ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬ್ರಿಟಿಷರು ಪುಸ್ತಕ ಜ್ಞಾನಿಗಳಾದರೆ ಭಾರತೀಯರು ಮಸ್ತಕ ಜ್ಞಾನಿಗಳು, ಸಂವಿಧಾನ ಹಾಗೂ ನೈತಿಕ ಶಿಕ್ಷಣದ ಮೂಲ ತತ್ವಗಳನ್ನು ಜನಪದ ನಮಗೆ ಕಲಿಸುತ್ತದೆ, ಜನಪದರು ಬರೆಯದ ಜ್ಞಾನಿಗಳು ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಹಸ್ತ್ರಪ್ರತಿ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ ಹೇಳಿದರು.ಕರ್ನಾಟಕ ಬಯಲಾಟ ಅಕಾಡೆಮಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ಆವರಣದಲ್ಲಿ ನಡೆದ ಬಯಲಾಟ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.
ಬ್ರಿಟಿಷರದ್ದು ಪುಸ್ತಕ ಜ್ಞಾನ, ಭಾರತೀಯರದ್ದು ಮಸ್ತಕ ಜ್ಞಾನ, ಒಬ್ಬ ಬ್ರಿಟಿಷ್ ಕವಿ ಸತ್ತರೆ ಒಂದು ಪುಸ್ತಕ ಉಳಿಯುತ್ತದೆ, ನಮ್ಮ ಭಾರತೀಯ ಕಲಾವಿದ ತೀರಕೊಂಡರೆ ಆ ಕಲಾ ಪರಂಪರೆ ನಾಶವಾಗುತ್ತದೆ. ಅದಕ್ಕೆ ಮಸ್ತಕ ವಿದ್ಯೆ ಎಂದು ಕರೆಯುತ್ತೇವೆ, ಇದು ಅನುಭವದ ವಿದ್ಯೆ, ತಿಳಿಯುವುದರಿಂದ ಬರುವಂತಹದ್ದು, ಮಾಡುವುದರಿಂದ ನೋಡುವುದರಿಂದ ಬರುವ ಕಲೆ, ಹಿಂದೆ ನಮಗೆ ಶಾಲೆಯಲ್ಲಿ ಮಾಡಿ ಕಲಿ ನೋಡಿ ತಿಳಿ ಎನ್ನುತ್ತಿದ್ದರು, ನಮ್ಮ ಕಲೆಗಳು ನೋಡಿ ತಿಳಿದುಕೊಂಡು ಆಡುವಂತದ್ದು, ಹೀಗಾಗಿ ಜನಪದ ಕಲಾವಿದರು ಅನಕ್ಷರಸ್ಥರು ಎಂದು ಭಾವಿಸಬಾರದು. ಅವರು ಹಾಡಿರುವ ಬರೆದಿರುವ ತ್ರೀಪದಿ, ಒಡಪುಗಳು ಕಾವ್ಯಗಳನ್ನು ಹಾಗೂ ಜನಪದರು ಆಡಿದ ಮಾತುಗಳನ್ನು ತರಗತಿಯಲ್ಲಿ ಬಿಡಸಲು ಆಗದೆ ಇರುವಷ್ಟು ಮಟ್ಟಿಗೆ ಅವು ಇರುವುದರಿಂದ ನಮ್ಮ ಕಲಾವಿದರು ಅನಕ್ಷರಸ್ಥರಲ್ಲ. ಅವರು ಬರೆಯದೆ ಜ್ಞಾನಿಗಳು, ಮುಂದಿನ 10 ವರ್ಷ ಕಳೆದರೆ ಬಯಲಾಟ ಪಾರಿಜಾತ ಕಲಾವಿದರು ಸಿಗುವುದಿಲ್ಲ, ಈಗಿನ ತಲೆಮಾರು ಹೋದರೆ ಆ ಕಲೆ ಹೋಗವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.ಪಾರಿಜಾತ ಈ ಭಾಗದ ಬಹಳ ಅಪರೂಪ ಪ್ರಸಿದ್ಧ ಮತ್ತು ಜನಪ್ರಿಯವಾದ ಆಟ, ಇಲ್ಲಿ ಕೃಷ್ಣ-ರುಕ್ಮಣಿ, ಸತ್ಯಭಾಮೆ, ಕೋರವಂಜಿ ಪಾತ್ರಗಳು ಇಡಿ ಕಥೆ ವಸ್ತು ಇಬ್ಬರ ಹೆಂಡಿರ ಜಗಳ, ಪಾರಿಜಾತ ಅಥವಾ ಬಯಲಾಟ ಜನಪದ ಕಲೆಗಳು ವಿನಯ, ಮಾನವೀಯತೆ, ನಿರ್ಮಲ ಪ್ರೇಮ, ನಿರ್ಮಲ ಭಕ್ತಿ, ಕೂಡಿ ಆಟ ಊಟ ಮಾಡುವುದು ಹೇಗೆ ಮಾತನಾಡುವುದು ಹೇಗೆ ಯಾವುದು, ಸಂವಿಧಾನದ ಮೂಲ ತತ್ವಗಳು ಎಂದು ಕರೆಯುತ್ತವೆಯೋ, ನೈತಿಕ ಶಿಕ್ಷಣದ ಮೂಲ ತತ್ವ ಎಂದು ಕರೆಯುತ್ತೆವೆಯೋ ಯಾವುದನ್ನು ತರಗತಿಯಲ್ಲಿ ಕಲಿಸುತ್ತೇವೆ. ಅವೆಲ್ಲವನ್ನು ಕಲಿಸಿಕೊಟ್ಟಿದ್ದು ಜನಪದ ಸಂಸ್ಕೃತಿ, ನಮಗೆ ನೀತಿ, ಸಂಸ್ಕಾರ ಕಲಿಸಿಕೋಡುತ್ತದೆ ಎಂದರು.
ಅಕಾಡೆಮಿ ಸದಸ್ಯರಾದ ಅನಸೂಯಾ ವಡ್ಡರ, ಕಾಲೇಜಿನ ಪ್ರಾಚಾರ್ಯ ಗೀತಾಂಜಲಿ ಶ್ರೀನಿವಾಸ ರಾವ್, ಸಂಸ್ಕೃತಿ ವಿಭಾಗದ ಮುಖ್ಯಸ್ಥ ಡಾ. ಮೌನೇಶ ಕಮ್ಮಾರ, ಪ್ರವೀಣ ಬಿ, ಜಾಜಿಮಲ್ಲಿಗೆ ಕವಿ ಸತ್ಯಾನಂದ ಪಾತ್ರೋಟ, ಸುನೀಲ ನಡಕಟ್ಟಿ, ಡಾ.ಎಂ.ಎಚ್. ತಹಸಿಲ್ದಾರ. ಡಾ. ಕವಿತಾ ಮುತ್ತಪ್ಪ, ಸಂಗಮೇಶ ಬ್ಯಾಳಿ, ಚಂದ್ರಶೇಖರ ಕಾಳನ್ನವರ, ಪಿ.ಕೆ ಕಾರಬಾರಿ, ಎಂ.ವೈ. ಬಡಿಗೇರ, ಡಾ.ಪಕೀರಪ್ಪ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.ಕಾರ್ಯಕ್ರಮದಲ್ಲಿ ಜನಪದ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಜೀಮೂತವಾಹನ ಬಯಲಾಟ ಪ್ರದರ್ಶನ ಹಾಗೂ ಶ್ರೀಕೃಷ್ಣ ಪಾರಿಜಾತ ಪ್ರದರ್ಶನ ಜರುಗಿದವು. ಕಾರ್ಯಕ್ರಮಕ್ಕೂ ಮುಂಚೆ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕುಂಭ ಮೆರವಣಿಗೆ ನಡೆಯಿತು.
ನಮ್ಮಲಿರುವ ಅಹಂಕಾರ ಕಳೆದುಕೊಂಡು ಎಲ್ಲರ ಜೊತೆಗೆ ಕೂಡಿಕೊಂಡು ಜನಸಾಮನ್ಯರಂತೆ ಬದುಕುವುದೇ ಜನಪದಗಳ ಆಶಯವಾಗಿದೆ. ದೇವಲೋಕದ ಪಾತ್ರಗಳನ್ನು ಭೂಲೋಕದ ಅಟ್ಟಕ್ಕೆ ಕರೆದುಕೊಂಡು ಮಾತನಾಡಿಸುತ್ತಾರೆ. ಇದು ಜನಪದ ಆಟಗಳ ದೊಡ್ಡ ಹಿರಿಮೆ, ಜನರಿಗೆ ಲೋಕದ ನೀತಿಗಳನ್ನು ತಿಳಿಸುತ್ತಾ ಬಂದಿದ್ದು ಜನಪದ ಕಲೆಗಳ ಒಂದು ಬಹುದೊಡ್ಡ ಶಕ್ತಿ.ಪ್ರೊ.ಕೆ.ಆರ್. ದುರ್ಗಾದಾಸ್, ಅಧ್ಯಕ್ಷರು ಕರ್ನಾಟಕ ಬಯಲಾಟ ಅಕಾಡೆಮಿ