ದೇಶದ ಉಜ್ವಲ ಭವಿಷ್ಯ ಯುವಜನರ ಕೈಯಲ್ಲಿದೆ: ಡಿಸಿ

| Published : Mar 15 2025, 01:04 AM IST

ದೇಶದ ಉಜ್ವಲ ಭವಿಷ್ಯ ಯುವಜನರ ಕೈಯಲ್ಲಿದೆ: ಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಯುವಜನತೆ ಈ ದೇಶದ ಆಸ್ತಿ. ದೇಶ ಭವಿಷ್ಯ ನಿಮ್ಮ ಕೈಯಲ್ಲಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರಾಯೋಗಿಕವಾಗಿ ಅನುಕರಣೆ ಮಾಡಲು ಹೋಗಿ ವ್ಯಸನಗಳಿಗೆ ದಾಸರಾಗುತ್ತಿರುವುದು ಹೆಚ್ಚಾಗಿದೆ. ಇದನ್ನು ತಡೆಗಟ್ಟಿ, ವ್ಯಸನಮುಕ್ತ ಸಮಾಜ ನಿರ್ಮಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದ್ದಾರೆ.

- ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಮದ್ಯ-ಮಾದಕ ವಸ್ತುಗಳ ದುಷ್ಪರಿಣಾಮ ವಿಚಾರ ಸಂಕಿರಣ- ಜಾಗೃತಿ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಯುವಜನತೆ ಈ ದೇಶದ ಆಸ್ತಿ. ದೇಶ ಭವಿಷ್ಯ ನಿಮ್ಮ ಕೈಯಲ್ಲಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರಾಯೋಗಿಕವಾಗಿ ಅನುಕರಣೆ ಮಾಡಲು ಹೋಗಿ ವ್ಯಸನಗಳಿಗೆ ದಾಸರಾಗುತ್ತಿರುವುದು ಹೆಚ್ಚಾಗಿದೆ. ಇದನ್ನು ತಡೆಗಟ್ಟಿ, ವ್ಯಸನಮುಕ್ತ ಸಮಾಜ ನಿರ್ಮಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಚಿಗಟೇರಿ ಜಿಲ್ಲಾ ಆಸ್ಪತ್ರೆ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಹಯೋಗದಲ್ಲಿ ಏರ್ಪಡಿಸಲಾದ ಮದ್ಯ ಹಾಗೂ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತ ವಿಚಾರ ಸಂಕಿರಣ ಹಾಗೂ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತಾಡಿದರು.

ಕೇವಲ ಮಾದಕ ವಸ್ತುಗಳ ವ್ಯಸನವಷ್ಟೇ ಮಾದಕವಲ್ಲ. ಅತಿಯಾದ ಮೊಬೈಲ್ ಗೀಳು ಕೂಡ ಒಂದು ರೀತಿಯ ವ್ಯಸನ. ತಮ್ಮ ಎಲ್ಲ ಹುಚ್ಚುತನದ ವ್ಯಸನಗಳಿಂದ ಜನರು ಹೊರಬರಬೇಕು. ಆಗ ಮಾತ್ರ ದೇಶ, ನಾಡು, ಕುಟುಂಬ ಹಾಗೂ ಸಮಾಜಕ್ಕೆ ಉತ್ತಮ ವ್ಯಕ್ತಿಯಾಗಿ ಬದುಕಲು ಸಾಧ್ಯ. ಈ ನಿಟ್ಟಿನಲ್ಲಿ ಯುವಜನರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಜಿಲ್ಲಾ ಸರ್ಜನ್ ಡಾ. ನಾಗೇಂದ್ರಪ್ಪ ಮಾತನಾಡಿ, ಮಾದಕ ವಸ್ತುಗಳ ಸೇವನೆ ಒಂದು ಸಾಮಾಜಿಕ ಪಿಡುಗು. ಇದನ್ನು ತೊಲಗಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮಾಜವನ್ನು ಪರಿವರ್ತನೆ ಮಾಡುವ ಶಕ್ತಿ ಹೆಣ್ಣಿಗಿದೆ. ಹಾಗಾಗಿ, ಮಹಿಳಾ ಕಾಲೇಜಿನಲ್ಲಿ ಆಯೋಜನೆ ಮಾಡಿರುವುದು ಸಫಲವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಚಾರ್ಯ ಎಂ.ಮಂಜಣ್ಣ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ತೊಪ್ಪಲ ಮಲ್ಲಿಕಾರ್ಜುನ ಸ್ವಾಗತಿಸಿದರು. ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಧನಂಜಯ ಪ್ರಾಸ್ತಾವಿಕವಾಗಿ ಮಾತನಾಡಿದರು.

ಐಕ್ಯೂಎಸಿ ಸಂಚಾಲಕ ಭೀಮಪ್ಪ, ಎನ್.ಶಿವರಾಜ್, ವಿದ್ಯಾರ್ಥಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ಕಲಾವಿದರಾದ ಐರಣಿ ಚಂದ್ರ, ಬನಪ್ಪ ಜಾಗೃತಿ ಗೀತೆಗಳನ್ನು ಹಾಡಿದರು.

- - -

(ಬಾಕ್ಸ್‌) * ಮದ್ಯವ್ಯಸನದಿಂದ ಮುಕ್ತಿ ಹೊಂದಿ: ಡಾ.ಮರುಳಸಿದ್ದಪ್ಪ ಚಿಗಟೇರಿ ಆಸ್ಪತ್ರೆ ಮನೋವೈದ್ಯ ಡಾ.ಮರುಳಸಿದ್ದಪ್ಪ ಉಪನ್ಯಾಸ ನೀಡಿ, ಆಸ್ಪತ್ರೆಯಲ್ಲಿ ದಿನನಿತ್ಯ ಬರುವ ಅಪಘಾತಗಳಲ್ಲಿ ಶೇ.60ಕ್ಕಿಂತಲೂ ಹೆಚ್ಚು ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದ್ದು ಕಂಡುಬರುತ್ತದೆ. ಯುವಜನರು ಮಾದಕ ವಸ್ತುಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ. ಇದರಿಂದ ಹೊರಬರುವುದು ಅವರಿಗೆ ಕಷ್ಟವಾಗಿದೆ. ಮದ್ಯ ಹಾಗೂ ಮಾದಕ ವಸ್ತುಗಳ ವ್ಯಸನದಿಂದ ಸಾಮಾಜಿಕ, ಆರ್ಥಿಕ, ದೈಹಿಕ, ಮಾನಸಿಕವಾಗಿ ಅನಾರೋಗ್ಯಕ್ಕೆ ಈಡಾಗುತ್ತಾರೆ. ಇಂತಹ ವ್ಯಸನಗಳಿಂದ ಮುಕ್ತರಾಗಲು ಚಿಗಟೇರಿ ಆಸ್ಪತ್ರೆ ಸೇರಿದಂತೆ ಬಾಪೂಜಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಜೊತೆಗೆ ವ್ಯಸನ ಮುಕ್ತ ಕೇಂದ್ರಗಳಿದ್ದು, ಸದುಪಯೋಗ ಮುಖ್ಯ ಎಂದು ಸಲಹೆ ನೀಡಿದರು.

- - -

-12ಕೆಡಿವಿಜಿ44.ಜೆಪಿಜಿ:

ದಾವಣಗೆರೆಯಲ್ಲಿ ಬುಧವಾರ ನಡೆದ ಮದ್ಯ- ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತ ವಿಚಾರ ಸಂಕಿರಣ, ಜಾಗೃತಿ ಕಾರ್ಯಕ್ರಮವನ್ನು ಡಿಸಿ ಜಿ.ಎಂ. ಗಂಗಾಧರ ಸ್ವಾಮಿ ಉದ್ಘಾಟಿಸಿದರು.