ಸಾರಾಂಶ
ರಫೀಕ್ ಕಲೇಗಾರ
ಅಣ್ಣಿಗೇರಿ: ಶನಿವಾರದಿಂದ ಆರಂಭಗೊಂಡಿರುವ ಧಾರವಾಡ ಕೃಷಿ ಮೇಳದಲ್ಲಿ ಈ ಬಾರಿ ಅಣ್ಣಿಗೇರಿಯಲ್ಲಿ ಸಿದ್ಧಗೊಳ್ಳುತ್ತಿರುವ ಕೃಷಿ ಯಂತ್ರೋಪಕರಣಗಳು ರೈತರ ಗಮನ ಸೆಳೆಯುತ್ತಿವೆ. ಮೇಳಕ್ಕೆ ಬರುವ ಬಹುತೇಕ ರೈತರು ಈ ಯಂತ್ರಗಳತ್ತ ಒಂದು ಸುತ್ತು ಹಾಕಿ ವಿಚಾರಿಸಿ ಹೋಗುತ್ತಿದ್ದಾರೆ.ಅಣ್ಣಿಗೇರಿಯಲ್ಲಿ ಕೃಷಿಯೇ ಪ್ರಮುಖ ಉದ್ಯೋಗವಾಗಿತ್ತು. ಆದರೆ, ಈಗ ಇಲ್ಲಿಯೇ ಹಲವರು ಕೃಷಿ ಯಂತ್ರೋಪಕರಣ ಆವಿಷ್ಕಾರ ಮಾಡುತ್ತ ಉದ್ಯಮಿಗಳಾಗಿದ್ದಾರೆ. ಈ ಮೂಲಕ ರಾಷ್ಟ್ರಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ.
ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಡಕಟ್ಟಿನ, ಬಿಸ್ಮಿಲ್ಲಾಹ ಕೂರಿಗೆಗಳು ರಾಜ್ಯದಲ್ಲಿ ಉತ್ಪಾದನೆ, ಮಾರಾಟದಲ್ಲಿ ನಂಬರ್ ಒನ್ ಸಂಸ್ಥೆಗಳಾಗಿ ಹೊರ ಹೊಮ್ಮಿವೆ.ಕೃಷಿ ವಿಜ್ಞಾನಿ ಡಾ. ನಡಕಟ್ಟಿನ: ಹೊಸ ಯಂತ್ರೋಪಕರಣ ಕಂಡು ಹಿಡಿದು ಅನ್ನದಾತರ ಶ್ರಮ ಹಗುರು ಮಾಡಿರುವ ಡಾ. ನಡಕಟ್ಟಿನ ಇವರ ಸಾಧನೆಗೆ ರಾಷ್ಟ್ರ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಮುುಖ ಪ್ರಶಸ್ತಿಗಳು ಬಂದಿವೆ. ಕೃಷಿ ವಿಜ್ಞಾನಿ ಎಂದು ಹೆಸರು ಪಡೆದ ಡಾ.ಎ.ಐ. ನಡಕಟ್ಟಿನ ರೈತರ ಸೇವೆ ಈಶ ಸೇವೆ ಎಂದು ಭಾವಿಸಿದವರು.
ರೈತಸ್ನೇಹಿ ಕೂರಿಗೆ: ಕಳೆದ 2 ದಶಕದಿಂದ ರೈತರ ಶ್ರಮ ಕಡಿಮೆ ಮಾಡುವ ಬಗೆಬಗೆಯ ಕೂರಿಗೆ ಸಿದ್ಧಪಡಿಸುವಲ್ಲಿ ಅಣ್ಣಿಗೇರಿ ಬಿಸ್ಮಿಲ್ಲಾಹ ಅಗ್ರೋ ಇಂಪ್ಲಿಮೆಂಟ್ಸ್ ಹೆಸರು ಪಡೆದಿದೆ. ಕೃಷಿ ಇಲಾಖೆ ಸಬ್ಸಿಡಿ ದರದಲ್ಲಿ ಯಂತ್ರೋಪಕರಣ ನೀಡುತ್ತಿದ್ದಾರೆ. ಈ ನಡಕಟ್ಟಿನ ಹಾಗೂ ಬಿಸ್ಮಿಲ್ಲಾಹ ಕೂರಿಗೆಗಳು ರಾಷ್ಟ್ರಮಟ್ಟದಲ್ಲಿ ಸುದ್ದು ಮಾಡುತ್ತಿವೆ.ಶನಿವಾರದಿಂದ ಆರಂಭವಾಗಿರುವ ಧಾರವಾಡ ಕೃಷಿಮೇಳದಲ್ಲಿ ಅಣ್ಣಿಗೇರಿಯ ನಡಕಟ್ಟೀನ, ಬಿಸ್ಮಿಲ್ಲಾಹದ ಯಂತ್ರೋಪಕರಣಗಳು ರೈತರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಶನಿವಾರ ಮತ್ತು ಭಾನುವಾರ ಎರಡು ದಿನಗಳಲ್ಲಿ 50 ಸಾವಿರಕ್ಕೂ ಅಧಿಕ ರೈತರು ಮಳಿಗೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ರೈತಸ್ನೇಹಿ ಬಿಸ್ಮಿಲ್ಲಾಹ ಅಗ್ರೋ ಇಂಪ್ಲಿಮೆಂಟ್ಸ್‌ದಿಂದ ಸುಮಾರು ಎರಡು ದಶಕಗಳಿಂದ ಕೃಷಿಯಂತ್ರೋಪಕರಣ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಜತೆಗೆ ರೈತರಿಗೆ ಅನಕೂಲವಾಗಲಿ ಎಂಬ ಉದ್ದೇಶದಿಂದ ಸಬ್ಸಿಡಿ ದರದಲ್ಲೂ ನೀಡಲಾಗುತ್ತಿದೆ. ಕೃಷಿ ಮೇಳದಲ್ಲಿ ನಮಗೆ ಹೆಚ್ಚಿನ ಸ್ಪಂಧನೆ ದೊರೆಯುತ್ತಿದೆ ಎಂದು ಬಿಸ್ಮಿಲ್ಲಾಹ ಅಗ್ರೋ ಇಂಪ್ಲಿಮೆಂಟ್ಸ್‌ನ ಮಾಲಿಕ ಖಾಜಾಹುಸೇನ್ ಗುಳಗುಂದಿ ಹೇಳಿದರು.ಅಣ್ಣಿಗೇರಿಯ ನಡಕಟ್ಟಿನ ಬಿಸ್ಮಿಲ್ಲಾಹ ಸಂಸ್ಥೆಗಳು ನಾಡಿನಾದ್ಯಂತ ಹೆಸರು ಪಡೆದಿವೆ. ಮುಂದಿನ ದಿನಗಳಲ್ಲಿ ಅಣ್ಣಿಗೇರಿ ಪಟ್ಟಣವೂ ವಾಣಿಜ್ಯಕ್ಕೆ ಹೆಚ್ಚಿನ ಮನ್ನಣೆ ಪಡೆಯುವ ನಂಬಿಕೆಯಿದೆ. ಇಂತಹ ಸಂಸ್ಥೆಗಳು ಆರ್ಥಿಕವಾಗಿ ಹಿಂದುಳಿದ ಸ್ಥಳೀಯ ರೈತರಿಗೆ ಕಡಿಮೆ ಬೆಲೆಯಲ್ಲಿ ಯಂತ್ರೋಪಕರಣ ನೀಡುವ ಕಾರ್ಯಕ್ಕೆ ಮುಂದಾಗಬೇಕು ಎಂದು ರಾಜ್ಯ ರೈತ ಸಂಘದ ಯುವ ಮೂರ್ಚಾ ಉಪಾಧ್ಯಕ್ಷ ಷಣ್ಮುಖ ಗುರಿಕಾರ ಹೇಳಿದರು.
ಕೃಷಿಮೇಳದಲ್ಲಿ ಕೃಷಿ ಚಟುವಟಿಕೆಗಳಿಗೆ ಬೇಕಾಗಿರುವ ಕೂರಿಗೆ, ಕುಂಟೆ, ರೋಟವೇಟರ್ ಸೇರಿದಂತೆ ಹಲವಾರು ತಂತ್ರಜ್ಞಾನ ಅಳವಡಿಕೆ ಉಪಕರಣಗಳು ರೈತರಿಗೆ ಯೋಗ್ಯ ಬೆಲೆ ಮತ್ತು ಬಹು ಉಪಯುಕ್ತವಾಗಿವೆ. ಇದರಿಂದ ರೈತರಿಗೆ ಹೆಚ್ಚಿನ ಕೃಷಿ ಚಟುವಟಿಕೆ ಕೈಗೊಳ್ಳಲು ಸಹಕಾರಿಯಾಗಲಿದೆ ಎಂದು ಉದ್ಯಮಿ ಮತ್ತು ಪ್ರಗತಿಪರ ರೈತ ಚಂಬಣ್ಣ ಸುರಕೋಡ ಹೇಳಿದರು.