ಸಾರಾಂಶ
ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿದ್ದ ವೆಂಕಟೇಶ ರಾಮಚಂದ್ರಪ್ಪ ವಿಜಯನಗರ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾಗಿ ಬಡ್ತಿ ಹೊಂದಿದ ಮೇಲೆ ಈಗ ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಅನಾಥವಾಗಿದೆ.
ಶಾಲೆಗಳ ನಿರ್ವಹಣೆ ಏರುಪೇರು । ತೆರೆಮರೆ ಕಸರತ್ತು ನಡೆಸಿದ ಆಕಾಂಕ್ಷಿಗಳು
ರಾಮಮೂರ್ತಿ ನವಲಿ
ಕನ್ನಡಪ್ರಭ ವಾರ್ತೆ ಗಂಗಾವತಿಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿದ್ದ ವೆಂಕಟೇಶ ರಾಮಚಂದ್ರಪ್ಪ ವಿಜಯನಗರ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾಗಿ ಬಡ್ತಿ ಹೊಂದಿದ ಮೇಲೆ ಈಗ ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಅನಾಥವಾಗಿದೆ.
ಕಳೆದ ಎರಡು ವರ್ಷಗಳಿಂದ ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದ ವೆಂಕಟೇಶ ರಾಮಚಂದ್ರಪ್ಪ ಅ.10ರಂದು ಬಡ್ತಿ ಹೊಂದಿ ವಿಜಯನಗರ ಜಿಲ್ಲೆಗೆ ತೆರಳಿದ್ದಾರೆ. ಗಂಗಾವತಿ ನಗರ ಸೇರಿದಂತೆ ಅಖಂಡ ಗಂಗಾವತಿ, ಕಾರಟಗಿ ತಾಲೂಕಿನಲ್ಲಿ 310 ಪ್ರಾಥಮಿಕ ಶಾಲೆ, 25 ಅನುದಾನಿತ ಶಾಲೆ ಇದ್ದು, 47 ಸರ್ಕಾರಿ ಪ್ರೌಢಶಾಲೆಗಳಿವೆ. 10 ಅನುದಾನಿತ ಪ್ರೌಢಶಾಲೆಗಳಿವೆ. 909 ಪ್ರಾಥಮಿಕ ಶಾಲೆಗೆ ಶಿಕ್ಷಕರಿದ್ದು, 706 ಅತಿಥಿ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಅಖಂಡ ಗಂಗಾವತಿ ತಾಲೂಕಿನಲ್ಲಿ ಇದೊಂದೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇದ್ದು, ಈಗ ಅಧಿಕಾರಿಯೇ ಇಲ್ಲದಿರುವುದರಿಂದ ಶಾಲೆಗಳ ನಿರ್ವಹಣೆ ಏರುಪೇರಾಗಿದೆ ಎನ್ನಲಾಗುತ್ತಿದೆ.ಈ ಹಿಂದೆ ಕ್ಷೇತ್ರ ಶಿಕ್ಷಾಣಾಧಿಕಾರಿಗಳ ಹುದ್ದೆಗೆ ಜಿದ್ದಾಜಿದ್ದಿ ನಡೆಸಿ ಇಬ್ಬರು ಕಾರ್ಯನಿರ್ವಹಿಸಿದ ಉದಾಹರಣೆಗಳಿವೆ. ಆದರೆ ಈಗ ಈ ಹುದ್ದೆಗೆ ಯಾರೂ ಇಲ್ಲದಂತಾಗಿದೆ.
ಜಿದ್ದಾ ಜಿದ್ದಿ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಸ್ಥಾನಕ್ಕೆ ಮೂವರು ಬೇರೆ ಬೇರೆ ತಾಲೂಕುಗಳಿಂದ ಬರಲು ಪೈಪೋಟಿ ನಡೆಸಿದ್ದಾರೆ. ಪ್ರಮುಖವಾಗಿ ಯಲಬುರ್ಗಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಈ ಹಿಂದೆ ಗಂಗಾವತಿ ತಾಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ಸ್ಥಳೀಯರು ಹಾಗೂ ಇಲ್ಲಿಯ ಶಾಲೆಗಳ ಬಗ್ಗೆ ಅರಿತುಕೊಂಡಿರುವ ಸೋಮಶೇಖರ್ ಗೌಡ ಗಂಗಾವತಿಗೆ ಬರಲು ಮುಂಚೂಣಿಯಲ್ಲಿದ್ದಾರೆ.ಅದರಂತೆ ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹುಂಬಣ್ಣ ರಾಠೋಡ್ ಗಂಗಾವತಿ ಶಿಕ್ಷಣ ಇಲಾಖೆಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ್ದಾರೆ. ಇವರು ಗಂಗಾವತಿ ನಗರಕ್ಕೆ ಬರಲು ತೆರೆಮರೆ ಕಸರತ್ತು ನೆಡಸಿದ್ದಾರೆ.
ಅದರಂತೆ ವಿಜಯನಗರ ಬಿಇಒ ಶೇಖರ್ ಹೊರಪೇಟೆ ಗಂಗಾವತಿ ಬರುವುದಕ್ಕೆ ಜಿದ್ದಾ ಜಿದ್ದಿ ನೆಡಸಿದ್ದಾರೆ. ಅಲ್ಲದೇ ಇನ್ನು ಕೆಲ ಅಧಿಕಾರಿಗಳು ಜಿಲ್ಲೆಯ ಸಚಿವರು, ಶಾಸಕರ ಬೆನ್ನಿಗೆ ಬಿದ್ದಿದ್ದು, ಪ್ರಬಲ ಶಿಫಾರಸ್ಸು ಯಾರಿಗೆ ಬೀಳುತ್ತದೆಯೋ ಅವರು ಗಂಗಾವತಿ ನಗರಕ್ಕೆ ಆಗಮಿಸಲಿದ್ದಾರೆ.ಆದರೂ ಪ್ರಸ್ತುತ ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹುದ್ದೆ ಅನಾಥವಾಗಿದ್ದು, ಪ್ರಭಾರಿ ಅಧಿಕಾರಿಗಳ ಮೇಲೆ ಅವಲಂಬಿತವಾಗಿದೆ.
ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹುದ್ದೆ ಖಾಲಿ ಇದೆ. ಈ ಹುದ್ದೆಗೆ ಬೇರೆಯವರನ್ನು ವರ್ಗಾಯಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಡ್ತಿ ಹೊಂದಿದವರು ಗಂಗಾವತಿ ಶಿಕ್ಷಣ ಇಲಾಖೆಗೆ ಬರುತ್ತಾರೆ. ಈಗ ಪ್ರಭಾರಿ ಕ್ಷೇತ್ರ ಶಿಕ್ಷಣಾದಿಕಾರಿಗಳು ಕಾರ್ಯನಿರ್ಹಿಸುತ್ತಿದ್ದಾರೆ ಎಂದು ಡಿಡಿಪಿಐ ಶ್ರೀಶೈಲ ಎಸ್. ಬಿರಾದಾರ ತಿಳಿಸಿದ್ದಾರೆ.