ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು ಪಟ್ಟಣದ ಹೃದಯ ಭಾಗದಲ್ಲಿರುವ ಕಾಲೇಜು ಮೈದಾನವನ್ನು ಕಬಳಿಸಲು ದುಷ್ಟ ಶಕ್ತಿಗಳು ಹಾತೊರೆಯುತ್ತಿದ್ದು, ಯಾವುದೇ ಕಾರಣಕ್ಕೂ ಭೂ ಮಾಫಿಯಾ ಕಳ್ಳರಿಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಶಾಸಕ ಎಚ್ ಕೆ ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ವಿದ್ಯಾರ್ಥಿ ಕಲಾ ಸಂಘ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳ ಸಮಾರೋಪ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಸುಳ್ಳು ದಾಖಲೆಗಳನ್ನು ನಿರ್ಮಾಣ ಮಾಡಿ ಕಾಲೇಜು ಮೈದಾನವನ್ನು ನುಂಗಲು ಪ್ರಯತ್ನಿಸುತ್ತಿದ್ದಾರೆ. ಆದರೆ ಕೆಲವು ಹಿರಿಯ ನಾಗರಿಕರ ಹೋರಾಟದ ಪ್ರಯತ್ನದಿಂದಾಗಿ ಕಳ್ಳರ ಆಸೆಗೆ ತಣ್ಣೀರು ಎರಚಿದಂತಾಗಿದ್ದರೂ ಮತ್ತೆ ತಲೆ ಎತ್ತುತ್ತಾರೆ. ಸರ್ಕಾರದ ಆಸ್ತಿ ಸಮಾಜದ ಆಸ್ತಿಯಾಗಿದ್ದು ಅದನ್ನು ಉಳಿಸಲು ಸರ್ವ ಪ್ರಯತ್ನ ಮಾಡಲಾಗುವುದು. ಕಾಲೇಜು ಮುಂಭಾಗ ಮತ್ತು ಹಿಂಭಾಗ ಕ್ರೀಡಾಂಗಣ ಮಾಡಿ ಅಲ್ಲಿ ನಿರಂತರ ಚಟುವಟಿಕೆಗಳು ನಡೆಯುತ್ತಿದ್ದರೆ ಆ ಜಾಗ ಅನ್ಯರ ಪಾಲಾಗುವುದು ತಪ್ಪುತ್ತದೆ ಎಂದರು.ನಿವೃತ್ತ ಉಪನ್ಯಾಸಕ ಲೋಕೇಗೌಡ ಹಾಗೂ ಉಪನ್ಯಾಸಕ ಲಕ್ಷ್ಮೀನಾರಾಯಣ್ ಅವರು ಪ್ರಸ್ತುತ ಕಾಲೇಜಿನ ಸಮಸ್ಯೆಗಳ ಬಗ್ಗೆ ಈ ಹಿಂದೆ ತಮ್ಮ ಗಮನಕ್ಕೆ ತಂದಿದ್ದರು. ಕಾಲೇಜಿನ ಹಿಂಭಾಗ ಶಿಕ್ಷಣಕ್ಕೆ ಪೂರಕವಾದ ವಾತಾವರಣ ಇಲ್ಲ. ಕಾಲೇಜು ಜಾಗದಲ್ಲಿ 52 ಹೆಚ್ಚು ಅಕ್ರಮ ಗುಡಿಸಲು ಇದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಕ್ರೀಡಾ ಚಟುವಟಿಕೆಗೆ ಅಡಚಣೆ ಆಗುತ್ತಿದೆ. ಕಾಲೇಜಿನ ಮುಂಭಾಗ ಹಳೆಯ ಕಟ್ಟಡ ಒಡದಿದ್ದು ಅಸ್ಥಿಪಂಜರದಂತೆ ಕಾಣುತ್ತಿದೆ. ಕಾಲೇಜಿನ ಸುತ್ತಲೂ ಕಾಂಪೌಂಡ್ ಇಲ್ಲದೆ ವಿದ್ಯಾರ್ಥಿಗಳಿಗೆ ಉಪನ್ಯಾಸಕರಿಗೆ ಹಾಗೂ ಕಾಲೇಜಿಗೆ ರಕ್ಷಣೆ ಇಲ್ಲವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ದೊರಕಿಸಿಕೊಟ್ಟರೆ ನಿಮ್ಮ ಹೆಸರು ಅಜರಾಮವಾಗಿರುತ್ತದೆ ಎಂದು ಹೇಳಿದ್ದರು. ತಾವು ಎಂದಿಗೂ ಕೊಟ್ಟ ಮಾತನ್ನು ತಪ್ಪಲ್ಲ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕ ವಾತಾವರಣ ಕಲ್ಪಿಸಲು ಶತಸಿದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.
ರಾಯಪುರ ಬಳಿ ಸೈಟ್ ನಿರ್ಮಾಣ ಮಾಡಲಾಗಿದ್ದು, ಕಾಲೇಜು ಹಿಂಬಾಗವಿರುವ 52 ಗುಡಿಸಲು ತೆರವು ಮಾಡಿಸಿ ಅಲ್ಲಿಗೆ ಸ್ಥಳಾಂತರ ಮಾಡಿಸಲಾಗುವುದು. ಈಗಾಗಲೇ ಈ ಕ್ರಿಯೆಗೆ ಚಾಲನೆ ನೀಡಲಾಗಿದ್ದು ಸತತ ಮಳೆಯ ಕಾರಣ ಕಾಮಗಾರಿ ವಿಳಂಬವಾಗಿತ್ತು. ಸ್ಥಳಾಂತರಗೊಳ್ಳುವ ನಿವಾಸಿಗಳಿಗೆ ರಸ್ತೆ, ಚರಂಡಿ, ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಪುರಸಭೆ ಅಧ್ಯಕ್ಷರ ಜೊತೆ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತೇನೆ. ಕಾಲೇಜಿನ ಮುಂಭಾಗ ಹಳೆಯ ಕಟ್ಟಡ ಕೆಡವಿದ್ದು ಶೀಘ್ರದಲ್ಲೇ ಹೊಯ್ಸಳರ ನಾಡಿನ ಹೆಸರಿಗೆ ತಕ್ಕಂತೆ ಸುಂದರ ವಿನ್ಯಾಸ ಹೊಂದಿರುವ ಕಟ್ಟಡವನ್ನು ನಿರ್ಮಿಸಲಾಗುವುದು. ಶಾಲೆಯ ಸಮಾರಂಭ ನಡೆಸಲು ಆಸನಗಳ ಕೊರತೆ ಇರುವುದರಿಂದ ತಮ್ಮ ಸ್ವಂತ ಹಣದಲ್ಲಿ 400 ಚೇರ್‌ಗಳನ್ನು ಕೊಡುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ, ಉಪ ನಿರ್ದೇಶಕ ಕೆಪಿ ಗಂಗಾಧರ್, ಸಮಿತಿ ಸದಸ್ಯ ರಂಗನಾಥ್, ನಿವೃತ್ತ ಉಪನ್ಯಾಸಕ ಲೋಕೇಗೌಡ ಸಿ. ಎಚ್, ಕಾಲೇಜು ಅಭಿವೃದ್ಧಿ ಸಮಿತಿ ಡಾ. ಚೇತನ್, ಗ್ರಾಪಂ ಸದಸ್ಯ ಸಚಿನ್, ಕಾಲೇಜು ಪ್ರಾಂಶುಪಾಲ ಹರೀಶ್ ಕೆ, ಉಪನ್ಯಾಸಕ ಲಕ್ಷ್ಮೀನಾರಾಯಣ್, ಸ್ವಾಗತ ಸರ್ವ ಮಂಗಳ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಶಾಲೆಯ ಉಪನ್ಯಾಸಕರು ವಿದ್ಯಾರ್ಥಿಗಳು ಹಾಜರಿದ್ದರು.