ಪಠ್ಯ ಪುಸ್ತಕ ವಿವಾದ ರಾಜಕೀಯ ಪ್ರೇರಿತ: ಸಮ್ಮೇಳನಾಧ್ಯಕ್ಷ ಡಾ. ಬೆಳವಾಡಿ ಮಂಜುನಾಥ್‌

| Published : Sep 29 2024, 01:38 AM IST

ಪಠ್ಯ ಪುಸ್ತಕ ವಿವಾದ ರಾಜಕೀಯ ಪ್ರೇರಿತ: ಸಮ್ಮೇಳನಾಧ್ಯಕ್ಷ ಡಾ. ಬೆಳವಾಡಿ ಮಂಜುನಾಥ್‌
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಪಠ್ಯ ಪುಸ್ತಕ ವಿವಾದ ರಾಜಕೀಯ ಪ್ರೇರಿತ. ಪಠ್ಯ ಪುಸ್ತಕಗಳನ್ನು ತಜ್ಞರು ರಚಿಸಬೇಕೇ ಹೊರತು ರಾಜಕಾರಣಿಗಳ ಪ್ರವೇಶ ಸಲ್ಲದು. ರಾಜಕಾರಣಿಗಳು ತಜ್ಞರಾದರೆ ಪರವಾಗಿಲ್ಲ, ಆದರೆ, ಅದು ಸಾಮರಸ್ಯ ಕದಡುವಂತಾಗಬಾರದು ಎಂದು ಚಿಕ್ಕಮಗಳೂರು ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸಾಹಿತಿ ಡಾ. ಬೆಳವಾಡಿ ಮಂಜುನಾಥ್‌ ಕಿವಿ ಮಾತು ಹೇಳಿದರು.

ತ್ರಿಭಾಷಾ ಸೂತ್ರದ ಸಾಧಕ ಬಾಧಕ ಪುನರ್‌ ಅವಲೋಕನ ಅಗತ್ಯ। ಚಿಕ್ಕಮಗಳೂರು ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪಠ್ಯ ಪುಸ್ತಕ ವಿವಾದ ರಾಜಕೀಯ ಪ್ರೇರಿತ. ಪಠ್ಯ ಪುಸ್ತಕಗಳನ್ನು ತಜ್ಞರು ರಚಿಸಬೇಕೇ ಹೊರತು ರಾಜಕಾರಣಿಗಳ ಪ್ರವೇಶ ಸಲ್ಲದು. ರಾಜಕಾರಣಿಗಳು ತಜ್ಞರಾದರೆ ಪರವಾಗಿಲ್ಲ, ಆದರೆ, ಅದು ಸಾಮರಸ್ಯ ಕದಡುವಂತಾಗಬಾರದು ಎಂದು ಚಿಕ್ಕಮಗಳೂರು ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸಾಹಿತಿ ಡಾ. ಬೆಳವಾಡಿ ಮಂಜುನಾಥ್‌ ಕಿವಿ ಮಾತು ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಆರಂಭಗೊಂಡ 2 ದಿನಗಳ ಕನ್ನಡ ಸಾಹಿತ್ಯ ಸಮ್ಮೆಳನಾಧ್ಯಕ್ಷತಾ ಭಾಷಣದಲ್ಲಿ ಲಕ್ಷಾಂತರ ರು. ವಿನಿಯೋಗಿಸಿ ಪುಸ್ತಕಗಳನ್ನು ಮುದ್ರಿಸಿ ಆಗಾಗ ಬದಲಿಸಿ, ಪಾಠಗಳನ್ನು ತೆಗೆಯುವುದು, ಮಧ್ಯದಲ್ಲಿ ಸೇರಿಸುವುದರಿಂದ ಅಧ್ಯಾಪಕರ ಹಾಗೂ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದರು.

ನಮ್ಮ ಶಿಕ್ಷಣ ಕೂಡ ಮಾರುಕಟ್ಟೆಗೆ ಅಗತ್ಯವಾದ ಯುವ ಪೀಳಿಗೆಯನ್ನು ಸೃಷ್ಟಿಸುತ್ತಿದೆ. ಶಿಕ್ಷಣ ವೈಯಕ್ತಿಕ ವಿಕಾಸ ಮತ್ತು ಆಸಕ್ತಿಯ ಪ್ರಯೋಗ ವಾಗಿ ಮನುಷ್ಯ ಕೇಂದ್ರಿತವಾಗದೆ ಮಾರುಕಟ್ಟೆಗನುಗುಣವಾಗಿ ಬದಲಾಗುತ್ತಿರುವುದು ದುರಂತ. ಕನ್ನಡ ಅನುಷ್ಠಾನದಲ್ಲಿ ರಾಜಕಾರಣಿಗಳ ಇಚ್ಛಾಸಕ್ತಿ ಕೊರತೆ, ಅಧಿಕಾರಿಗಳ ಉದಾಸೀನತೆ, ವಿದ್ಯಾವಂತರ ಉಪೇಕ್ಷೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡದಿರುವುದು ಕಾರಣ. ಎಲ್ಲರೂ ಸಂಘಟಿತರಾಗಿ ಹೋರಾಡದಿರುವುದರಿಂದ ಕನ್ನಡಕ್ಕೆ ಈ ದುಸ್ಥಿತಿ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಮಕಾಲೀನ ಸಂದರ್ಭದಲ್ಲಿ ಕನ್ನಡದ ಸಾರ್ವಭೌಮತ್ವ ರಾಷ್ಟ್ರೀಯ ರಾಜಕಾರಣಕ್ಕೆ ಮುಖಾಮುಖಿಯಾಗಿದೆ. ಬಹು ಭಾಷೆಗಳ ರಾಷ್ಟ್ರದಲ್ಲಿ ಇದೊಂದು ದೊಡ್ಡ ಸವಾಲು. ಭಾಷೆ, ಸಾಹಿತ್ಯ, ಲಲಿತಕಲೆಗಳು ಈ ಸವಾಲಿಗೆ ನೀಡುತ್ತಿರುವ ಅಸ್ಮಿತೆ ಉತ್ತರವನ್ನು ನಮ್ಮ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ತ್ರಿಭಾಷಾ ಸೂತ್ರದ ಸಾಧಕ ಬಾಧಕಗಳನ್ನು ಪುನರ್‌ ಅವಲೋಕಿಸಬೇಕು. ಪೋಷಕರು ಭ್ರಮಾಲೋಕದಿಂದ ಹೊರ ಬಂದು ನಮ್ಮ ಮಕ್ಕಳಿಂದ ಭಾಷೆ, ಸಂಸ್ಕೃತಿ ಉಳಿಸಿಕೊಳ್ಳುವುದು ಹೇಗೆ ? ಎಂಬುದರತ್ತ ಚಿಂತಿಸಬೇಕು. ಶಿಕ್ಷಣದೊಳಗೆ ಸಾಧ್ಯವಾದ ಮಟ್ಟಿಗೆ ಕನ್ನಡ ಬಳಕೆಗೆ ಶಿಕ್ಷಣ ಸಂಸ್ಥೆಗಳು, ಕನ್ನಡಪರ ಸಂಘಟನೆಗಳು ಪ್ರಯತ್ನಿಸಬೇಕಿದೆ. ಜನ ಜಾಗೃತರಾಗದ ಹೊರತು ಯಾವುದೇ ಸಂಘಟನೆ ಮಾಡುವ ಪ್ರಯತ್ನ ಕೇವಲ ಬಾಹ್ಯಾಡಂಬರವಾಗುತ್ತದೆ ಎಂದು ಹೇಳಿದರು.

ಶಿಕ್ಷಣೋದ್ಯಮ:

ಶಿಕ್ಷಣ ಕೇವಲ ಉದ್ಯೋಗ ಪಡೆವ ಸಾಧನ ಎಂಬುದು ಪ್ರಧಾನವಾಗಿರುವುದರಿಂದ ಅದು ಸಹಜವಾಗಿ ವಾಣಿಜ್ಯೀಕರಣಗೊಂಡು ಶಿಕ್ಷಣೋದ್ಯಮವಾಗಿದೆ. ಇಂಗ್ಲೀಷ್‌ ವ್ಯಾವಹಾರಿಕ ಭಾಷೆಯಾಗಿ ಸುಲಭೀಕರಣಗೊಂಡಿರುವುದರಿಂದ ದೇಶೀಯ ಭಾಷೆಗಳ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ.

ಆಧುನಿಕತೆ ಜನರ ಸಹಜ ಸಂಬಂಧಗಳು ಮತ್ತು ಸಂಸ್ಕೃತಿ ಅಂತರವನ್ನು ಹೆಚ್ಚಿಸುತ್ತಲೇ ಇದೆ. ಕನ್ನಡದ ಬಾಗಿಲಿನಿಂದ ವಿಶ್ವ ಪ್ರಜ್ಞೆಯನ್ನು ಖಂಡಿತಾ ಪಡೆಯಬಹುದು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಹಿಂದಿಗಿಂತಲೂ ಹೆಚ್ಚು ಪ್ರಯತ್ನಶೀಲವಾಗಬೇಕು. ಕೇವಲ ಸಾಹಿತ್ಯ ರಚನೆ, ಸಮ್ಮೇಳನ ಮಾಡುವುದರಿಂದ ಕನ್ನಡ ಉಳಿಸಲಾಗುವುದಿಲ್ಲ. ಕನ್ನಡನಾಡಿನಲ್ಲಿರುವ ಎಲ್ಲರೂ ದೈನಂದಿನ ಬದುಕಿನಲ್ಲಿ ಕನ್ನಡ ಭಾಷೆ ಬಳಸುವುದು ಜರೂರಾಗಿ ಆಗಬೇಕಾಗಿದೆ ಎಂದು ಹೇಳಿದರು.

ನಾಡ ಭಾಷೆ ಉಳಿಸುವುದು ಜನರು ಮತ್ತು ಸರ್ಕಾರದ ಹೊಣೆ. ಅದರ ಬೆಳವಣಿಗೆಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು. ಕರ್ನಾಟಕ ಸರ್ಕಾರ ಕನ್ನಡವನ್ನು ಆಡಳಿತ ಭಾಷೆಯೆಂದು ಘೋಷಿಸಿ ದಶಕಗಳೇ ಕಳೆದಿವೆ. ಆದರೆ, ಅನುಷ್ಠಾನದಲ್ಲಿ ಪೂರ್ಣ ಯಶಸ್ವಿಯಾಗಿಲ್ಲ. ಭಾಷೆ ಉಳಿಯುವವರೆಗೆ ಸಂಸ್ಕೃತಿ ಉಳಿಯುತ್ತದೆ ಎಂಬ ಅರಿವು ಇಂದಿನ ಅಗತ್ಯ ಎಂದರು.

ಸಮ್ಮೇಳನಕ್ಕೂ ಮುನ್ನ ತಾಲೂಕು ಕಚೇರಿಯಿಂದ ಕುವೆಂಪು ಕಲಾಮಂದಿರದವರೆಗೆ ಪ್ರಮುಖ ರಸ್ತೆಗಳಲ್ಲಿ ಕಲಾ ತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು.

ಕಸಾಪ ತಾಲೂಕು ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್‌ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್‌ ಆಶಯ ನುಡಿಗಳನ್ನಾಡಿದರು. ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯ ಕೋಶಾಧ್ಯಕ್ಷ ಡಾ. ಪಟೇಲ್‌ ಪಾಂಡು ಸಮ್ಮೇಳನ ಉದ್ಘಾಟಿಸಿದರು. ಶಾಸಕ ಎಚ್‌.ಡಿ. ತಮ್ಮಯ್ಯ, ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್‌, ಮಾಜಿ ಸಚಿವ ಸಿ.ಆರ್‌. ಸಗೀರ್‌ ಅಹ್ಮದ್‌, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೇವೇಂದ್ರ, ಕಿರುತೆರೆ ನಟಿ ಗಾನವಿ, ಲಕ್ಷ್ಮಣ್‌ಗೌಡ, ಎಂ.ಎಲ್‌. ಮೂರ್ತಿ, ದೀಪಕ್‌ ದೊಡ್ಡಯ್ಯ ಉಪಸ್ಥಿತರಿದ್ದರು.

28 ಕೆಸಿಕೆಎಂ 3ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರ ಶನಿವಾರ ಆರಂಭಗೊಂಡ ಚಿಕ್ಕಮಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಾ. ಪಟೇಲ್‌ ಪಾಂಡು ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಡಾ. ಬೆಳವಾಡಿ ಮಂಜುನಾಥ್‌, ಶಾಸಕ ಎಚ್‌.ಡಿ. ತಮ್ಮಯ್ಯ, ಸುಜಾತಾ ಶಿವಕುಮಾರ್‌, ಸೂರಿ ಶ್ರೀನಿವಾಸ್‌ ಇದ್ದರು.

----

28 ಕೆಸಿಕೆಎಂ 4 ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರ ಶನಿವಾರ ಆರಂಭಗೊಂಡ ಚಿಕ್ಕಮಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಕನ್ನಡ ಅಭಿಮಾನಿಗಳು.