ಸಾರಾಂಶ
ಬಸವರಾಜ ಹಿರೇಮಠ ಧಾರವಾಡ
ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಸ್ಥಾನ ಮೀಸಲು ಇಡಬೇಕೆಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ ಧಾರವಾಡ ಜಿಲ್ಲೆಯಲ್ಲಿ ಸರ್ಕಾರದ ಬಹುತೇಕ ಪ್ರಮುಖ ಸ್ಥಾನಗಳನ್ನು ಮಹಿಳೆಯರು ಅಲಂಕರಿಸಿದ್ದಾರೆ!ಮಹಿಳೆಯರು ಪುರುಷರಿಗೇನೂ ಕಡಿಮೆ ಇಲ್ಲ, ಅವರು ತಮಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬಲ್ಲರು ಎಂಬುದನ್ನು ಸಿದ್ಧಪಡಿಸುವ ಒಂದು ಉತ್ತಮ ಅವಕಾಶ ಇದೀಗ ಧಾರವಾಡ ಜಿಲ್ಲೆಯ ಮಹಿಳಾ ಅಧಿಕಾರಿಗಳಿಗೆ ಲಭಿಸಿದೆ.
ಈ ಹಿಂದೆ ಐದು ಪ್ರಮುಖ ಹುದ್ದೆಗಳನ್ನು ಮಹಿಳೆಯರು ಅಲಂಕರಿಸಿದ್ದು, ಈಗ ನೂತನ ಜಿಲ್ಲಾಧಿಕಾರಿಯಾಗಿ ದಿವ್ಯಪ್ರಭು ಜೆ.ಆರ್.ಜಿ. ಅಧಿಕಾರ ವಹಿಸಿಕೊಳ್ಳುವ ಮೂಲಕ ಸೇರ್ಪಡೆಯಾಗಿದ್ದಾರೆ. ಧಾರವಾಡ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಇಷ್ಟು ಸಂಖ್ಯೆಯ ಪ್ರಮುಖ ಹುದ್ದೆಗಳನ್ನು ಮಹಿಳೆಯರು ಅಲಂಕರಿಸಿದ್ದು ಒಂದು ದಾಖಲೆಯಾಗಿದೆ.ಜಿಲ್ಲಾಧಿಕಾರಿ ಮಹಿಳೆ: 2014ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ದಿವ್ಯಪ್ರಭು ಮೂಲತಃ ತಮಿಳುನಾಡಿನವರು. 2014ರ ಯುಪಿಎಸ್ಸಿ ತೇರ್ಗಡೆ ನಂತರ ತಮ್ಮ ಸೇವೆಯನ್ನು ರಾಯಚೂರಿನ ಲಿಂಗಸಗೂರ ಉಪ ವಿಭಾಗಾಧಿಕಾರಿಯಾಗಿ ಆರಂಭಿಸಿದರು. ನಂತರ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರಾಗಿ ಕೆಲ ಕಾಲ ಸೇವೆ ಸಲ್ಲಿಸಿದ ಇವರು, ಮಂಡ್ಯ ಜಿಲ್ಲೆಯ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಹಾಗೂ ಧಾರವಾಡ ಜಿಲ್ಲಾಧಿಕಾರಿಯಾಗುವ ಮುಂಚೆ ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಹತ್ತು ವರ್ಷಗಳ ಸರ್ಕಾರಿ ಸೇವೆಯಲ್ಲಿ ಅವರಿಗೆ ರಾಷ್ಟ್ರೀಯ ಪುರಸ್ಕಾರ ದೊರೆತಿದ್ದು, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕನ್ನು ರಾಷ್ಟ್ರೀಯ ಸ್ವಚ್ಛ ಸರ್ವೇಕ್ಷಣಾ ಅಭಿಯಾನದ ಅಚ್ಚುಕಟ್ಟಾಗಿ ಜಾರಿಗೊಳಿಸಿದ್ದಕ್ಕೆ ಕೇಂದ್ರ ಸರ್ಕಾರವು ಈ ಪುರಸ್ಕಾರ ನೀಡಿದೆ.
ಮೇಯರ್, ಜಿಪಂ, ಎಡಿಸಿ: ಹು-ಧಾ ಮಹಾನಗರ ಪಾಲಿಕೆಯ ಮೇಯರ್ ವೀಣಾ ಭರದ್ವಾಡ ಅವರು 2023ರ ಅಕ್ಟೋಬರ್ ತಿಂಗಳಲ್ಲಿ ಪ್ರಥಮ ಪ್ರಜೆಯಾಗಿ ಆಯ್ಕೆಗೊಂಡರು. ಹಿರಿಯ ಐಪಿಎಸ್ ಅಧಿಕಾರಿ ರೇಣುಕಾ ಸುಕುಮಾರ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿ ಸರ್ಕಾರದಿಂದ ನೇಮಕವಾದರು. ಹಾಗೆಯೇ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸ್ವರೂಪಾ ಟಿ.ಕೆ. ಹಾಗೂ ಹಿರಿಯ ಕೆಎಎಸ್ ಅಧಿಕಾರಿ ಗೀತಾ ಸಿ.ಡಿ. ಅವರು ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು, ಶಾಲಾ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಆಯುಕ್ತರಾಗಿ ಜಯಶ್ರೀ ಶಿಂತ್ರಿ ಕಳೆದ ಒಂದು ವರ್ಷದಿಂದ ಧಾರವಾಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಾ. ಶಶಿ ಪಾಟೀಲ ಅವರು ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಮುನ್ನಡೆಸುತ್ತಿದ್ದಾರೆ.ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ ಹೊರತು ಪಡಿಸಿ ಬಹುತೇಕರು ಮಹಿಳಾ ಅಧಿಕಾರಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇದು ಧಾರವಾಡ ಜನರಲ್ಲಿ ಒಂದು ಹೊಸ ಹುಮ್ಮಸ್ಸು ಮೂಡಿಸಿದೆ. ಧಾರವಾಡ ಕಲೆ, ಸಂಸ್ಕೃತಿ, ಶಿಕ್ಷಣ, ಸಂಗೀತ ಹಾಗೂ ಸಾಹಿತ್ಯಕ್ಕೆ ತನ್ನದೇ ಆದ ಛಾಪು ಮೂಡಿಸಿದ್ದು, ಈ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರ ಕೊಡುಗೆ ಅಪಾರ.
ಈಗ ಸರ್ಕಾರಿ ಆಡಳಿತ ಯಂತ್ರದಲ್ಲಿ ಕೂಡಾ ಮುಖ್ಯ ಹುದ್ದೆಗಳನ್ನು ಮಹಿಳೆಯರಿಗೆ ಲಭಿಸಿದ್ದು ಜಿಲ್ಲೆಯ ಆಡಳಿತದ ನಕ್ಷೆಯಲ್ಲಿ ತಮ್ಮದೆಯಾದ ಗುರುತು ಮೂಡಿಸುವ ಅವಕಾಶ ಲಭಿಸಿದ್ದು, ಅಭಿವೃದ್ಧಿ ದೃಷ್ಟಿಯಿಂದ ಈ ಮಹಿಳಾ ಅಧಿಕಾರಿಗಳು ಒಂದು ತಂಡವಾಗಿ ಯಾವ ರೀತಿ ಕಾರ್ಯ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.ಆರೋಗ್ಯ, ಶಿಕ್ಷಣ, ಗ್ರಾಮೀಣ ಅಭಿವೃದ್ಧಿ, ಮಹಿಳೆಯರ, ದುರ್ಬಲ ವರ್ಗದವರ ಏಳಿಗೆಯೊಂದಿಗೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ, ನೌಕರರ, ಸಾರ್ವಜನಿಕರ ಸಹಕಾರದಿಂದ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾರ್ಯ ನಿರ್ವಹಿಸುತ್ತೇನೆ ಎಂದು ನೂತನ ಜಿಲ್ಲಾಧಿಕಾರಿ ದಿವ್ಯಪ್ರಭು ಜೆ.ಆರ್.ಜಿ. ಹೇಳಿದರು.