ಸಾರಾಂಶ
ಹಳ್ಳದ ಪಕ್ಕದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ಗಿಡ-ಕಂಟಿಗಳನ್ನು ಕಡಿದು ಹಳ್ಳಕ್ಕೆ ಎಸೆದ ಕಾರಣ ಹಳ್ಳಕ್ಕೆ ಕಟ್ಟಲಾಗಿದ್ದ ಸಣ್ಣ ಸೇತುವೆ ಕಡ್ಡಿ-ಕಸದೊಂದಿಗೆ ಹೂಳು ತುಂಬಿಕೊಂಡಿದೆ.
ಧಾರವಾಡ:
ಬೆಳಗಾವಿ-ಧಾರವಾಡ ಗಡಿಭಾಗದಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ತಾಲೂಕಿನ ಕಲ್ಲೇ ಗ್ರಾಮದ ಕಳ್ಳಿ ಹಳ್ಳಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಹಳ್ಳ ಉಕ್ಕಿ ಹರಿಯುತ್ತಿದೆ.ಹಳ್ಳದ ಪಕ್ಕದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ಗಿಡ-ಕಂಟಿಗಳನ್ನು ಕಡಿದು ಹಳ್ಳಕ್ಕೆ ಎಸೆದ ಕಾರಣ ಹಳ್ಳಕ್ಕೆ ಕಟ್ಟಲಾಗಿದ್ದ ಸಣ್ಣ ಸೇತುವೆ ಕಡ್ಡಿ-ಕಸದೊಂದಿಗೆ ಹೂಳು ತುಂಬಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮಳೆ ನೀರು ಸರಾಗವಾಗಿ ಹೋಗದೇ ಸೇತುವೆ ಮೇಲಿನ ರಸ್ತೆ ಸಹ ಬಂದ್ ಆಗಿದೆ.
ಹಳ್ಳದಲ್ಲಿ ಹರಿದು ಬರುವ ನೀರು ಅಕ್ಕ ಪಕ್ಕದ ಜಮೀನಿನಲ್ಲಿ ನುಗ್ಗಿ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಕಬ್ಬೆನೂರು ಗ್ರಾಮದಿಂದ ಕಲ್ಲೇ ಗ್ರಾಮದ ಮಧ್ಯೆ ಇರುವ ಸೇತುವೆ ಜಲಾವೃತ ಆಗಿದ್ದು, ಸೇತುವೆ ದಾಟಲು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಜಿಲ್ಲಾಡಳಿತವು ಎಚ್ಚೆತ್ತುಕೊಂಡು ರಸ್ತೆ ಮಾರ್ಗ ಸುಗಮ ಮಾಡಿಕೊಡಬೇಕೆಂದು ಗ್ರಾಮಸ್ಥ ಮಲ್ಲಿಕಾರ್ಜುನ ತುರಮರಿ ಆಗ್ರಹಿಸಿದ್ದಾರೆ.ಕಳೆದ ಎರಡು ದಿನಗಳಿಂದ ಧಾರವಾಡದಲ್ಲಿ ಉತ್ತಮ ಮಳೆಯಾಗುತ್ತಿದ್ದು ಮತ್ತೆ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಈ ಹಿಂದೆ ಸುರಿದ ಮಳೆಗೆ ತುಸು ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದು ಉಳಿದ ರೈತರು ಇದೀಗ ಬಿತ್ತನೆಗೆ ಸಜ್ಜಾಗಿದ್ದು ಮಳೆಯಿಂದ ಅವರ ಮುಖದಲ್ಲಿ ಮಂದಹಾಸ ಮೂಡಿದೆ.