ಸಾರಾಂಶ
ಈ ಪಂದ್ಯಾವಳಿಯಲ್ಲಿ ಗೆಲುವಿನಿಂದ ಪದ್ಮಾಪ್ರಿಯಾ ಅಖಿಲ ಭಾರತ ಮಟ್ಟದಲ್ಲಿ 12 ವರ್ಷದೊಳಗಿನ ಟೆನ್ನಿಸ್ ಆಟಗಾರರ ವಿಭಾಗದಲ್ಲಿ 3ನೇ ರ್‍ಯಾಂಕ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಹೈದರಾಬಾದ್ ನಲ್ಲಿ ನಡೆದ 12 ವರ್ಷದೊಳಗಿನ ರಾಷ್ಟ್ರಮಟ್ಟದ ಟೆನ್ನಿಸ್ ಪಂದ್ಯಾವಳಿಯಲ್ಲಿ ಮೈಸೂರಿನ ಪದ್ಮಪ್ರಿಯಾ ರಮೇಶ್ ಕುಮಾರ್ ಅವರು ಸಿಂಗಲ್ಸ್ ಹಾಗೂ ಡಬ್ಬಲ್ಸ್ ನಲ್ಲಿ ಚಾಂಪಿಯನ್ ಆಗಿದ್ದಾರೆ. ಆ ಮೂಲಕ ಅಖಿಲ ಭಾರತ ಮಟ್ಟದಲ್ಲಿ 3ನೇ ರ್‍ಯಾಂಕ್ ಆಟಗಾರ್ತಿಯಾಗಿ ಸಹ ಹೊರಹೊಮ್ಮಿದ್ದಾರೆ.ಹೈದರಾಬಾದ್ ನಲ್ಲಿರುವ ಸಾನಿಯಾ ಮಿರ್ಜಾ ಟೆನ್ನಿಸ್ ಅಕಾಡೆಮಿಯು (ಎಸ್ಎಂಟಿಎ) ಎಐಟಿಎ ಹಾಗೂ ಟಿಎಸ್ ಟಿಎ ಸಂಯುಕ್ತವಾಗಿ ಜೂ.10 ರಿಂದ 15ರವರೆಗೆ ಆಯೋಜಿಸಿದ್ದ 12 ವರ್ಷದೊಳಗಿನ ರಾಷ್ಟ್ರಮಟ್ಟದ ಟೆನ್ನಿಸ್ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಪದ್ಮಾಪ್ರಿಯಾ ಸಿಂಗಲ್ಸ್ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿದ್ದರು. ಫೈನಲ್ ಪಂದ್ಯದಲ್ಲಿ ಎದುರಾಳಿ ತೆಲಂಗಾಣದ ಜೋಹಾ ಕುರೇಷಿ ಅವರನ್ನು 6-3, 6-2 ಪಾಯಿಂಟ್ಸ್ ನಿಂದ ಮಣಿಸಿದ ಪದ್ಮಪ್ರಿಯಾ, ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಹಾಗೆಯೇ, ಡಬಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಕರ್ನಾಟಕದ ಪದ್ಮಾಪ್ರಿಯಾ, ಮಹಾರಾಷ್ಟ್ರದ ಸಾರಾ ಫೆಂಗ್ಸ್ ಅವರೊಂದಿಗೆ ಸೇರಿ ಎದುರಾಳಿ ತಮಿಳುನಾಡಿನ ಕನಿಷ್ಕಾ ಗೋವಿಂದ್, ಮಹಾರಾಷ್ಟ್ರದ ಮೈರಾ ಶೈಕ್ ಜೋಡಿಯನ್ನು 6-4, 6-2 ಪಾಯಿಂಟ್ಸ್ ನಲ್ಲಿ ಮಣಿಸಿ ಜಯ ಸಾಧಿಸುವ ಮೂಲಕ ಡಬಲ್ಸ್ ನಲ್ಲೂ ಚಾಂಪಿಯನ್ ಆದರು.ಈ ಪಂದ್ಯಾವಳಿಯಲ್ಲಿ ಗೆಲುವಿನಿಂದ ಪದ್ಮಾಪ್ರಿಯಾ ಅಖಿಲ ಭಾರತ ಮಟ್ಟದಲ್ಲಿ 12 ವರ್ಷದೊಳಗಿನ ಟೆನ್ನಿಸ್ ಆಟಗಾರರ ವಿಭಾಗದಲ್ಲಿ 3ನೇ ರ್‍ಯಾಂಕ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅರಣ್ಯ ಇಲಾಖೆಯ ಮೈಸೂರು ವೃತ್ತದ ಸಿಎಫ್ ಡಾ.ಎಂ, ಮಾಲತಿಪ್ರಿಯಾ ಹಾಗೂ ಹುಲಿ ಯೋಜನೆಯ ಸಿಎಫ್ ಡಾ.ಪಿ. ರಮೇಶ್ ಕುಮಾರ್ ದಂಪತಿ ಪುತ್ರಿಯಾದ ಪದ್ಮಪ್ರಿಯಾ, ಮೈಸೂರಿನ ಕೂರ್ಗಳ್ಳಿಯಲ್ಲಿರುವ ಎಕ್ಸೆಲ್ ಪಬ್ಲಿಕ್ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಾರೆ.