ಸಾರಾಂಶ
ನಮ್ಮ ಸಂವೇದನೆ ಜೀವಂತವಾಗಿರಲು ಕಲೆ, ಸಾಹಿತ್ಯ, ಸಂಗೀತ, ಜನಪದ ಇತರೆ ಕಲೆಗಳಿಗೆ ಪ್ರೋತ್ಸಾಹ ಕೊಡಬೇಕು.
ಕನ್ನಡಪ್ರಭ ವಾರ್ತೆ ಕೊಪ್ಪಳ
ಸೃಜನಶೀಲ ಕ್ಷೇತ್ರಗಳು ಬರಡಾಗುತ್ತಾ ಹೊರಟಿವೆ. ನಮ್ಮ ಸಂವೇದನೆ ಜೀವಂತವಾಗಿರಲು ಕಲೆ, ಸಾಹಿತ್ಯ, ಸಂಗೀತ, ಜನಪದ ಇತರೆ ಕಲೆಗಳಿಗೆ ಪ್ರೋತ್ಸಾಹ ಕೊಡಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಲ್ಲಮಪ್ರಭು ಬೆಟದೂರು ಹೇಳಿದರು.ನಗರದ ಅಂಚೆ ಕಚೇರಿಯ ಪ್ರಧಾನ ಕಚೇರಿಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಿನ್ನಾಳ ಕಲೆ ಬಹಳ ಶ್ರೇಷ್ಠ ಆದರೆ ಕಿನ್ನಾಳ ತಲುಪುವುದು ಬಹಳ ಕಷ್ಟ. ರಸ್ತೆ ತುಂಬಾ ಹದಗೆಟ್ಟಿದೆ. ಕಲಾ ಗ್ರಾಮ ಕಿನ್ನಾಳಕ್ಕೆ ಬೇಗನೆ ರಸ್ತೆ ಪಡಿಸಿ ಎಂಬ ಅಭಿಯಾನ ಆರಂಭಿಸಬೇಕಿದೆ ಎಂದು ಕರೆ ನೀಡಿದರು.ಅಂಚೆ ನಿರೀಕ್ಷಕ ಮಹಾಂತೇಶ ತೊಗರಿ ಮಾತನಾಡಿ, ನೌಕರರು ಕರ್ತವ್ಯಕ್ಕೆ ಸೀಮಿತವಾಗಿದ್ದೇವು. ಕೊಪ್ಪಳ ಅಂಚೆ ಕಚೇರಿಗೆ ಇರುವ ಸಾಹಿತ್ಯ ಸಾಂಸ್ಕೃತಿಕ ನಂಟು, ಕಾರ್ಯಕ್ರಮಗಳಿಂದ ನಮಗೆ ತೃಪ್ತಿ ದೊರಕಿದೆ. ಕೊಪ್ಪಳ ವಿಭಾಗೀಯ ಅಂಚೆ ಕಚೇರಿಗಾಗಿ ನಡೆದ ಹೋರಾಟದಲ್ಲಿ ಬೆಟ್ಟದೂರು ಅವರ ಪಾತ್ರ ಮಹತ್ವದಾಗಿತ್ತು. ಕಲೆಯಲ್ಲಿಯೆ ಬದುಕು ಸವೆಸಿದ ರುಕ್ಮಿಣಿ ಬಾಯಿ ಅವರಿಗೆ ಪ್ರಶಸ್ತಿ ಸಂದಿರುವುದು ಹಾಗೂ ಇಬ್ಬರು ಮಹನೀಯರನ್ನು ಸನ್ಮಾನಿಸುವ ಅವಕಾಶ ದೊರೆತದ್ದು ನಮ್ಮೆಲ್ಲರ ಅದೃಷ್ಟ ಎಂದು ಹೇಳಿದರು.
ಸಾವಿತ್ರಿ ಮುಜುಮದಾರ, ಪ್ರಧಾನ ಅಂಚೆ ಕಚೇರಿ ಪಾಲಕ ನಾಗರಾಜ ಬಿ. ಮಾತನಾಡಿದರು. ಈ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಅಲ್ಲಮಪ್ರಭು ಬೆಟ್ಟದೂರು ಹಾಗೂ ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕ್ರತ ರುಕ್ಮಿಣಿ ಬಾಯಿ ಚಿತ್ರಗಾರ ಅವರಿಗೆ ಪ್ರಧಾನ ಅಂಚೆ ಕಚೇರಿಯಲ್ಲಿ ಸನ್ಮಾನ ಕಾರ್ಯಕ್ರಮ ಜರುಗಿತು. ಈ ಸಂದರ್ಭ ಸಾವಿತ್ರಿ ಮುಜುಮದಾರ ಪ್ರಾಯೋಜಿಸಿದ ಅಲ್ಲಮಪ್ರಭು ಬೆಟ್ಟದೂರು ಅವರ ಮೈ ಸ್ಟಾಂಪ್ ಅರ್ಪಣೆಯ ಕಾರ್ಯಕ್ರಮ ಜರುಗಿತು. ಜಿ.ಎನ್. ಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಭಾಷ ಮೊಟಮ್ಮನವರ ನಿರೂಪಿಸಿದರು.