ಗುದ್ಲೆಪ್ಪ ಹಳ್ಳಿಕೇರಿ ಆದರ್ಶಗಳನ್ನು ಮಕ್ಕಳಿಗೆ ತಿಳಿಸಿ: ಬಸವರಾಜ ಹೊರಟ್ಟಿ

| Published : Jun 07 2024, 12:30 AM IST

ಗುದ್ಲೆಪ್ಪ ಹಳ್ಳಿಕೇರಿ ಆದರ್ಶಗಳನ್ನು ಮಕ್ಕಳಿಗೆ ತಿಳಿಸಿ: ಬಸವರಾಜ ಹೊರಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ತಾಲೂಕಿನ ಹೊಸರಿತ್ತಿ ಗಾಂಧಿ ಗ್ರಾಮೀಣ ಗುರುಕುಲದಲ್ಲಿ ಗುರುವಾರ ಗುದ್ಲೆಪ್ಪನವರ 119ನೇ ಜಯಂತ್ಯುತ್ಸವ ಮತ್ತು ಹಳ್ಳಿಕೇರಿ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು.

ಹಾವೇರಿ: ಗುದ್ಲೆಪ್ಪ ಹಳ್ಳಿಕೇರಿ ಅವರು ಸ್ವಾತಂತ್ರ್ಯ ಹೋರಾಟ, ಏಕೀಕರಣ ಮುಂತಾದ ಚಳವಳಿಗಳಲ್ಲಿ ಪಾಲ್ಗೊಂಡು ಸೆರೆವಾಸ ಅನುಭವಿಸಿದರು. ಅವರ ಆದರ್ಶ, ಹೋರಾಟದ ಬದುಕನ್ನು ಮಕ್ಕಳಿಗೆ ತಿಳಿಸುವ ಕಾರ್ಯವನ್ನು ಮಾಡಬೇಕಿದೆ ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ತಾಲೂಕಿನ ಹೊಸರಿತ್ತಿ ಗಾಂಧಿ ಗ್ರಾಮೀಣ ಗುರುಕುಲದಲ್ಲಿ ಗುರುವಾರ ಗುದ್ಲೆಪ್ಪನವರ 119ನೇ ಜಯಂತ್ಯುತ್ಸವ ಮತ್ತು ಹಳ್ಳಿಕೇರಿ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಗುದ್ಲೆಪ್ಪ ಹಳ್ಳಿಕೇರಿ ಅವರು ಲಕ್ಷಾಂತರ ಮಕ್ಕಳಿಗೆ ಆಸರೆಯಾಗುವಂತಹ ಗುರುಕುಲ ನಿರ್ಮಾಣ ಮಾಡಿದರು. ಅವರ ಆದರ್ಶಗಳನ್ನು ನಾವು ಪಾಲಿಸಬೇಕು. ಅಂತಹ ಶ್ರೇಷ್ಠ ವ್ಯಕ್ತಿಯನ್ನು ನಮ್ಮ ರಾಜ್ಯದಲ್ಲಿ ಪಡೆದಿರುವುದು ನಮ್ಮ ಭಾಗ್ಯ ಎಂದು ಹೇಳಿದರು.

ಜಾತಿ ಪದ್ಧತಿ ಹೋಗಲಾಡಿಸಿ ಸಾಮಾಜಿಕ ಬದಲಾವಣೆ ಮಾಡಿದ ಬಸವಣ್ಣ ಅವರನ್ನು ಮರೆಯುವಂತಹ ಕಾಲ ಬಂದಿದೆ. ಚುನಾವಣೆ ಸಂದರ್ಭದಲ್ಲಿ ಹಣ, ಮದ್ಯ ಕೊಟ್ಟು ಮತ ಪಡೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಮಾಜವನ್ನು ತಿದ್ದಿ, ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರು ಮತ್ತು ಬುದ್ಧಿಜೀವಿಗಳು ಹಣ, ಮದ್ಯಕ್ಕೆ ಆಸೆಪಟ್ಟು ಮತ ನೀಡಿದರೆ ಇನ್ನು ಜನಸಾಮನ್ಯರೆ ಗತಿಯೇನು? ಹಣ ಕೊಟ್ಟು ಮತ ಪಡೆಯುವವರು, ಹಣ ತೆಗೆದುಕೊಂಡು ಮತ ಹಾಕುವವರು ಇರುವವರೆಗೆ ರಾಷ್ಟ್ರ ಉದ್ಧಾರ ಆಗಲು ಸಾಧ್ಯವಿಲ್ಲ. ಹಿಂದಿನ ರಾಜಕಾರಣಕ್ಕೂ ಈಗಿನ ರಾಜಕಾರಣಕ್ಕೂ ವ್ಯತ್ಯಾಸವಿದೆ. ಗುದ್ಲೆಪ್ಪ ಹಳ್ಳಿಕೇರಿ ಅವರಂಥ ಮಹಾನ್‌ ವ್ಯಕ್ತಿಗಳ ಆದರ್ಶವನ್ನು ಪಾಲಿಸಿ ಮುನ್ನಡೆದರೆ ಮಾತ್ರ ಸುಧಾರಣೆ ಸಾಧ್ಯ ಎಂದು ಹೇಳಿದರು.

ಗುದ್ಲೆಪ್ಪ ಹಳ್ಳಿಕೇರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ, ಜಾತಿಭೇದ ಎಣಿಸದೇ ಜನರ ಸಮಸ್ಯೆಗಳನ್ನು ಬಗೆಹರಿಸಲು ನಿರಂತರವಾಗಿ ಶ್ರಮಿಸಿದ ವ್ಯಕ್ತಿ ಗುದ್ಲೆಪ್ಪನವರು. ಈಗಿನ ಕಾಲದಲ್ಲಿ ಜಾತಿ, ಹಣ, ಲಂಚಕ್ಕೆ ಕೈಚಾಚಿ ಸಮಸ್ಯೆಗಳನ್ನು ಬಗೆಹರಿಸುವವರ ಸಂಖ್ಯೆ ಜಾಸ್ತಿಯಾಗಿದೆ. ದೇಶದ ಜನರ ಮೇಲೆ ಅಪಾರ ಪ್ರೀತಿ ಹೊಂದಿದ ಗುದ್ಲೆಪ್ಪನವರು ತಮ್ಮನ್ನು ಭೇಟಿಯಾಗಿ ಸಮಸ್ಯೆಯೊಂದನ್ನು ಬಗೆಹರಿಸಿದ ಸಂದರ್ಭಗಳನ್ನು ಮೆಲುಕು ಹಾಕಿದ ಅವರು, ಹಳ್ಳಿಕೇರಿ ಗುದ್ಲೆಪ್ಪನವರು ಬಡವರ ಬಗ್ಗೆ ಅತೀವ ಕಾಳಜಿ ಹೊಂದಿದ್ದರು. ಅವರು ಹಣ ಆಸ್ತಿ ಆಂತಸ್ತಿಗೆ ಮರುಳಾಗದೇ ಶಿಕ್ಷಣದ ಬಗ್ಗೆ ಹೆಚ್ಚು ಒತ್ತು ನೀಡಿ ಇಂತಹ ಶಿಕ್ಷಣ ಸಂಸ್ಥೆಯನ್ನು ಬೆಳೆಸಿದರು ಎಂದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ ಮಾತನಾಡಿ, ಗುರುಕುಲದಲ್ಲಿ ಶಿಕ್ಷಣ ಪಡೆದವರು ಪುಣ್ಯವಂತರು. ಮಕ್ಕಳಿಗೆ ಪಾಲಕರು ಉತ್ತಮ ಶಿಕ್ಷಣ ನೀಡಿ ವಿಜ್ಞಾನ ವಿಭಾಗದಲ್ಲಿ ಜೀವಶಾಸ್ತ್ರ ವಿಷಯವನ್ನು ಮಕ್ಕಳು ಆಯ್ದುಕೊಳ್ಳಬೇಕು. ರೈತರ ಮಕ್ಕಳಿಗೆ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯಲು ಶೇ. ೫೦ ರಿಯಾಯಿತಿ ಇದೆ. ಮಕ್ಕಳು ಇದರ ಸದುಪಯೋಗ ಪಡೆಯಬೇಕು ಎಂದು ಅವರು ಹೇಳಿದರು.

ಮಾಜಿ ಸಂಸದ ಐ.ಜಿ. ಸನದಿ, ಡಾ. ಲಿಂಗರಾಜ ಅಂಗಡಿ ಮಾತನಾಡಿದರು. ಡಾ. ವೀರಣ್ಣ ರಾಜೂರ ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ಗುದ್ಲೆಪ್ಪ ಹಳ್ಳಿಕೇರಿ ಅವರ ದರ್ಶನ-ಪ್ರದರ್ಶನ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಲಾಯಿತು. ಗುದ್ಲೆಪ್ಪ ಹಳ್ಳಿಕೇರಿ ಪ್ರತಿಷ್ಠಾನದ ಧಮದರ್ಶಿ ವೀರಣ್ಣ ಚಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ. ಗುದ್ಲೇಶ ಹಳ್ಳಿಕೇರಿ, ಗಿರೀಶ ಅಂಕಲಕೋಟಿ, ರಮೇಶ ಏಕಬೋಟೆ, ಆರ್.ಎಸ್. ಪಾಟೀಲ, ಶಶಿ ಸಾಲಿ ಇತರರು ಇದ್ದರು.