ಕರ್ತವ್ಯದ ವೇಳೆ ಜನರು ಸಹಕಾರ ನೀಡಿರುವುದಕ್ಕೆ ಆಭಾರಿ: ಬಿ.ಮಹೇಂದ್ರ

| Published : Feb 21 2025, 11:47 PM IST

ಸಾರಾಂಶ

ನನ್ನ ಸೇವಾ ಅವಧಿಯಲ್ಲಿ ಕೋಮು ಸಾಮರಸ್ಯ ಕದಡದೆ, ಕರ್ತವ್ಯಕ್ಕೆ ಮತ್ತು ಕಾನೂನಿಗೆ ಗೌರವ ನೀಡುವ ಮೂಲಕ ಮಾನವೀಯತೆ ನೆಲಗಟ್ಟಿನಲ್ಲಿ ಕೆಲಸ ನಿರ್ವಹಿಸಿದ್ದೇನೆ. ಯಾರೇ ಆದರೂ ಇರುವವರೆಗೂ ಪ್ರಾಮಾಣಿಕವಾಗಿ ಉತ್ತಮ ಸೇವೆ ಸಲ್ಲಿಸಬೇಕು ಎಂಬ ಧ್ಯೇಯೋದ್ದೇಶ ಇಟ್ಟುಕೊಂಡು ಕೆಲಸ ಮಾಡಿದ್ದೇನೆ.

ಕನ್ನಡಪ್ರಭ ವಾರ್ತೆ ಹಲಗೂರು

ಪೊಲೀಸ್ ಠಾಣೆಯಲ್ಲಿ ಎರಡು ವರ್ಷಕ್ಕೂ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸಿದ ವೇಳೆ ಇಲ್ಲಿನ ಜನತೆ ನೀಡಿದ ಸಹಕಾರಕ್ಕೆ ಅಭಾರಿಯಾಗಿದ್ದೇನೆ ಎಂದು ಸಬ್ ಇನ್ಸ್ ಪೆಕ್ಟರ್ ಬಿ.ಮಹೇಂದ್ರ ತಿಳಿಸಿದರು.

ಬಿಕ್ಷುದ ಮಠದ ಆವರಣದಲ್ಲಿ ಹಲಗೂರು ಪೊಲೀಸ್ ಠಾಣೆಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಹೋಬಳಿಯ ಪ್ರಗತಿಪರ ಸಂಘಟನೆಗಳಿಂದ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ನನ್ನ ಸೇವಾ ಅವಧಿಯಲ್ಲಿ ಕೋಮು ಸಾಮರಸ್ಯ ಕದಡದೆ, ಕರ್ತವ್ಯಕ್ಕೆ ಮತ್ತು ಕಾನೂನಿಗೆ ಗೌರವ ನೀಡುವ ಮೂಲಕ ಮಾನವೀಯತೆ ನೆಲಗಟ್ಟಿನಲ್ಲಿ ಕೆಲಸ ನಿರ್ವಹಿಸಿದ್ದೇನೆ. ಯಾರೇ ಆದರೂ ಇರುವವರೆಗೂ ಪ್ರಾಮಾಣಿಕವಾಗಿ ಉತ್ತಮ ಸೇವೆ ಸಲ್ಲಿಸಬೇಕು ಎಂಬ ಧ್ಯೇಯೋದ್ದೇಶ ಇಟ್ಟುಕೊಂಡು ಕೆಲಸ ಮಾಡಿದ್ದೇನೆ ಎಂದರು.

ಯಾವುದೇ ಲೋಪ ದೋಷಗಳು ಬರದಂತೆ ಠಾಣೆಗೆ ದೂರು ಕೊಡಲು ಬಂದವರಿಗೆ, ತೊಂದರೆಗೆ ಒಳಗಾಗಿದ್ದವರಿಗೆ ಅನ್ಯಾಯವಾಗದ ರೀತಿಯಲ್ಲಿ ಅವರ ಪರ ನಿಂತು ಕರ್ತವ್ಯ ನಿರ್ವಹಿಸಿದ ತೃಪ್ತಿ ನನಗಿದೆ. ನನ್ನ ಸೇವಾ ಅವಧಿಯನ್ನು ಗುರುತಿಸಿ ಜಾತ್ಯತೀತ, ಪಕ್ಷಾತೀತವಾಗಿ ಎಲ್ಲರೂ ಸೇರಿ ನನಗೆ ಅಭಿನಂದಿಸಿ ಸನ್ಮಾನಿಸಿರುವುದಕ್ಕೆ ನಿಮ್ಮೆಲ್ಲರಿಗೂ ಆಭಾರಿಯಾಗಿದ್ದೇನೆ ಎಂದರು.

ಇದೇ ವೇಳೆ ಹಲವರು, ಸಬ್ ಇನ್ಸ್ ಪೆಕ್ಟರ್ ಮಹೇಂದ್ರ ರವರ ಸೇವಾ ಅವಧಿಯಲ್ಲಿ ಉತ್ತಮ, ಜನಪರವಾಗಿ. ಸಾರ್ವಜನಿಕರ ಯಾವ ರೀತಿಯ ದೂರು ಇಲ್ಲದೆ ಕರ್ತವ್ಯ ನಿರ್ವಹಿಸಿದ್ದಾರೆ ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಮುಖಂಡರಾದ ರಾಮಚಂದ್ರೇಗೌಡ, ಶಿವಮಾದೇಗೌಡ ,ಸುಂದರ್ ರಾಜ್, ಪುಟ್ಟರಾಮು, ಕೆಂಪಯ್ಯ, ಸೇರಿದಂತೆ ಇತರರು ಇದ್ದರು.