ಮನೆಬಿಟ್ಟು ಹೋಗಿದ್ದ ಬಾಲಕ ಮರಳಿ ಪೋಷಕರ ಮಡಿಲಿಗೆ

| Published : Jul 09 2025, 12:18 AM IST

ಸಾರಾಂಶ

ಬಾಲಕ ಲೋಕಾಯುಕ್ತನ ತಾಯಿ ಜ್ಯೋತಿ ಕಳೆದ 12 ವರ್ಷದ ಹಿಂದೆ ತೀರಿಕೊಂಡ ಪರಿಣಾಮವಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತಂದೆ ಸೋಮಶೇಖರ್ ಅವರನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದರು.

ಕನ್ನಡಪ್ರಭ ವಾರ್ತೆ ಹೊಸಕೋಟೆಮನೆಯಲ್ಲಿ ಜೀವನ ಮಾಡಲು ಕಷ್ಟ ಎಂದು ಮನೆ ಬಿಟ್ಟು ಹೋಗಿದ್ದ ಬಾಲಕನನ್ನು ಹೊಸಕೋಟೆ ಪೊಲೀಸರು ಒಂದೂವರೆ ವರ್ಷದ ಬಳಿಕ ಪತ್ತೆ ಹಚ್ಚಿ ಪೋಷಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.ನಗರದ ಅಂಬೇಡ್ಕರ್ ಕಾಲೋನಿಯ ಸೋಮಶೇಖರ್ ಎಂಬುವವರ ಪುತ್ರ ಲೋಕಾಯುಕ್ತ (13) ಮನೆ ಬಿಟ್ಟು ಹೋಗಿದ್ದ ಬಾಲಕ. ಬಾಲಕ ಲೋಕಾಯುಕ್ತನ ತಾಯಿ ಜ್ಯೋತಿ ಕಳೆದ 12 ವರ್ಷದ ಹಿಂದೆ ತೀರಿಕೊಂಡ ಪರಿಣಾಮವಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತಂದೆ ಸೋಮಶೇಖರ್ ಅವರನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದರು. ಆತನನ್ನು ಅವರ ಚಿಕ್ಕಮ್ಮ ಹೊಸಕೋಟೆ ಸಮಾಜ ಕಲ್ಯಾಣ ಇಲಾಖೆ ವಸತಿ ಶಾಲೆಗೆ ದಾಖಲು ಮಾಡಿದ್ದರು. 2024ರ ಡಿಸೆಂಬರ್ 29ರಂದು ಬಾಲಕ ಲೋಕಾಯುಕ್ತ ತಂದೆ ಸೋಮಶೇಖರ್ ಬಂದು ಆತನನ್ನು ನಗರದ ಅಂಬೇಡ್ಕರ್ ಕಾಲೋನಿಯಲ್ಲಿರುವ ಮನೆಗೆ ಕರೆದುಕೊಂಡು ಹೋಗಿದ್ದರು.

ಮನೆಗೆ ಹೋಗಿ 3 ದಿನಗಳ ಕಾಲ ಇದ್ದ ಬಾಲಕ ಜ. 1 2025ರಂದು ಬೆಳಿಗ್ಗೆ ಮನೆಯಿಂದ ಸೈಕಲ್ ತೆಗೆದುಕೊಂಡು ಹೋದವನು ಸಂಜೆಯಾದರೂ ವಾಪಸ್ ಬಂದಿರಲಿಲ್ಲ. ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಾಡಿದರೂ ಸಹ ಲೋಕಾಯುಕ್ತನ ಸುಳಿವು ಸಿಕ್ಕಿರಲಿಲ್ಲ. ಆಗ ಜ. 4 ರಂದು ಲೋಕಾಯುಕ್ತ ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು.ಬಾಕ್ಸ್ ....

ರೈಲಿನಲ್ಲಿ ಚೆನ್ನೈಗೆ ತೆರಳಿದ್ದ ಬಾಲಕಮನೆಯಿಂದ ಕಾಣೆಯಾಗಿದ್ದ ಬಾಲಕ ಲೋಕಾಯುಕ್ತ ಹೊಸಕೋಟೆಯಿಂದ ಬೆಂಗಳೂರಿಗೆ ತೆರಳಿ, ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಚೆನ್ನೈಗೆ ಪ್ರಯಾಣ ಬೆಳೆಸಿದ್ದ. ಮೂರ್ನಾಲ್ಕು ದಿನಗಳ ಕಾಲ ಚೆನ್ನೈ ರೈಲು ನಿಲ್ದಾಣದಲ್ಲೇ ಓಡಾಡುತ್ತಿದ್ದ ಬಾಲಕ ಲೋಕಾಯುಕ್ತನನ್ನು ಚೆನ್ನೈ ರೈಲ್ವೇ ಪೊಲೀಸರು ಹಿಡಿದುಕೊಂಡು ವಿಚಾರಣೆ ಮಾಡಲಾಗಿ ಕರ್ನಾಕಟದವನು ಎಂದು ತಿಳಿದಾಕ್ಷಣ ಆತನನ್ನು ಕರ್ನಾಟಕ ರೈಲ್ವೇ ಪೊಲೀಸರ ಮೂಲಕ ಬೆಂಗಳೂರಿನ ಬಾಲಭವನಕ್ಕೆ ರವಾನೆ ಮಾಡಿದ್ದರು. ಕಳೆದ ಒಂದೂವರೆ ವರ್ಷದಿಂದ ಲೋಕಾಯುಕ್ತ ಬಾಲಭವನದಲ್ಲೆ ಇದ್ದನು.ಬಾಕ್ಸ್ .....

ತನ್ನ ಹೆಸರು ಭಾರ್ಗವ ಎಂದು ನಂಬಿಸಿದ್ದ ಲೋಕಾಯುಕ್ತಕಳೆದ ಒಂದೂವರೆ ವರ್ಷದಿಂದ ಬೆಂಗಳೂರಿನ ಬಾಲಭವನದಲ್ಲಿದ್ದ ಬಾಲಕ ಲೋಕಾಯುಕ್ತ ಮನೆಗೆ ಬಾರಲೇ ಬಾರದೆಂದು ನಿರ್ಧರಿಸಿ ತನ್ನ ಹೆಸರನ್ನು ಭಾರ್ಗವ ಎಂದು ಹೇಳಿ ನಂಬಿಸಿದ್ದ. ಚೆನ್ನೈನ ರೈಲ್ವೇ ಪೊಲೀಸರಿಗೂ ಭಾರ್ಗವ ಎಂದೇ ಹೇಳಿ ನಂಬಿಸಿದ್ದ. ಬೆಂಗಳೂರಿನ ಬಾಲಭವನದಲ್ಲಿ ಮಕ್ಕಳನ್ನು ಪರಿಶೀಲನೆ ಮಾಡುವ ಸಂಧರ್ಭದಲ್ಲಿ ಭಾರ್ಗವ ಎಂದೇ ಪರಿಚಯ ಮಾಡಿಕೊಂಡಿದ್ದು ಅನುಮಾನ ಬಂದು ಲೋಕಾಯುಕ್ತನ ಫೋಟೋ ಚಹರೆಯನ್ನು ನೋಡಿ ಪ್ರಶ್ನೆ ಮಾಡಿದಾಗ ಮನೆಗೆ ಹೋಗಲೇಬಾರದೆಂದು ತನ್ನ ಹೆಸರನ್ನು ಭಾರ್ಗವ ಎಂದು ಸುಳ್ಳು ಹೇಳಿರುವುದಾಗಿ ಸತ್ಯ ಬಾಯ್ಬಿಟ್ಟಿದ್ದಾನೆ.ಪ್ರಕರಣವನ್ನು ಪತ್ತೆಹಚ್ಚಿದ ಹೊಸಕೋಟೆ ಡಿವೈಎಸ್ಪಿ ಮಲ್ಲೆಶಯ್ಯ, ಪಿಐ ಗೋವಿಂದ್, ಪೇದೆ ಮಹಾಂತೇಶ್ ಹಾಗೂ ಸಿಬ್ಬಂದಿ ವರ್ಗದವರನ್ನು ಎಸ್ಪಿ ಸಿಕೆ. ಬಾಬಾ ಅಭಿನಂದಿಸಿದ್ದಾರೆ.ಫೋಟೋ: 8 ಹೆಚ್‌ಎಸ್‌ಕೆ 1ಹೊಸಕೋಟೆ ಪೊಲೀಸರು ಕಾಣೆಯಾಗಿದ್ದ ಬಾಲಕ ಲೋಕಾಯುಕ್ತನನ್ನು ಒಂದೂವರೆ ವರ್ಷದ ಬಳಿಕ ಅವರ ಕುಟಂಬದ ಸದಸ್ಯರಿಗೆ ಒಪ್ಪಿಸಿದರು.