ಮಾನವೀಯ ಸಿದ್ಧಾಂತಕ್ಕೆ ಮಹತ್ವ ನೀಡಿದ ತೇಜಸ್ವಿ: ಗಣೇಶ

| Published : Nov 18 2025, 01:00 AM IST

ಮಾನವೀಯ ಸಿದ್ಧಾಂತಕ್ಕೆ ಮಹತ್ವ ನೀಡಿದ ತೇಜಸ್ವಿ: ಗಣೇಶ
Share this Article
  • FB
  • TW
  • Linkdin
  • Email

ಸಾರಾಂಶ

ಮನುಷ್ಯ ಎಷ್ಟೇ ಬೆಳೆದರೂ ಮಾನವೀಯತೆಗೆ ಮಹತ್ವ ಕೊಡಬೇಕೆಂದು ತೇಜಸ್ವಿಯವರು ತಮ್ಮ ಸಾಹಿತ್ಯ ಕೃತಿಗಳ ಮೂಲಕ ಪ್ರತಿಪಾದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹೊನ್ನಾವರ

ಮನುಷ್ಯ ಎಷ್ಟೇ ಬೆಳೆದರೂ ಮಾನವೀಯತೆಗೆ ಮಹತ್ವ ಕೊಡಬೇಕೆಂದು ತೇಜಸ್ವಿಯವರು ತಮ್ಮ ಸಾಹಿತ್ಯ ಕೃತಿಗಳ ಮೂಲಕ ಪ್ರತಿಪಾದಿಸಿದ್ದಾರೆ ಎಂದು ಸಾಹಿತಿ ಗಣೇಶ ಪಿ. ನಾಡೋರ ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಡಾ. ದಿನಕರ ದೇಸಾಯಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಕೆರೆಕೋಣ ಮತ್ತು ಕುಮುದಾ ಅಭಿವೃದ್ಧಿ ಸಂಸ್ಥೆ ಇವರು ಕೆರೆಕೋಣ ಗ್ರಂಥಾಲಯದಲ್ಲಿ ಆಯೋಜಿಸಿದ್ದ ಪೂರ್ಣಚಂದ್ರ ತೇಜಸ್ವಿ - ಒಂದು ಮೆಲುಕು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾನವೀಯ ಅಂತಃಕರಣ ಹೊಂದಿರುವ ವಿರಳ ಸಾಹಿತಿಗಳಲ್ಲಿ ಒಬ್ಬರಾದ ತೇಜಸ್ವಿಯವರು ಮಾನವೀಯ ಸಿದ್ಧಾಂತಕ್ಕೆ ಮಹತ್ವ ನೀಡಿದ್ದಾರೆ ಎಂದರು.ಪೂರ್ಣಚಂದ್ರ ತೇಜಸ್ವಿ ಕುರಿತು ಉಪನ್ಯಾಸ ನೀಡಿದ ಸಾಹಿತಿ ವಿನಾಯಕ ನಾಯ್ಕ, ತೇಜಸ್ವಿಯವರ ಬರಹ ಸರಳವಾಗಿದ್ದು ಮಕ್ಕಳು, ಯುವಕರಿಂದ ಹಿರಿಯರಿಗೂ ತಟ್ಟುತ್ತದೆ. ಕುತೂಹಲ ಮೂಡಿಸಿ ತಣಿಸುತ್ತದೆ. ತಮ್ಮ ಸಾಹಿತ್ಯದ ಮೂಲಕ ಪರಿಸರ ರಕ್ಷಣೆ ನಮ್ಮ ಧರ್ಮ ಎಂದು ಸಾರಿದ್ದಾರೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಎಚ್. ಗೌಡ ವಹಿಸಿದ್ದರು. ಯಾವುದೇ ಯಶಸ್ಸಿನ ಹಿಂದೆ ಸಾಕಷ್ಟು ಪುಟ್ಟ ಪುಟ್ಟ ಹೆಜ್ಜೆಗಳಿರುತ್ತವೆ. ಇವತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳು ತಾವೂ ತೇಜಸ್ವಿಯವರಂತಾಗಬೇಕು ಎಂದು ಭಾವಿಸಿದರೆ ಅದೇ ಕಾರ್ಯಕ್ರಮದ ಯಶಸ್ಸು ಎಂದರು.ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಎಚ್.ಎಂ. ಮಾರುತಿ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ನಂತರ ಅವರು, ಇಂದಿನ ಆಧುನಿಕ ಯುಗದಲ್ಲಿ ಕಂಪ್ಯೂಟರ್ ಮತ್ತು ಮೊಬೈಲ್ ನಿಂದಾಗಿ ಓದುವಿಕೆ ಕಡಿಮೆಯಾಗುತ್ತಿದೆ. ಓದಿನ ಆಸಕ್ತಿ ಮೂಡಿಸುವಲ್ಲಿ ಗ್ರಂಥಾಲಯಗಳು ಮಹತ್ವದ ಪಾತ್ರ ವಹಿಸಬೇಕು ಎಂದರು.ಗ್ರಾಪಂ ಮಾಜಿ ಅಧ್ಯಕ್ಷ ಕೇಶವ ಶೆಟ್ಟಿ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಅರ್ಚನಾ ಬಿ. ಭಂಡಾರಿ ಮಾತನಾಡಿದರು. ಗ್ರಂಥಾಲಯ ಮೇಲ್ವಿಚಾರಕಿ ಜ್ಯೋತಿ ಶೆಟ್ಟಿ, ತಾಲೂಕಾ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯರಾದ ಜನಾರ್ದನ ಕಾಣಕೋಣಕರ್, ಸಾಧನಾ ಭರ್ಗಿ, ಮಾಸ್ತಿ ಗೌಡ, ಗಣೇಶ ಭಂಡಾರಿ, ನಾಗರಾಜ ಶೆಟ್ಟಿ, ಮಂಜುನಾಥ ಶೆಟ್ಟಿ ಶಿವಾನಂದ ಮರಾಠಿ ಮುಂತಾದವರಿದ್ದರು. ಕೆರೆಕೋಣ ಹಿ.ಪ್ರಾ. ಶಾಲೆಯ ಮಕ್ಕಳು ಹಾಡಿದ ಕನ್ನಡ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ರಾಮ ಭಂಡಾರಿ ಸ್ವಾಗತಿಸಿದರು. ಮಹೇಶ ಭಂಡಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.