ಸಾರಾಂಶ
ಕಲಿಯುವಾಗ ಕಷ್ಟಪಟ್ಟು ಕಲಿತರೆ ಮುಂದಿನ ದಿನಗಳಲ್ಲಿ ಒಳಿತಾಗುತ್ತದೆ. ಬೆಂಗಳೂರಿನಂಥ ಮಹಾನಗರಗಳಲ್ಲಿ ಹಾಯಾಗಿ ಬದುಕುತ್ತಿದ್ದ ಮಕ್ಕಳು ಹಳ್ಳಿಗೆ ಬಂದು ಕೆಸರು ಗದ್ದೆಯಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ.
ಕನ್ನಡಪ್ರಭ ವಾರ್ತೆ ಕುಣಿಗಲ್
ಬೆಂಗಳೂರು ವಿಶ್ವವಿದ್ಯಾಲಯ ಕಳೆದ 60 ವರ್ಷಗಳ ಹಿಂದೆ ಪ್ರಾರಂಭವಾಗಿ ನೂರಾರು ಸುಧಾರಿತ ತಳಿಯ ರಾಗಿ, ಭತ್ತ, ತೊಗರಿ ಸೇರಿ ಇತರೆ ಬಿತ್ತನೆ ಬೀಜ ಗಳನ್ನು ರೈತರಿಗೆ ನೀಡುವುದರ ಜೊತೆಗೆ ಹಲವಾರು ಕೃಷಿ ವಿಜ್ಞಾನಿಗಳನ್ನು ನೀಡಿದೆ ಎಂದು ಜಿಕೆವಿಕೆ ಕಾಲೇಜಿನ ಪ್ರಾಂಶುಪಾಲರು ಡಾ.ರಘುಪ್ರಸಾದ್ ಹೇಳಿದರು.ತಾಲೂಕಿನ ಗುನ್ನಾಗರೆ ಗ್ರಾಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಕಾಲೇಜಿನಿಂದ ವಿದ್ಯಾರ್ಥಿಗಳು ಕಳೆದ ಮೂರು ತಿಂಗಳಿಂದ ನಡೆಸಿದ ಕೃಷಿ ಕಾರ್ಯಾನುಭವ ಅಂಗವಾಗಿ ಏರ್ಪಡಿಸಿದ್ದ ಕೃಷಿ ಲಹರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಲಿಯುವಾಗ ಕಷ್ಟಪಟ್ಟು ಕಲಿತರೆ ಮುಂದಿನ ದಿನಗಳಲ್ಲಿ ಒಳಿತಾಗುತ್ತದೆ. ಬೆಂಗಳೂರಿನಂಥ ಮಹಾನಗರಗಳಲ್ಲಿ ಹಾಯಾಗಿ ಬದುಕುತ್ತಿದ್ದ ಮಕ್ಕಳು ಹಳ್ಳಿಗೆ ಬಂದು ಕೆಸರು ಗದ್ದೆಯಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ಗುನ್ನಾಗರೆ ಗ್ರಾಮದ ವಾಸಿಗಳ ಸಹಕಾರದಿಂದ ಹಾಗೂ ಅವರ ನೆರವಿನಿಂದ ತಮಗೆ ಗೊತ್ತಿರುವ ಮಾಹಿತಿಯನ್ನು ಅವರಿಗೆ ನೀಡಿ, ಅವರಿಂದ ಮಾಹಿತಿಯನ್ನು ಪಡೆದು ತಮ್ಮ ಬದುಕನ್ನು ಉತ್ತಮಗೊಳಿಸಿಕೊಳ್ಳುವ ಈ ಮಕ್ಕಳು ಮುಂದಿನ ದಿನಗಳಲ್ಲಿ ಉತ್ತಮ ಅಧಿಕಾರಿಗಳಾಗಲಿದ್ದಾರೆ ಎಂದರು.ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಂಡ ಗುನ್ನಾಗರೆ ಗ್ರಾಮದ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ. ಅದಕ್ಕಾಗಿ ಮುಂದೆ ತಮ್ಮ ಅಧಿಕಾರದ ಅವಧಿಯಲ್ಲಿ ಆ ಊರನ್ನು ನೆನಪು ಮಾಡಿಕೊಂಡು ಉತ್ತಮ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸ್ವಯಂಸೇವಕ ಸಂಘದ ಭರತೇಶ್, ಕಳೆದ ಮೂರು ತಿಂಗಳಿಂದ ನಮ್ಮ ಗ್ರಾಮದಲ್ಲಿ ಉಳಿದುಕೊಂಡ ವಿದ್ಯಾರ್ಥಿಗಳು ಹಳ್ಳಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಬಹಳ ಕಷ್ಟಪಟ್ಟಿದ್ದಾರೆ. ಅಂತಹ ಸಂದರ್ಭದಲ್ಲಿ ಆಗಿರುವ ತೊಂದರೆಗಳಿಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ. ಅದನ್ನು ತಕ್ಷಣಕ್ಕೆ ಮರೆತು ಇಲ್ಲಿ ಸಿಕ್ಕಿರುವ ಅನುಭವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ದಿನಗಳಲ್ಲಿ ತಮ್ಮ ಭವಿಷ್ಯವನ್ನು ಬದಲಾಯಿಸಿಕೊಳ್ಳಬೇಕೆಂದು ಸಲಹೆ ನೀಡಿದರು.ಗ್ರಾಪಂ ಅಧ್ಯಕ್ಷರಾದ ಶಿವಮ್ಮ, ಮುಖಂಡರಾದ ಬೆಟ್ಟಸ್ವಾಮಿ, ಭರತೇಶ್, ಡಾ. ಬಿ. ಶಿವಣ್ಣ, ಮಂಜುನಾಥ್, ಮಹಾದೇವ, ಗ್ರಾಮಸ್ಥರಾದ ರಂಗಪ್ಪ, ಮಾಯಣ್ಣ, ಜಯಪ್ರಕಾಶ್, ಶಿವರಾಜು ಸೇರಿದಂತೆ ಇತರರು ಇದ್ದರು.
ಗುನ್ನಾಗರೆಯಲ್ಲಿ ಬೆಳೆದ ಕ್ಯಾರೆಟ್ ಮತ್ತು ಚಿಯ:ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ತಮ್ಮ ಕಾರ್ಯಾನುಭವ ಕ್ಷೇತ್ರದಲ್ಲಿ 35ಕ್ಕಿಂತ ಹೆಚ್ಚು ಬೆಳೆಗಳನ್ನು ಬೆಳೆದಿದ್ದು, ಕ್ಯಾರೆಟ್ ಮತ್ತು ಚಿಯಾ ಬೆಳೆಗಳು ರೈತರನ್ನು ಆಕರ್ಷಣೆ ಮಾಡಿತು.
ದುಬಾರಿ ಬೆಲೆಯ ವಸ್ತು ಎಂದೇ ಗುರುತಿಸಲಾದ ಚಿಯಾ, ಬಯಲು ಸೀಮೆಯಲ್ಲಿ ಬೆಳೆಯಲು ಆಗದೇ ಇರುವ ಕ್ಯಾರೆಟ್ಟನ್ನು ಬೆಳೆದು ಸಾರ್ವಜನಿಕರು ಹಾಗೂ ರೈತರಿಂದ ವಿದ್ಯಾರ್ಥಿಗಳು ಶಹಬ್ಬಾಷ್ ಎನಿಸಿಕೊಂಡರು, ನೀರಿನ ತಾಕು, ನಿರ್ವಹಣೆ, ಮಳೆ ನೀರು ಕೊಯ್ಲು, ಪಶು ಸಂಗೋಪನೆ, ಬಯಲುಸೀಮೆಯಲ್ಲಿ ನೀರು ನಿರ್ವಹಣೆ, ಕೀಟ ನಿರ್ವಹಣೆ ಮತ್ತು ರೋಗಗಳ ತಡೆ ಹೀಗೆ ಹಲವಾರು ವಿಧಗಳಲ್ಲಿ ತಾಕುಗಳನ್ನು ಬೆಳೆದು ರೈತರಿಗೆ ತೋರಿಸಿದರು. ಸುತ್ತಮುತ್ತಲಿನ ಹಲವಾರು ಗ್ರಾಮದ ರೈತರು ಭೇಟಿ ನೀಡಿ ಬೆಳೆಗಳನ್ನು ವೀಕ್ಷಿಸಿ ಮಾಹಿತಿ ಪಡೆದು ತಮ್ಮ ತೋಟದಲ್ಲಿ ಅಳವಡಿಸಿಕೊಳ್ಳುವ ಅಭಿಪ್ರಾಯ ವ್ಯಕ್ತಪಡಿಸಿದರು.---