ಸಂವಿಧಾನ ಬದಲಿಸಲು ಅದೇನು ಮಗ್ಗಿ ಪುಸ್ತಕವೇ: ಮಾಜಿ ಸಚಿವ ಮಹೇಶ್

| Published : May 04 2024, 12:34 AM IST

ಸಂವಿಧಾನ ಬದಲಿಸಲು ಅದೇನು ಮಗ್ಗಿ ಪುಸ್ತಕವೇ: ಮಾಜಿ ಸಚಿವ ಮಹೇಶ್
Share this Article
  • FB
  • TW
  • Linkdin
  • Email

ಸಾರಾಂಶ

2015ರಲ್ಲಿ ಸಂವಿಧಾನ ಬದಲಿಸುವ ಹೇಳಿಕೆ ನೀಡಿದ ಅಂದಿನ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಪಕ್ಷ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿತು.

ಬಳ್ಳಾರಿ: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತಾರೆ ಎಂದು ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ಸಂವಿಧಾನ ಬದಲಾಯಿಸಲು ಅದೇನು ಮಗ್ಗಿ ಪುಸ್ತಕವೇ? ಎಂದು ಮಾಜಿ ಸಚಿವ, ಬಿಜೆಪಿ ಧುರೀಣ ಎನ್.ಮಹೇಶ್ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಸಂವಿಧಾನ ಬದಲಾಗುತ್ತದೆ. ಮೀಸಲಾತಿ ರದ್ದಾಗುತ್ತದೆ ಎಂಬ ಎರಡು ಸುಳ್ಳುಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಚುನಾವಣಾ ಪ್ರಚಾರ ಮಾಡುತ್ತಿದೆ. ಈ ಮೂಲಕ ದಲಿತ ಸಮುದಾಯದ ಬ್ರೈನ್ ವಾಶ್ ಮಾಡುತ್ತಿದೆ ಎಂದರು.

2015ರಲ್ಲಿ ಸಂವಿಧಾನ ಬದಲಿಸುವ ಹೇಳಿಕೆ ನೀಡಿದ ಅಂದಿನ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಪಕ್ಷ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿತು. ಕ್ಷಮಾಪಣೆ ಪತ್ರ ಸಹ ಬರೆಸಿಕೊಂಡಿತು. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಹೆಗಡೆ ಅವರಿಗೆ ಟಿಕೆಟ್ ಸಹ ನೀಡಲಿಲ್ಲ. ಪ್ರಧಾನಿ ನರೇಂದ್ರ ಮೋದಿ ನನ್ನ ಪ್ರಾಣ ಇರುವವರೆಗೆ ಸಂವಿಧಾನ ಬದಲಿಸಲು ಬಿಡುವುದಿಲ್ಲ. ಮೀಸಲಾತಿ ತೆಗೆದು ಹಾಕುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಇಷ್ಟಾಗಿಯೂ ಕಾಂಗ್ರೆಸ್‌ನವರು ಬರೀ ಸುಳ್ಳು ಹೇಳಿಕೊಂಡು ಬಿಜೆಪಿ ವಿರುದ್ಧ ವಿನಾಕಾರಣದ ಆರೋಪಗಳನ್ನು ಮಾಡುತ್ತಿದೆ ಎಂದು ದೂರಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ/ ಪಂಡಗಳಿಗೆ ಮೀಸಲಿಟ್ಟಿದ್ದ ಅಭಿವೃದ್ಧಿಯ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡು ಅನ್ಯಾಯ ಮಾಡಿದೆ. ಗ್ಯಾರಂಟಿ ಯೋಜನೆ ಜಾರಿ ಬಳಿಕ ಸರ್ಕಾರದ ಖಜಾನೆ ಖಾಲಿಯಾಗಿದೆ. ರಾಜ್ಯದಲ್ಲಿ ಎಲ್ಲೂ ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿಲ್ಲ. ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಸಂಪೂರ್ಣ ಕುಸಿದಿದೆ ಎಂದು ತಿಳಿಸಿದರು.

ದಲಿತ, ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಬಿಜೆಪಿ ಹೆಚ್ಚು ಆದ್ಯತೆ ನೀಡಿದೆ. ಪರಿಶಿಷ್ಟರ ಕಲ್ಯಾಣಕ್ಕಾಗಿ ಹೆಚ್ಚಿನ ಅನುದಾನ ಕೊಟ್ಟು ಪ್ರೋತ್ಸಾಹಿಸಿದೆ. ಹೀಗಾಗಿ ಬಳ್ಳಾರಿ ಲೋಕಸಭಾ ಕ್ಷೇತ್ರದ ದಲಿತ, ಹಿಂದುಳಿದ ಸಮುದಾಯಗಳು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ, ಮುರಹರಿಗೌಡ ಗೋನಾಳ್, ಎಚ್.ಹನುಮಂತಪ್ಪ, ಗಣಪಾಲ್ ಐನಾಥರೆಡ್ಡಿ, ಮಾರುತಿ ಪ್ರಸಾದ್, ಶಿವಶಂಕರ್, ತಿಪ್ಪೇಸ್ವಾಮಿ, ದಾಸರಿ ಗೋವಿಂದ್, ಅರುಣಾಚಲಂ, ರಾಜೇಶ್, ರಾಜೀವ್ ತೊಗರಿ ಸುದ್ದಿಗೋಷ್ಠಿಯಲ್ಲಿದ್ದರು.