನ್ ತೆರೆದುಕೊಳ್ಳಲು ಸ್ವಲ್ಪ ತಡವಾದರು ಕಾಯುವ ತಾಳ್ಮೆ ಯುವ ಸಮೂಹದಲ್ಲಿ ಇಲ್ಲ. ಇಂತಹ ಸಂದರ್ಭದಲ್ಲಿ ಶಿಕ್ಷಕರು, ಹೊಸ ತಾಂತ್ರಿಕತೆಯ ಮೂಲಕ ಶೈಕ್ಷಣಿಕ ಅಭ್ಯಾಸದತ್ತ ವಿದ್ಯಾರ್ಥಿಗಳನ್ನು ಸೆಳೆಯಬೇಕು ಎಂದು ಮಾಹಿತಿ ನೀಡಿದರು.

ಮೊಬೈಲ್‌ನಲ್ಲಿ ಬರೆಯುವ ಮೆಸೇಜ್ ಗಳ ಮಾದರಿಯಲ್ಲಿ ಪರೀಕ್ಷೆಯಲ್ಲಿ ಉತ್ತರಗಳನ್ನು ಬರೆಯುತ್ತಿದ್ದಾರೆ. ತಂತ್ರಜ್ಞಾನದಿಂದ ಏನನ್ನು ಕಲಿಯಬೇಕು ಎಂಬ ಗೊಂದಲದ ನಡುವೆ, ವಿದ್ಯಾರ್ಥಿಗಳನ್ನು ಸರಿದಾರಿಯಲ್ಲಿ ನಡೆಸುವ, ಅವರಿಗೆ ಬರವಣಿಗೆ, ಶಬ್ದಕೋಶಗಳ ಬಳಕೆ, ವ್ಯಾಖ್ಯಾನದಂತಹ ಕೌಶಲ್ಯತೆಗಳನ್ನು ತುಂಬುವ ಕಾರ್ಯ ಶಿಕ್ಷಕರಿಂದ ಆಗಬೇಕು. ಮೂಲಭೂತವಾಗಿ ಇದನ್ನು ಕಲಿಸದಾತ ಕೆಟ್ಟ ಶಿಕ್ಷಕನಾಗಿ ವಿದ್ಯಾರ್ಥಿಗಳ ಎದುರು ಗುರುತಿಸಿಕೊಂಡು ಬಿಡುತ್ತಾರೆ ಎಂದು ತಿಳಿಸಿದರು.

ಭಾರತೀಯರಷ್ಟು ಪ್ರಬುದ್ಧವಾಗಿ ಇಂಗ್ಲಿಷ್ ಮಾತನಾಡಬಲ್ಲ ಶಕ್ತಿ ವಿದೇಶಿಗರಲ್ಲಿ ಇಲ್ಲ. ಯಾರು ಮಾತೃಭಾಷೆಯಲ್ಲಿ ಹೆಚ್ಚು ಪ್ರಬುದ್ಧರಾಗಿರುತ್ತಾರೆ, ಅಂತಹ ವ್ಯಕ್ತಿ ಯಾವುದೇ ಭಾಷೆಯನ್ನು ಸುಲಲಿತವಾಗಿ ಕಲಿಯಬಹುದು. ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು, ಹೊಸತನದ ಕಲಿಯಲು ಯಾರು ನಿಮ್ಮನ್ನು ತಡೆಯುವುದಿಲ್ಲ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ತಂತ್ರಜ್ಞಾನದ ಅತಿಯಾದ ಅವಲಂಬನೆ ವಿನಾಶಕ್ಕೆ ಕಾರಣವೂ ಹೌದು. ಆಧುನಿಕತೆಯ ಒಳಗೆ ಮಾನವೀಯ ಸಂಬಂಧಗಳು ಕಣ್ಮರೆಯಾಗುತ್ತಿದೆ. ಆನ್ಲೈನ್ ತರಗತಿ ಮೂಲಕ ವಿದ್ಯಾರ್ಥಿಗಳಿಗೆ ಮಾರಕವಾಗಿದ್ದೆ ಹೆಚ್ಚು ಎಂದರು.

ಕುವೆಂಪು ವಿವಿ ಶಿಕ್ಷಣಶಾಸ್ತ್ರ ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಜಗನ್ನಾಥ ಡಾಂಗೆ ಮಾತನಾಡಿ, ತಂತ್ರಜ್ಞಾನದ ಬಳಕೆ ನಮಗೆ ತಿಳಿಯದಂತೆ ನೆನಪಿನ ಶಕ್ತಿ ಕುಂದುತ್ತಾ ಹೋಗುತ್ತದೆ‌. ನಮಗೆ ಅರಿವೆಯಿಲ್ಲದಂತೆ ತಂತ್ರಜ್ಞಾನದ ದಾಸರಾಗಿ ಕುಗ್ಗಿದ್ದೆವೆ. ಹೊಸ ತಂತ್ರಜ್ಞಾನ ಬಂದಾಗ ಅದನ್ನು ಬಳಸಿ ಎಂದು ಹೇಳುವ ವ್ಯವಸ್ಥೆಯು, ಮುಂದೆ ಅದೇ ತಂತ್ರಜ್ಞಾನದಿಂದ ದೂರವಿರಿ ಎನ್ನುವಾಗ ತಾಂತ್ರಿಕತೆ ಮಾರಕವೊ, ಪೂರಕವೊ ಎಂಬ ವಿಮರ್ಶೆ ಮಾಡಬೇಕಿದೆ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಶಿಕ್ಷಣಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.ಶೀಲಾ.ಜಿ, ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಕೆ.ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕ ಡಾ.ಎನ್.ಡಿ.ಮಂಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಿಕ್ಷಣಾರ್ಥಿ ಸುಬ್ರಹ್ಮಣ್ಯ ಪ್ರಾರ್ಥಿಸಿ, ಪ್ರಾಧ್ಯಾಪಕ ಡಾ‌.ಕೆ.ಪ್ರಕಾಶ ಸ್ವಾಗತಿಸಿ, ಸಹಾಯಕ ಪ್ರಾಧ್ಯಾಪಕಿ ಸಿ.ಇ.ಲಾವಣ್ಯ ನಿರೂಪಿಸಿದರು.