ಸಾರಾಂಶ
ಬೆಂಗಳೂರು : ಹಳದಿ ಮಾರ್ಗಕ್ಕೆ ಶೀಘ್ರವೇ ನಾಲ್ಕನೇ ರೈಲು ಸೆಪ್ಟೆಂಬರ್ ಮೊದಲ ವಾರದಲ್ಲಿ ಸೇರ್ಪಡೆಯಾಗುತ್ತಿದ್ದು, ಅಕ್ಟೋಬರ್ ಬಳಿಕ ಪ್ರತಿ ತಿಂಗಳಿಗೆ 2 ರೈಲುಗಳು ಬರಲಿದ್ದು, ಈಗಿನ ಕಾಯುವಿಕೆ ಅವಧಿ ತಗ್ಗಲಿದೆ.ಬುಧವಾರ ನಾಲ್ಕನೇ ರೈಲಿನ ಮೂರು ಬೋಗಿಗಳು ಇಲ್ಲಿನ ಹೆಬ್ಬಗೋಡಿ ಡಿಪೋ ತಲುಪಿದ್ದು ಇನ್ನೊಂದು ತಿಂಗಳಲ್ಲಿ ಈ ರೈಲು ವಾಣಿಜ್ಯ ಸಂಚಾರದ ಕಾರ್ಯಾಚರಣೆಗೆ ಲಭ್ಯವಾಗಲಿದೆ.
ಹಳದಿ ಮಾರ್ಗಕ್ಕಾಗಿ ಎರಡು ವಾರದ ಹಿಂದೆ ರಸ್ತೆ ಮಾರ್ಗದ ಮೂಲಕ ತಿತಾಘಡ್ ರೈಲ್ ಸಿಸ್ಟಂ 4ನೇ ರೈಲಿನ ಮೂರು ಬೋಗಿಗಳನ್ನು ರವಾನಿಸಿತ್ತು. ಇದೀಗ ಇಲ್ಲಿನ ಹೆಬ್ಬಗೋಡಿ ಮೆಟ್ರೋಕ್ಕೆ ತಲುಪಿದೆ. ಇನ್ನೆರಡು ದಿನಗಳಲ್ಲಿ ಉಳಿದ ಮೂರು ಬೋಗಿಗಳು ತಲುಪಲಿವೆ. ಮುಂದಿನ ಹದಿನೈದು ದಿನಗಳಲ್ಲಿ ಈ ರೈಲು ಜೋಡಣೆ ಆಗಿ ವಿವಿಧ ತಪಾಸಣೆಗೆ ಒಳಗಾಗಲಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಕಾರ್ಯಾಚರಣೆಗೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದರು.
ಹಳದಿ ಮಾರ್ಗಕ್ಕೆ ಒಟ್ಟು 15 ರೈಲುಗಳ ಮೀಸಲಾಗಿದ್ದು, ಸದ್ಯ ಮೂರು ರೈಲುಗಳಿವೆ. ಇನ್ನು 12 ರೈಲುಗಳು ಸೇರ್ಪಡೆ ಆಗಬೇಕಿದೆ. ಮುಂದಿನ ವರ್ಷ ಮಾರ್ಚ್ ಒಳಗೆ ಇವೆಲ್ಲವೂ ಬರಲಿವೆ. ಅಕ್ಟೋಬರ್ ಬಳಿಕ ಪ್ರತಿ ತಿಂಗಳಿಗೆ ಎರಡೆರಡು ರೈಲುಗಳು ಬಂದು ಸೇರ್ಪಡೆ ಆಗಲಿವೆ. ಆ ಬಳಿಕ ಪ್ರತಿ 90 ಸೆಕೆಂಡ್‌ಗೆ ಒಂದರಂತೆ ರೈಲುಗಳು ಓಡಾಡಲಿವೆ. ಸದ್ಯ 25 ನಿಮಿಷಕ್ಕೊಂದರಂತೆ ರೈಲುಗಳು ಓಡಾಡುತ್ತಿದ್ದು ರೈಲುಗಳು ಸೇರ್ಪಡೆ ಆಗುತ್ತಿದ್ದಂತೆ ಆವರ್ತನ ಅವಧಿ ಹಂತ ಹಂತವಾಗಿ ಕಡಿಮೆ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡನೇ ದಿನವೂ 10 ಲಕ್ಷ ಜನ! ಹಳದಿ ಮಾರ್ಗ ಆರಂಭವಾದ ಎರಡನೇ ದಿನವೂ (ಆ.12) ನಮ್ಮ ಮೆಟ್ರೋದ ಪ್ರಯಾಣಿಕರ ಸಂಖ್ಯೆ 10 ಲಕ್ಷ ದಾಟಿದೆ. ಬುಧವಾರ ಒಟ್ಟೂ ಮೂರು ಮಾರ್ಗ ಸೇರಿ 1032687 ಜನ ಸಂಚಾರ ಮಾಡಿದ್ದಾರೆ. ಈ ಪೈಕಿ 263412 ಟೋಕನ್, 208766 ಕ್ಯೂಆರ್ ಕೋಡ್ ಟಿಕೆಟ್, 34320 ಎನ್‌ಸಿಎಂಸಿ ಕಾರ್ಡ್, 576 ಗುಂಪು ಟಿಕೆಟ್ ಬಳಕೆ ಆಗಿದೆ.
ವಿಡಿಯೋ ವೈರಲ್
ಹಳದಿ - ಹಸಿರು ಮೆಟ್ರೋ ಇಂಟರ್‌ಚೇಂಜ್ ಆರ್.ವಿ.ರಸ್ತೆ ಮೆಟ್ರೋ ನಿಲ್ದಾಣದಿಂದ ಎಲಿವೆಟೆಡ್‌ನಲ್ಲಿ ರೈಲುಗಳ ಓಡಾಟ ಡ್ರೋನ್ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಈ ದೃಶ್ಯಕ್ಕೆ ಸಿಲಿಕಾನ್ ಸಿಟಿ ಜನ ಮನಸೋತಿದ್ದಾರೆ. ಏಕಕಾಲಕ್ಕೆ ಹಳದಿ ಮತ್ತು ಹಸಿರು ಲೇನ್ ಮೆಟ್ರೋ ಮಾರ್ಗದಲ್ಲಿ ನಾಲ್ಕು ರೈಲುಗಳು ಒಟ್ಟಿಗೆ ಹಾದು ಹೋಗುವ ದೃಶ್ಯ ಇದಾಗಿದೆ.
ಹಳದಿ ಲೈನ್‌ನಲ್ಲಿ ಹೆಚ್ಚು ಹೊತ್ತು ಇದ್ರೆ ದಂಡ!
ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ರೈಲನ್ನು ಮಿಸ್ ಮಾಡಿಕೊಂಡು ಇನ್ನೊಂದು ರೈಲಿಗೆ ಕಾಯುತ್ತಿದ್ದರೆ ದಂಡ ತೆರಬೇಕಾಗಿದೆ! ಹೀಗೊಂದು ಎಡವಟ್ಟನ್ನು ಬಿಎಂಆರ್‌ಸಿಎಲ್ ಮಾಡಿದ್ದು, ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಯಾಣಿಕರೊಬ್ಬರು 20 ನಿಮಿಷಕ್ಕಿಂತ ಹೆಚ್ಚು ಸಮಯ ರೈಲಿಗಾಗಿ ಕಾದಿದ್ದಕ್ಕೆ ₹50 ದಂಡ ಪಾವತಿಸಿದ್ದಾರೆ. ಇನ್ನೊಬ್ಬ ಪ್ರಯಾಣಿಕರು ₹100 ದಂಡ ಪಾವತಿಸಿದ ಘಟನೆಗಳು ನಡೆದಿದೆ. ಸದ್ಯ ಹಳದಿ ಮಾರ್ಗದಲ್ಲಿ 25 ನಿಮಿಷಕ್ಕೊಂದು ರೈಲು ಸಂಚಾರ ನಡೆಸುತ್ತಿರುವುದರಿಂದ ಈ ಮಾರ್ಗಕ್ಕೂ ಮೆಟ್ರೊ ಈ ನಿಯಮದಡಿ ದಂಡ ವಿಧಿಸುತ್ತಿರುವುದು ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.
ಸಿಲ್ಕ್ ಬೋರ್ಡ್‌ನಿಂದ ಆರ್.ವಿ. ರಸ್ತೆಗೆ ಪ್ರಯಾಣಿಸಬೇಕಿದ್ದ ಪ್ರಯಾಣಿಕರೊಬ್ಬರು ಟಿಕೆಟ್ ಪಡೆದು ಒಳಗೆ ಹೋಗಿದ್ದಾರೆ. ರೈಲು ಬರುವವರೆಗೂ ಕಾದಿದ್ದಾರೆ. ಆದರೆ, ಪ್ರಯಾಣಿಕರ ದಟ್ಟಣೆ ಇದ್ದುದರಿಂದ ರೈಲು ಹತ್ತಲು ಸಾಧ್ಯವಾಗಿಲ್ಲ. ಬಳಿಕ ಮುಂದಿನ ರೈಲಿಗಾಗಿ 25 ನಿಮಿಷ ಕಾಯಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ನಿಲ್ದಾಣದಿಂದ ಹೊರ ಬರಲು ತೀರ್ಮಾನಿಸಿದ್ದಾರೆ. ಆದರೆ, ಹೊರಗೆ ಬರುವಾಗ 20 ನಿಮಿಷಕ್ಕಿಂತ ಹೆಚ್ಚು ಸಮಯ ನಿಲ್ದಾಣದಲ್ಲಿ ಉಳಿದುಕೊಂಡ ಹಿನ್ನೆಲೆಯಲ್ಲಿ ಬಿಎಂಆರ್‌ಎಲ್ ಸಿಬ್ಬಂದಿ ₹ 50 ದಂಡ ವಿಧಿಸಿದ್ದಾರೆ.
ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಮೂರು ನಿಮಿಷಕ್ಕೊಂದು ಹಾಗೂ ಉಳಿದೆಡೆ 10 ನಿಮಿಷಕ್ಕೆ ಒಂದರಂತೆ ಮೆಟ್ರೊ ರೈಲು ಸಂಚಾರ ಮಾಡುತ್ತಿವೆ. ಅಂತಹ ನಿಲ್ದಾಣಗಳಲ್ಲಿ ಹೆಚ್ಚು ಹೊತ್ತು ಕಳೆದರೆ ದಂಡ ವಿಧಿಸುವುದರಲ್ಲಿ ಅರ್ಥವಿದೆ. ಆದರೆ, ಹಳದಿ ಮಾರ್ಗದಲ್ಲಿ ಕೇವಲ ಮೂರು ರೈಲುಗಳು ಸಂಚಾರ ಮಾಡುತ್ತಿವೆ. ಒಂದು ರೈಲು ಹೋಗಿ ಇನ್ನೊಂದು ರೈಲು ಬರುವುದಕ್ಕೆ 25 ನಿಮಿಷ ಬೇಕು. ಒಂದು ವೇಳೆ ರೈಲು ಮಿಸ್ ಮಾಡಿಕೊಂಡರೆ ಮುಂದಿನ ರೈಲು ಬರುವವರೆಗೂ ಪ್ರಯಾಣಿಕ ನಿಲ್ದಾಣದೊಳಗೆ ಕಾಯಬೇಕು. ಹೀಗಾಗಿ, ಸದ್ಯ ಹಳದಿ ಲೈನ್‌ನಲ್ಲಿ ಹೊಸ ರೀತಿಯ ಗೊಂದಲಗಳು ಸೃಷ್ಟಿಯಾಗುತ್ತಿದ್ದು, ಪ್ರಯಾಣಿಕರಿಗೆ ತೊಂದರೆಯುಂಟಾಗಿದೆ.