ಸಾರಾಂಶ
ಮುಸುಕಿನಲ್ಲಿ ನಾಯಿ ಓಡುತ್ತಿದ್ದನ್ನು ಗಮನಿಸಿದವರು ಚಿರತೆ ಎಂದು ವದಂತಿ ಹಬ್ಬಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಸಾಂಸ್ಕೃತಿಕ ನಗರಿ ಮೈಸೂರಿನ ಕುವೆಂಪುನಗರದಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಚಿರತೆ ಕಾಣಿಸಿಕೊಂಡಿದೆ ಎಂಬ ವದಂತಿ ಹಬ್ಬಿದ್ದರಿಂದ ನಾಗರಿಕರಲ್ಲಿ ಆತಂಕ ಮೂಡಿತ್ತು.ಚಿರತೆ ಪ್ರತ್ಯಕ್ಷ ಎಂಬ ವದಂತಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಚಿರತೆ ಕಾರ್ಯಪಡೆಯ ಸಿಬ್ಬಂದಿ ಸ್ಥಳ ಪರಿಶೀಲಿಸಿದ ಬಳಿಕ ಜನರ ಕಣ್ಣಿಗೆ ಬಿದ್ದಿದ್ದು ಚಿರತೆ ಅಲ್ಲ, ನಾಯಿ ಎಂಬುದು ಸ್ಪಷ್ಟವಾಗಿದೆ.ಗುರುವಾರ ಮುಸುಕಿನಲ್ಲಿ ನಾಯಿ ಓಡುತ್ತಿದ್ದನ್ನು ಗಮನಿಸಿದವರು ಚಿರತೆ ಎಂದು ವದಂತಿ ಹಬ್ಬಿಸಿದ್ದಾರೆ. ಇದರಿಂದ ನಾಗರಿಕರಲ್ಲಿ ಆತಂಕ ಮೂಡಿತ್ತು.ಕುವೆಂಪುನಗರದ ಇಡಬ್ಲ್ಯೂಎಸ್ ಪಾರ್ಕ್ ಸೇರಿದಂತೆ ವದಂತಿ ಹಬ್ಬಿದ ಭಾಗದಲ್ಲಿ ಚಿರತೆ ಕಾರ್ಯಪಡೆ ಸಿಬ್ಬಂದಿ ತಪಾಸಣೆ ನಡೆಸಿದರೂ ಚಿರತೆಯ ಹೆಜ್ಜೆ ಗುರುತು ಸೇರಿದಂತೆ ಯಾವುದೇ ಕುರುಹು ಪತ್ತೆಯಾಗಿಲ್ಲ. ಅಕ್ಕಪಕ್ಕದ ಮನೆಗಳಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಯಾವುದೇ ಚಿರತೆ ಕಂಡು ಬಂದಿಲ್ಲ. ನಾಯಿ ಓಡಾಡಿರುವ ದೃಶ್ಯಾವಳಿಗಳು ಮಾತ್ರ ದಾಖಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಇದರಿಂದ ಕುವೆಂಪುನಗರ ಭಾಗದ ಜನರಲ್ಲಿ ಉಂಟಾಗಿದ್ದ ಆತಂಕವು ದೂರವಾಗಿದೆ.