ರಾಜ್ಯದ ಅಭಿವೃದ್ಧಿಯಲ್ಲಿ ಮತ್ತು ಆರ್ಥಿಕ ಬೆಳೆವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಪಂಚ ಗ್ಯಾರಂಟಿ ಯೋಜನೆಗಳ ಮಾಹಿತಿಯು ಗ್ಯಾರಂಟಿ ಉತ್ಸವದ ಮೂಲಕ ಪ್ರತಿ ಮನೆಗಳಿಗೆ ಮತ್ತು ವ್ಯಕ್ತಿಗಳಿಗೆ ತಲುಪಬೇಕು.

ಧಾರವಾಡ:

ಜ. 5ರಂದು ಸೃಜನಾ ರಂಗಮಂದಿರದಲ್ಲಿ ಆಯೋಜಿಸಿರುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಪಂಚ ಗ್ಯಾರಂಟಿ ಯೋಜನೆಗಳ ಉತ್ಸವ ಅರ್ಥಪೂರ್ಣ ಹಾಗೂ ಮಾದರಿಯಾಗಿ ರೂಪಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಗ್ಯಾರಂಟಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿಯಲ್ಲಿ ಮತ್ತು ಆರ್ಥಿಕ ಬೆಳೆವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಪಂಚ ಗ್ಯಾರಂಟಿ ಯೋಜನೆಗಳ ಮಾಹಿತಿಯು ಗ್ಯಾರಂಟಿ ಉತ್ಸವದ ಮೂಲಕ ಪ್ರತಿ ಮನೆಗಳಿಗೆ ಮತ್ತು ವ್ಯಕ್ತಿಗಳಿಗೆ ತಲುಪಬೇಕು. ಯೋಜನೆಗಳ ಲಾಭ ಎಲ್ಲ ಅರ್ಹ ನಾಗರಿಕರಿಗೂ ಸಿಗಬೇಕು. ಈ ಹಿನ್ನೆಲೆಯಲ್ಲಿ ಗ್ಯಾರಂಟಿ ಉತ್ಸವವು ಶಿಸ್ತುಬದ್ಧವಾಗಿ ಜರುಗಲು ತಿಳಿಸಿದರು.

ಎಲ್ಲ ಇಲಾಖೆಯ ಅಧಿಕಾರಿಗಳು ಒಗ್ಗಟ್ಟಿನಿಂದ, ಸಮನ್ವಯದೊಂದಿಗೆ ಪರಸ್ಪರ ಚರ್ಚಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಸಾರಿಗೆ, ಊಟದ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಬೇಕು ಹಾಗೂ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಲೋಪವಾಗದಂತೆ ನೋಡಿಕೊಳ್ಳಬೇಕು ಎಂದರು.

ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿ, ಗ್ಯಾರಂಟಿ ಉತ್ಸವ ಪ್ರತಿಯೊಂದು ಹಂತವನ್ನು ಪೂರ್ವ ಯೋಜನೆಯೊಂದಿಗೆ ಅನುಷ್ಠಾನಗೊಳಿಸಬೇಕು. ವಿವಿಧ ಇಲಾಖೆಗಳ ನಡುವೆ ಸಮನ್ವಯ ಅತ್ಯಂತ ಅಗತ್ಯವಾಗಿದ್ದು ಪ್ರತಿಯೊಬ್ಬ ಅಧಿಕಾರಿಯೂ ತನ್ನ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಸ್.ಆರ್. ಪಾಟೀಲ, ಗ್ಯಾರಂಟಿ ಉತ್ಸವದ ಯಶಸ್ವಿಗಾಗಿ ಗ್ಯಾರಂಟಿ ಅನುಷ್ಠಾನ ಸಮಿತಿಗಳ ತಾಲೂಕು ಅಧ್ಯಕ್ಷರಿಗೆ ಹಾಗೂ ಯೋಜನೆಗಳ ಮುಖ್ಯಸ್ಥರಿಗೆ ಜವಾಬ್ದಾರಿ ನೀಡಲಾಗಿದೆ. ಈಗಾಗಲೇ ಪೂರ್ವಭಾವಿ ಸಭೆ ಜರುಗಿಸಿ, ಸಿದ್ಧತೆಯನ್ನು ಪರಿಶೀಲಿಸಲಾಗಿದೆ ಎಂದು ಹೇಳಿದರು. ಸಭೆಯಲ್ಲಿ ಉಪಾಧ್ಯಕ್ಷರಾದ ಮುರಗಯ್ಯಸ್ವಾಮಿ ವಿರಕ್ತಮಠ, ಪ್ರಕಾಶ ಹಳಿಯಾಳ, ರತ್ನಾ ತೇಗೂರಮಠ, ಶಾಂತಪ್ಪ ಅಕ್ಕಿ, ಸುಧೀರ ಬೋಳಾರ, ರೇಹನ್ ರಝಾ ಐನಾಪೂರಿ, ವೀರೇಶ ಕಡಕೋಳಮಠ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಪ್ರಾಧಿಕಾರದ ಸದಸ್ಯರಾದ ವಿನಾಯಕ ಕುರುಬರ, ಅರವಿಂದ ಏಗನಗೌಡರ, ಬಸಪ್ಪ ಮಹಾಬಳೇಶ್ವರ ಬಾವಕಾರ, ಮಂಜುನಾಥ ಮಾಯಣ್ಣವರ, ವರ್ಧಮಾನಗೌಡ ಹಿರೇಗೌಡರ ಇದ್ದರು.