ಸಾರಾಂಶ
ಬೆಂಗಳೂರು : ಕಾಶ್ಮೀರದ ಪಹಲ್ಗಾಂನಲ್ಲಿ ನಡೆದಿರುವ ಉಗ್ರರ ದಾಳಿ ಪೂರ್ವಯೋಜಿತ ಸಂಚು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಉಗ್ರರ ದಾಳಿ ಮಾಹಿತಿ ತಿಳಿಯದಿರುವುದು ಕೇಂದ್ರ ಗುಪ್ತಚರ ಇಲಾಖೆಯ ವೈಫಲ್ಯವಾಗಿದೆ. ಈ ಹಿಂದೆ ನಡೆದ ಪುಲ್ವಾಮಾ ದಾಳಿಯಲ್ಲೂ ಗುಪ್ತಚರ ವೈಫಲ್ಯವಿತ್ತು. ಕೇಂದ್ರ ಸರ್ಕಾರ ದೇಶದ ಜನರಿಗೆ ಭದ್ರತೆ ನೀಡುವ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಕನ್ನಡಿಗರನ್ನು ಕರೆತರುವ ಕುರಿತು ಮಾತನಾಡಿದ ಸಿದ್ದರಾಮಯ್ಯ, ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ರಾಜ್ಯ ಸರ್ಕಾರ ಎಲ್ಲ ಸಿದ್ಧತೆ ಮಾಡಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್‌ರನ್ನು ಕಾಶ್ಮೀರಕ್ಕೆ ಕಳುಹಿಸಲಾಗಿದ್ದು, ವಿಶೇಷ ವಿಮಾನ ಮೂಲಕ ಕನ್ನಡಿಗರನ್ನು ಕರೆತರುವಂತೆ ಸೂಚಿಸಿದ್ದೇನೆ ಎಂದರು.
ಸಿಎಂ-ಡಿಸಿಎಂ ಸಾಂತ್ವನ: ಮೃತಪಟ್ಟಿರುವ ರಾಜ್ಯದ ಮಂಜುನಾಥ ರಾವ್ ಮತ್ತು ಭರತ್ ಭೂಷಣ್ ಅವರ ಕುಟುಂಬದವರಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಸಿಎಂ ನಿರಂತರ ಸಭೆ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರವೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಾಹಿತಿ ಪಡೆದರು. ಈ ವೇಳೆ ಉಗ್ರರ ದಾಳಿಯಿಂದ ಮೃತಪಟ್ಟ ರಾಜ್ಯದ ಇಬ್ಬರ ಕುಟುಂಬಗಳಿಗೆ ತಲಾ 10 ಲಕ್ಷ ರು. ಪರಿಹಾರ ಘೋಷಿಸಿದರು. ಉಗ್ರರ ದಾಳಿಗೆ ಮೃತಪಟ್ಟ ರಾಜ್ಯದ ಇಬ್ಬರ ಮೃತದೇಹ ತರುವುದು ಹಾಗೂ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವ ಸಂಬಂಧ ಸಿದ್ದರಾಮಯ್ಯ ಮಂಗಳವಾರ ಸಂಜೆಯಿಂದ ನಿರಂತವರಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ.
ಮಾಹಿತಿ ಪಡೆಯಲು ಸಹಾಯವಾಣಿ
ಜಮ್ಮು-ಕಾಶ್ಮೀರ ಪ್ರವಾಸಕ್ಕೆ ತೆರಳಿರುವ ಕನ್ನಡಿಗರ ಮಾಹಿತಿ ಕಲೆಹಾಕಲು ರಾಜ್ಯ ಸರ್ಕಾರ ಸಹಾಯವಾಣಿ ಆರಂಭಿಸಿದೆ. ಸಹಾಯವಾಣಿ ಸಂಖ್ಯೆ: 080 43344334, 43344335, 43344336, 43344342.