ಕನ್ನಡಪ್ರಭ ವಾರ್ತೆ ಅಥಣಿ ಬೆಳಗಾವಿ ಜಿಲ್ಲೆಯನ್ನು ವಿಂಗಡಿಸಿ ನೂತನ ಜಿಲ್ಲೆಗಳನ್ನಾಗಿ ಮಾಡುವುದಾದರೆ ನಮ್ಮ ವಿರೋಧವಿಲ್ಲ. ಇತರೆ ಜಿಲ್ಲೆಗಳ ಘೋಷಣೆಯ ಜೊತೆಗೆ ಜಿಲ್ಲಾ ಕೇಂದ್ರದಿಂದ ಅತ್ಯಂತ ದೂರದಲ್ಲಿರುವ ಅಥಣಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಅಥಣಿ ಜಿಲ್ಲಾ ಹೋರಾಟ ಸಮಿತಿ ಕರೆ ನೀಡಿದ್ದ ಅಥಣಿ ಬಂದ್‌ ಯಶಸ್ವಿಯಾಗಿದೆ.

ಕನ್ನಡಪ್ರಭ ವಾರ್ತೆ ಅಥಣಿ

ಬೆಳಗಾವಿ ಜಿಲ್ಲೆಯನ್ನು ವಿಂಗಡಿಸಿ ನೂತನ ಜಿಲ್ಲೆಗಳನ್ನಾಗಿ ಮಾಡುವುದಾದರೆ ನಮ್ಮ ವಿರೋಧವಿಲ್ಲ. ಇತರೆ ಜಿಲ್ಲೆಗಳ ಘೋಷಣೆಯ ಜೊತೆಗೆ ಜಿಲ್ಲಾ ಕೇಂದ್ರದಿಂದ ಅತ್ಯಂತ ದೂರದಲ್ಲಿರುವ ಅಥಣಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಅಥಣಿ ಜಿಲ್ಲಾ ಹೋರಾಟ ಸಮಿತಿ ಕರೆ ನೀಡಿದ್ದ ಅಥಣಿ ಬಂದ್‌ ಯಶಸ್ವಿಯಾಗಿದೆ.

ಪಟ್ಟಣದ ವ್ಯಾಪಾರಸ್ಥರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಶಾಲಾ, ಕಾಲೇಜಿನ ಶಿಕ್ಷಕರು ಮತ್ತು ಉಪನ್ಯಾಸಕರು, ರೈತ ಸಂಘಟನೆ ಹಾಗೂ ಕನ್ನಡಪರ ಸಂಘಟನೆಗಳು ಸೇರಿದಂತೆ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಹೋರಾಟದಲ್ಲಿ ಭಾಗವಹಿಸಿ ಅಥಣಿ ಜಿಲ್ಲಾ ಕೇಂದ್ರ ಘೋಷಣೆ ಮಾಡುವಂತೆ ಹಾಕ್ಕೋತ್ತಾಯ ಮಾಡಿದರು.

ಗಚ್ಚಿನ ಮಠದಿಂದ ಶಿವಬಸವ ಸ್ವಾಮೀಜಿ ಹಾಗೂ ಶೆಟ್ಟರ ಮಠದ ಮರುಳಸಿದ್ದ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪ್ರತಿಭಟನಾ ಮೆರವಣಿಗೆ ಮುರುಘೇಂದ್ರ ಬ್ಯಾಂಕ್ ಮಾರ್ಗವಾಗಿ ಮುಖ್ಯಬೀದಿ ಮಾರ್ಗವಾಗಿ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡಿತು. ಬಸವಣ್ಣನವರ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ಪ್ರತಿಭಟನೆ ಆರಂಭಿಸಲಾಯಿತು.

ಪ್ರತಿಭಟನೆಯಲ್ಲಿ ಗಚ್ಚಿನಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಬೆಳಗಾವಿ ಜಿಲ್ಲಾ ಕೇಂದ್ರದಿಂದ 200 ಕಿ.ಮೀ ದೂರದಲ್ಲಿರುವ ಅಥಣಿಯನ್ನ ಜಿಲ್ಲೆಯನ್ನಾಗಿ ಘೋಷಿಸಿ ಎಂಬ ಹೋರಾಟದ ಕೂಗು ಕಳೆದ ಹತ್ತು ವರ್ಷಗಳಿಂದ ನಡೆದಿದೆ. ನಮ್ಮ ಜನಪ್ರತಿನಿಧಿಗಳು ಜನರ ಅಶೋತ್ತರಗಳಿಗೆ ಸ್ಪಂದಿಸಬೇಕು. ಅಥಣಿ ಕ್ಷೇತ್ರ ಸೇರಿದಂತೆ ಸುತ್ತಮುತ್ತಲ ಮತಕ್ಷೇತ್ರಗಳ ಶಾಸಕರು ಒಗ್ಗಟ್ಟಿನಿಂದ ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕು. ಅಥಣಿ ಜಿಲ್ಲಾ ಹೋರಾಟ ಸಮಿತಿಯ ನಿಯೋಗವನ್ನು ಭೇಟಿ ಮಾಡಿಸಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಸಬೇಕು ಎಂದರು.

ಈ ಭಾಗದ ಜನಪ್ರತಿನಿಧಿಗಳು ಅಧಿವೇಶನದಲ್ಲಿ ಅಥಣಿಯನ್ನು ಜಿಲ್ಲೆ ಘೋಷಿಸುವ ಮೂಲಕ ಮುಂದಿನ ಬಜೆಟ್‌ನಲ್ಲಿ ವಿಶೇಷ ಅನುದಾನ ಕಾಯ್ದಿರಿಸಬೇಕು ಎಂದು ಸರ್ಕಾರವನ್ನ ಅಗ್ರಹಿಸಿದರು.

ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಮಾತನಾಡಿ, ಈ ಜಿಲ್ಲಾ ವಿಭಜನೆ ವಿಚಾರದಲ್ಲಿ ರಾಜಕಾರಣ ಒಳ್ಳೆಯದಲ್ಲ. ಇಂದು ಪಕ್ಷಾತೀತ ಹೋರಾಟ ನಡೆದಿದೆ. ಚಿಕ್ಕೋಡಿಯನ್ನು ಜಿಲ್ಲೆ ಮಾಡುವ ಬಗ್ಗೆ ನಮ್ಮ ವಿರೋಧವಿಲ್ಲ. ಚಿಕ್ಕೋಡಿ ಜಿಲ್ಲಾ ಘೋಷಣೆಯೊಂದಿಗೆ ಅಥಣಿಯೂ ಜಿಲ್ಲೆಯಾಗಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಅಥಣಿಯಿಂದ ಬೆಳಗಾವಿ ಸುವರ್ಣಸೌಧದವರೆಗೆ ಪಾದಯಾತ್ರೆ ಚಳುವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಾಜಿ ಶಾಸಕ ಶಹಜಾನ ಡೊಂಗರಗಾವ, ಕಾಂಗ್ರೆಸ್ ಮುಖಂಡರಾದ ಗಜಾನನ ಮಂಗಸೂಳಿ, ಶಿವಕುಮಾರ ಸವದಿ, ಬಿಜೆಪಿಯ ಗಿರೀಶ ಬುಠಾಳಿ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಗುರಪ್ಪ ಮಗದುಮ್ಮ, ಕನ್ನಡಪರ ಹೋರಾಟಗಾರ ಅಣ್ಣಾಸಾಹೇಬ ತೆಲಸಂಗ, ಶಬ್ಬೀರ್ ಸಾತಬಚ್ಚೆ, ರೈತ ಮುಖಂಡ ಶಿವಾನಂದ ಖೋತ, ಶಶಿಧರ ಬರಲಿ, ರಾವಸಾಬ ಐಹೊಳಿ, ರವಿ ಪೂಜಾರಿ, ಮನೋಹರ ಹಂಜಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎ.ಎ.ಹುದ್ದಾರ, ವಕೀಲ ನಿತೀಶ್ ಪಟ್ಟಣ ಸೇರಿ ಅನೇಕ ಮುಖಂಡರು ಮಾತನಾಡಿದರು.

ನಂತರ ಅಥಣಿ ತಹಸೀಲ್ದಾರ್‌ ಕಚೇರಿಗೆ ತೆರಳಿ ಬಿ.ವೈ.ಹೊಸಕೇರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಪ್ರತಿಭಟನೆಯಲ್ಲಿ ಅಥಣಿ ನ್ಯಾಯವಾದಿಗಳ ಸಂಘದ ವಕೀಲರು ಕೋರ್ಟ್ ಕಲಾಪ ಬಹಿಷ್ಕರಿಸಿ ಬಂದ್‌ಗೆ ಬೆಂಬಲ ಸೂಚಿಸಿದರು. ರೈತಪರ ಸಂಘಟನೆಗಳು, ಪಟ್ಟಣದ ವ್ಯಾಪಾರಸ್ಥರು, ವಿವಿಧ ಸಂಘ ಸಂಸ್ಥೆಗಳು, ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘ, ಮಾಜಿ ಸೈನಿಕರ ಸಂಘ, ಪಕ್ಷಾತೀತವಾಗಿ ಅನೇಕ ರಾಜಕೀಯ ಮುಖಂಡರು ಈ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಒಕ್ಕೊರಲಿನಿಂದ ಸರ್ಕಾರವನ್ನ ಅಗ್ರಹಿಸಿದರು.-----

ಬಾಕ್ಸ್

ಇಂದು ನಿಯೋಗದಿಂದ ಸಿಎಂ ಭೇಟಿ ಮತಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಜಿಲ್ಲಾ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುವುದರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದಾರೆ. ಗುರುವಾರ ಮಧ್ಯಾಹ್ನ ಹೋರಾಟದ ನಿಯೋಗವೊಂದು ಸಿಎಂ ಭೇಟಿ ಮಾಡಲಿದೆ. ಸಿಎಂ ಭೇಟಿಗೆ ಮಧ್ಯಾಹ್ನ ಸಮಯ ನಿಗದಿಯಾಗಿದ್ದು, ಅಥಣಿ ಜಿಲ್ಲಾ ಹೋರಾಟ ಸಮಿತಿ ನಿಯೋಗ ಮಠಾಧೀಶರ ನೇತೃತ್ವದಲ್ಲಿ ಸಿಎಂ ಅವರಿಗೆ ಭೇಟಿಯಾಗಿ ಜಿಲ್ಲಾ ರಚನೆಯ ಸಮಗ್ರ ಮಾಹಿತಿ ಹಾಗೂ ಮನವಿ ಪತ್ರ ಸಲ್ಲಿಸಲಾಗುವುದು. - ಶಿವಕುಮಾರ ಸವದಿ, ಯುವ ಮುಖಂಡರು ಅಥಣಿ.

--------

ಕೋಟ್‌

ನಮ್ಮ ಹೋರಾಟದ ಮನವಿಗೆ ರಾಜ್ಯ ಸರ್ಕಾರ ಕೂಡಲೇ ಸ್ಪಂದಿಸಬೇಕು. ನಮ್ಮ ಜನಪ್ರತಿನಿಧಿಗಳು ಸದನದಲ್ಲಿ ಅಥಣಿ ಜಿಲ್ಲೆಯ ಬಗ್ಗೆ ಧ್ವನಿ ಎತ್ತುವ ಮೂಲಕ ನಮ್ಮ ಹೋರಾಟಕ್ಕೆ ನ್ಯಾಯ ಒದಗಿಸಬೇಕು. ಇಲ್ಲವಾದರೆ ಈ ಹೋರಾಟವನ್ನು ನಿರಂತರವಾಗಿ ಮುಂದುವರಿಸಬೇಕಾಗುತ್ತದೆ. ಇಂದು ಸಾಂಕೇತಿಕವಾಗಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಸರ್ಕಾರಿ ಕಚೇರಿಗಳಿಗೆ ಬೇಗ ಜಡಿದು ಉಗ್ರ ಹೋರಾಟ ಕೈಕೊಳ್ಳಬೇಕಾಗುತ್ತದೆ.

- ಪ್ರಶಾಂತ ತೋಡಕರ, ಜಿಲ್ಲಾ ಹೋರಾಟ ಸಮಿತಿ, ಅಧ್ಯಕ್ಷ--------------