ದೇವಾಲಯಗಳು ಸಂಸ್ಕೃತಿಯ ಪ್ರತೀಕ

| Published : Dec 21 2023, 01:16 AM IST

ಸಾರಾಂಶ

ದೇವಾಲಯಗಳು ಸಂಸ್ಕೃತಿಯ ಪ್ರತೀಕವಾಗಿದ್ದು, ಭಾರತೀಯರ ಮಟ್ಟಿಗೆ ಪೂಜ್ಯನೀಯ ಸ್ಥಳಗಳಾಗಿವೆ. ಹೀಗಾಗಿ ಅವುಗಳನ್ನು ಸಮಗ್ರ ಅಭಿವೃದ್ಧಿಗೆ ಸಮದಾಯದ ಜನರು ಸಾಮೂಹಿಕ ಹೊಣೆಗಾರಿಕೆ ತೋರಬೇಕಾಗಿದೆ ಎಂದು ಎಸ್‌ಡಿಎಂ ಯೋಜನಾಧಿಕಾರಿ ರಘುಪತಿಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ದೇವಾಲಯಗಳು ಸಂಸ್ಕೃತಿಯ ಪ್ರತೀಕವಾಗಿದ್ದು, ಭಾರತೀಯರ ಮಟ್ಟಿಗೆ ಪೂಜ್ಯನೀಯ ಸ್ಥಳಗಳಾಗಿವೆ. ಹೀಗಾಗಿ ಅವುಗಳನ್ನು ಸಮಗ್ರ ಅಭಿವೃದ್ಧಿಗೆ ಸಮದಾಯದ ಜನರು ಸಾಮೂಹಿಕ ಹೊಣೆಗಾರಿಕೆ ತೋರಬೇಕಾಗಿದೆ ಎಂದು ಎಸ್‌ಡಿಎಂ ಯೋಜನಾಧಿಕಾರಿ ರಘುಪತಿಗೌಡ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಬ್ಯಾಡಗಿ ಯೋಜನಾ ಕಚೇರಿ ವ್ಯಾಪ್ತಿಯ ಮೋಟೆಬೆನ್ನೂರು ವಲಯದ ಖುರ್ದಕೋಡಿಹಳ್ಳಿ ಕಾರ್ಯಕ್ಷೇತ್ರದ ಶ್ರೀ ದುರ್ಗಾದೇವಿ ದೇವಸ್ಥಾನದ ಅಭಿವೃದ್ಧಿಗೆ ₹1 ಲಕ್ಷ ಹಾಗೂ ಶ್ರೀ ಬಸವೇಶ್ವರ ದೇವಸ್ಥಾನದ ಅಭಿವೃದ್ಧಿಗೆ ₹1.50 ಲಕ್ಷ ಅನುದಾನ ವಿತರಿಸಿ ಅವರು ಮಾತನಾಡಿದರು.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ದೇಶದ ಯಾವುದೇ ಮೂಲೆಯಲ್ಲಿದ್ದರೂ ನಮಗೆ ದೇವಾಲಯಗಳು ಕಾಣಸಿಗುತ್ತವೆ. ಪ್ರತಿಯೊಂದು ದೇವಾಲಯಕ್ಕೂ ಒಂದು ಇತಿಹಾಸವಿದ್ದು ಮತ್ತು ಅವುಗಳಲ್ಲಿರುವ ಗೋಡೆಗಳು ಒಂದೊಂದು ಮಹಾರಾಜರ ಕಥೆಯನ್ನು ಹೊಂದಿವೆ. ಹೀಗಾಗಿ ಜನರು ವಿವಿಧ ಕಾರಣಗಳಿಗೆ ದೇವಾಲಯಗಳಿಗೆ ಭೇಟಿ ನೀಡುತ್ತಾರೆ, ದೇವರ ನಾಮಸ್ಮರಣೆಯೊಂದಿಗೆ ಆಶೀರ್ವಾದ ಪಡೆಯುವುದು ನಮ್ಮೆಲ್ಲರ ಸಂಪ್ರದಾಯವಾಗಿದೆ ಎಂದರು.

ದೇವಾಲಯಗಳು ಜನರಲ್ಲಿ ಭಕ್ತಿಯ ಪ್ರೇರಣೆ ಮೂಡಿಸುವುದರ ಜೊತೆಗೆ ಆಂತರಿಕ ನೆಮ್ಮದಿ ಪಡೆಯಲು ಅವಶ್ಯಕವಾಗಿವೆ. ಜೊತೆಗೆ ಸಮುದಾಯದ ಜನರನ್ನು ಒಟ್ಟುಗೂಡಿಸಲು ಕಾರಣವಾಗಿವೆ. ಹೀಗಾಗಿ ದೇಶದ ಬಹುತೇಕ ದೇವಾಲಯಗಳು ಜಾಗತಿಕವಾಗಿ ಗುರುತಿಸಲ್ಪಡುತ್ತಿವೆ ಎಂದರು.

ಪೂಜೆ ಒಬ್ಬ ವ್ಯಕ್ತಿಯು ದೈವಿಕ ಜೊತೆ ಆಧ್ಯಾತ್ಮಿಕತೆ ಮೂಡಿಸುವ ಸಾಧನವಾಗಿದೆ. ಪ್ರತಿಯೊಂದು ದೇವಾಲಯಗಳು ಧರ್ಮದ ಆದರ್ಶ, ನಂಬಿಕೆ, ಜೀವನದ ಮೌಲ್ಯ ಮತ್ತು ಪಾಲಿಸಬೇಕಾದ ಜೀವನ ವಿಧಾನವನ್ನು ತಿಳಿಸಿಕೊಡುತ್ತವೆ ಮತ್ತು ಅಲ್ಲಿ ಸಿಗುವಂತಹ ತಾತ್ವಿಕ ಮತ್ತು ಸಾಂಸ್ಕೃತಿಕ ವಿಚಾರಗಳು ವಿಶ್ವದ ಯಾವುದೇ ವಿಶ್ವವಿದ್ಯಾಲಯದಲ್ಲಿ ಲಭ್ಯವಾಗುವುದಿಲ್ಲ. ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯರಿಂದ ಬಂದಿರುವ ಅನುದಾನವನ್ನು ಗ್ರಾಮದ ಜನರು ಸದ್ಭಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಪ್ರಕಾಶ ಕಾಟೇನಹಳ್ಳಿ, ಮುಖಂಡರಾದ ಶಿವರಾಜ ಹರಮಗಟ್ಟಿ ಗ್ರಾಮ ಪಂಚಾಯಿತಿ ಸದಸ್ಯರು, ಒಕ್ಕೂಟದ ಅಧ್ಯಕ್ಷೆ ಇಂದ್ರಮ್ಮ, ವಲಯದ ಮೇಲ್ವಿಚಾರಕರು ಹಾಗೂ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.