ಮುಸಲ್ಮಾನರು ರಸ್ತೆಯಲ್ಲಿ ನಮಾಜ್ ಮಾಡುತ್ತಾರೆ. ಯಾರ ಅಪ್ಪಂದು ರಸ್ತೆ. ಗಣಪತಿಯನ್ನು ಬಿಜೆಪಿ ಕೊಂಡುಕೊಂಡಿದ್ದೀರಾ ಎಂದು ಟೀಕಿಸುವ ಕಾಂಗ್ರೆಸ್ಸಿಗರು ಎಲೆಕ್ಷನ್ ಬಂದಾಗ ಮಾತ್ರ ಹಿಂದೂ ಎನ್ನುತ್ತಾರೆ. ಅಧಿಕಾರಕ್ಕೆ ಬಂದ ಮೇಲೆ ಮುಸ್ಲಿಂ ಅಂತಾರೆ. ಆದರೆ, ನಮ್ಮ ರಕ್ತದ ನರನಾಡಿಗಳಲ್ಲಿ ಹಿಂದೂ ರಕ್ತ ಹರಿಯುತ್ತಿದೆ. ಹಾಗಾಗಿ ನಾವು ಯಾವಾಗಲೂ ಹಿಂದೂ.

ಕನ್ನಡಪ್ರಭ ವಾರ್ತೆ ಮದ್ದೂರು

ಇಡೀ ರಾಜ್ಯದಲ್ಲಿ ಪೊಲೀಸರು ಗಣಪತಿ ಹಬ್ಬದ ವಿಚಾರದಲ್ಲಿ ಹೊಸ ಪರಂಪರೆಯನ್ನು ಹುಟ್ಟುಹಾಕುತ್ತಿದ್ದಾರೆ. ಮಸೀದಿ ಬಳಿ ಹೋಗಬಾರದು, ಡ್ಯಾನ್ಸ್ ಮಾಡಬಾರದು, ಪಟಾಕಿ ಹೊಡೆಯಬಾರದು, ಡಿಜೆ ಹಾಕಬಾರದು. ಇಲ್ಲೇ ಮೈಕ್ ಹಾಕಬೇಕು ಎಂದೆಲ್ಲಾ ನಿರ್ಬಂಧ ಹಾಕುತ್ತಿರುವ ಪೊಲೀಸರಿಗಿಂತ ಬ್ರಿಟೀಷರೇ ಎಷ್ಟೋ ಮೇಲು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ಪಟ್ಟಣದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಪಕ್ಷದ ನಾಯಕರಿಂದ ಆಯೋಜಿಸಿದ್ದ ೧೦೮ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಇನ್ಸ್‌ಪೆಕ್ಟರ್‌ವೊಬ್ಬರು ಹಿಂದೂಗಳಿಗೆ ಗ್ರಹಚಾರ ಬಿಡಿಸುತ್ತೇನೆ ಅಂತಾರೆ. ಇದೇ ಮಾತನ್ನು ಮುಸಲ್ಮಾನರಿಗೆ ಹೇಳಲಿ ನೋಡೋಣ. ಎಂದಾದರೂ ಅವರು ಆಚರಿಸುವ ಹಬ್ಬದ ಬಗ್ಗೆ ಹೀಗೆ ಹೇಳಿದ್ದಾರಾ ಎಂದು ಪ್ರಶ್ನಿಸಿದರು.

ಮುಸಲ್ಮಾನರು ರಸ್ತೆಯಲ್ಲಿ ನಮಾಜ್ ಮಾಡುತ್ತಾರೆ. ಯಾರ ಅಪ್ಪಂದು ರಸ್ತೆ. ಗಣಪತಿಯನ್ನು ಬಿಜೆಪಿ ಕೊಂಡುಕೊಂಡಿದ್ದೀರಾ ಎಂದು ಟೀಕಿಸುವ ಕಾಂಗ್ರೆಸ್ಸಿಗರು ಎಲೆಕ್ಷನ್ ಬಂದಾಗ ಮಾತ್ರ ಹಿಂದೂ ಎನ್ನುತ್ತಾರೆ. ಅಧಿಕಾರಕ್ಕೆ ಬಂದ ಮೇಲೆ ಮುಸ್ಲಿಂ ಅಂತಾರೆ. ಆದರೆ, ನಮ್ಮ ರಕ್ತದ ನರನಾಡಿಗಳಲ್ಲಿ ಹಿಂದೂ ರಕ್ತ ಹರಿಯುತ್ತಿದೆ. ಹಾಗಾಗಿ ನಾವು ಯಾವಾಗಲೂ ಹಿಂದೂ ಎಂದು ನೇರವಾಗಿ ಹೇಳಿದರು.

ಒಬ್ಬ ವಿರೋಧ ಪಕ್ಷದ ನಾಯಕ ಗ್ರಾಮ ಪಂಚಾಯ್ತಿ ಮಟ್ಟಕ್ಕೆ ಹೋಗುತ್ತಾರೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಗಣಪತಿಗೆ ನಿರ್ಬಂಧ ಹೇರಿದರೆ ಒಂದು ಬೀದಿಗೆ ಸಹ ಹೋಗಲು ಸಿದ್ಧನಿದ್ದೇನೆ. ಹಬ್ಬ ಮಾಡುವ ತಾಕತ್ತು ನಮಗೆ ಇದೆ. ನಮ್ಮ ಹೋರಾಟ ಗಣಪತಿ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಬೇಕು. ಇದು ಪೊಲೀಸರ ಹಬ್ಬ ಆಗಬಾರಾದು. ಇದು ಗಣೇಶ ಮೆರವಣಿಗೆ ಮಾತ್ರವಲ್ಲ ಕಾಂಗ್ರೆಸ್ ವಿರುದ್ಧದ ಧ್ವನಿ. ಈ ಸರ್ಕಾರ ಮುಂದಿನ ವರ್ಷ ಇದ್ದರೆ ಗಣೇಶ ಹಬ್ಬಕ್ಕೆ ನಿರ್ಬಂಧ ಇರಬಾರದು ಎಂದು ಗುಡುಗಿದರು.

ಹುಬ್ಬಳ್ಳಿಯಲ್ಲಿ ಡಿಜೆ ಮಾಲೀಕರ ವಿರುದ್ಧ ಕೇಸ್ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನವರು ಡಿಜೆ ಮಾಲೀಕರ ಮೇಲೆ ಕೇಸ್ ಹಾಕುತ್ತಾರೆ. ಇವರು ಮಸೀದಿಗಳಿಗೆ ಆಜಾನ್ ಕೂಗುವವರ ಮೇಲೆ ಕೇಸ್ ಹಾಕುವುದಿಲ್ಲ. ಯಾವತ್ತಾದರು ಮಸೀದಿಗಳಿಗೆ ನೋಟಿಸ್ ಕೊಟ್ಟಿರುವುದನ್ನು ನೋಡಿದ್ದೀರಾ. ಈ ರೀತಿ ಮಾಡಿಕೊಂಡೇ ಎಲ್ಲ ಕಡೆ ಕಾಂಗ್ರೆಸ್ ಖಾಲಿಯಾಗಿದೆ. ಮುಂದೆ ಕರ್ನಾಟಕದಲ್ಲೂ ಖಾಲಿಯಾಗುತ್ತೆ ಎಂದು ಭವಿಷ್ಯ ನುಡಿದರು.

ನಮಗೆ ಮಸೀದಿ ಮುಂದೆ ಹೋಗಬೇಡಿ ಅಂತಾರೆ. ಅದೇ ಮುಸ್ಲಿಂ ಮೆರವಣಿಗೆ ಹಿಂದೂ ದೇವಸ್ಥಾನ ಮುಂದೆ ಹೋಗಬೇಡಿ ಎಂದು ಹೇಳಿದ್ದಾರಾ. ಈ ಬುದ್ಧಿಯಿಂದಲೇ ಕಾಂಗ್ರೆಸ್‌ನ್ನು ಹಿಂದೂ ವಿರೋಧಿ ಅನ್ನೋದು. ಇಟಲಿಯ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೈಯ್ಯಲ್ಲಿ ಹರಿಯುತ್ತಿರುವುದು ಹಿಂದೂ ವಿರೋಧಿ ರಕ್ತ ಎಂದು ಟೀಕಿಸಿದರು.

ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಇರೋದು ಹಿಂದೂ ವಿರೋಧಿ ಸರ್ಕಾರ. ಯಾರನ್ನು ಯಾವ ರೀತಿ ಕಂಟ್ರೋಲ್ ಮಾಡಬೇಕೆಂದು ಅವರಿಗೆ ಗೊತ್ತಿದೆ. ಕಾನೂನುಬಾಹಿರವಾಗಿ ಬೇರೆಯವರು ಮಾಡಿದರೆ ತಪ್ಪು. ಸರ್ಕಾರವೇ ತಪ್ಪು ಮಾಡಿದ್ರೆ ಯಾರು ಕ್ರಮ ತೆಗೆದುಕೊಳ್ಳಬೇಕು. ಡಿಜೆ ಇಟ್ಟಿರುವವರ ಮೇಲೆ ಕೇಸ್ ಹಾಕಿದರೆ ಹೇಗೆ. ಮುಂದೆ ಈ ಸರ್ಕಾರ ಗಣಪತಿ ಹಬ್ಬ ಮಾಡುವವರ ಮೇಲೆ ಕೇಸ್ ಹಾಕಬಹುದು ಎಂದು ಕಿಡಿಕಾರಿದರು.

ಹಿಂದೂಗಳನ್ನು ಹತ್ತಿಕ್ಕಿವುದು ಬೇಡ. ಕಾಂಗ್ರೆಸ್‌ನವರು ಓಲೈಕೆ ರಾಜಕೀಯ ಮಾಡುತ್ತಿದ್ದಾರೆ. ಉರ್ಮ ಖಲೀದ್ ನ್ಯಾಷನಲಿಸ್ಟ್ ಎನ್ನುತಾರೆ ಇವರು. ಉರ್ಮ ಖಲೀದ್ ಎಷ್ಟು ನ್ಯಾಷನಲಿಸ್ಟ್ ಬಿ.ಕೆ.ಹರಿಪ್ರಸಾದ್ ಕೂಡ ಅಷ್ಟೇ ನ್ಯಾಷಲಿಸ್ಟ್. ಜನ ಉಮರ್‌ ಖಲೀದ್‌ನನ್ನು ಭಯೋತ್ಪಾದಕ ಎನ್ನುತ್ತಾರೆ. ನೀವೂ ಅವರ ರೀತಿಯೇ ಅನ್ನೋಕೆ ಆಗುತ್ತಾ ಎಂದು ವ್ಯಂಗ್ಯವಾಡಿದರು.