ಸಾರಾಂಶ
ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ‘ಕಬ್ಬದುಳುಮೆ ಹಳೆಗನ್ನಡ ಕಾವ್ಯಗಳ ಓದು ಮತ್ತು ವ್ಯಾಖ್ಯಾನ’ ಸಮಾರೋಪ ಸಮಾರಂಭ ಇತ್ತೀಚೆಗೆ ನೆರವೇರಿತು.
ಕನ್ನಡಪ್ರಭ ವಾರ್ತೆ ಉಡುಪಿ
ಶಿಕ್ಷಣದ ಮುಖೇನ ವಿದ್ಯಾರ್ಥಿಗಳು ಆತ್ಮಸ್ಥೈರ್ಯ ವೃದ್ಧಿಸಿಕೊಳ್ಳಬೇಕು, ಕೀಳರಿಮೆಯಿಂದ ಮುಕ್ತರಾಗಬೇಕು. ವ್ಯಕ್ತಿ, ವಸ್ತು, ಪುಸ್ತಕ ಯಾವುದನ್ನೆ ಆಗಲಿ ದೂರ ಇಟ್ಟಷ್ಟು ಅದರೊಂದಿಗಿನ ನಮ್ಮ ಅಂತರ ಹೆಚ್ಚಾಗುತ್ತದೆ. ಹಳೆಗನ್ನಡ ಪಠ್ಯಗಳೂ ಹಾಗೆ. ಅದನ್ನು ದೂರವಿಟ್ಟಷ್ಟು ಕಠಿಣವೆನಿಸುತ್ತದೆ. ಹಳೆಗನ್ನಡ ಕಾವ್ಯಗಳು ಕಬ್ಬಿಣದ ಕಡಲೆಗಳಲ್ಲ, ನಮ್ಮ ಜೀವನ ಮೌಲ್ಯಗಳನ್ನು ಕಟ್ಟಿಕೊಡುವಂಥವುಗಳು ಎಂದು ಡಾ. ಶಿವರಾಮ ಕಾರಂತ ಟ್ರಸ್ಟ್ ನ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರ್ ಹೇಳಿದ್ದಾರೆ.ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆದ ‘ಕಬ್ಬದುಳುಮೆ ಹಳೆಗನ್ನಡ ಕಾವ್ಯಗಳ ಓದು ಮತ್ತು ವ್ಯಾಖ್ಯಾನ’ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಅವರು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವಕರ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕಿ ಡಾ.ಮೇವಿ ಮಿರಾಂದ, ಕನ್ನಡ ವಿಭಾಗದ ಉಪನ್ಯಾಸಕರಾದ ಸಂಧ್ಯಾರಾಣಿ, ಶರಿತಾ ಕುಮಾರಿ, ಅರ್ಚನಾ, ಭಾರತಿ, ಶಾಲಿನಿ, ಜ್ಯೋತಿ, ಶಂಕರ್ರಪ್ಪ ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ಮೇಘನ್ ಕುಮಾರ್, ಶಿವಾನಿ ಶೆಟ್ಟಿ, ಕೃಷ್ಣ ಜಿ.ಜಿ. ಹಳೆಗನ್ನಡ ಕಾವ್ಯಗಳನ್ನು ವಾಚಿಸಿದರು, ವಿಠಲ, ಪ್ರತಿಭಾ, ನೇತ್ರಾವತಿ ಅವರು ಕಬ್ಬದುಳುಮೆ ವಿಶೇಷ ತರಗತಿಯ ಕುರಿತು ಅಭಿಪ್ರಾಯಗಳನ್ನು ಮಂಡಿಸಿದರು. ಅನೂಷಾ ಮತ್ತು ಬಳಗದವರು ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ರತ್ನಮಾಲಾ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಸುಶ್ಮಿತಾ ಶೆಟ್ಟಿ ವಂದಿಸಿದರು. ನೈನಾ ಜೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.