ತಂಗುದಾಣಕ್ಕೇ ಬೇಕು ಬಿಸಿಲು, ಮಳೆ ರಕ್ಷಣೆ !

| Published : Nov 13 2025, 04:15 AM IST

ತಂಗುದಾಣಕ್ಕೇ ಬೇಕು ಬಿಸಿಲು, ಮಳೆ ರಕ್ಷಣೆ !
Share this Article
  • FB
  • TW
  • Linkdin
  • Email

ಸಾರಾಂಶ

ಗುಳೇದಗುಡ್ಡ ತಾಲೂಕಿನ ಖಾಜಿ ಬೂದಿಹಾಳ ಕ್ರಾಸ್‌ನಲ್ಲಿ ನಿರ್ಮಿಸಿದ ಬಸ್ ತಂಗುದಾಣದ ಚಾವಣಿಯ ಸೀಟುಗಳು ಗಾಳಿಗೆ ಹಾರಿ ಹೋಗಿ ವರ್ಷಗಳೇ ಕಳೆದರೂ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು ಇತ್ತ ಗಮನವನ್ನೇ ಹರಿಸಿಲ್ಲ. ಇದನ್ನು ದುರಸ್ತಿ ಮಾಡದ ಕಾರಣ ಪ್ರಯಾಣಿಕರು ಬಿಸಿಲು, ಮಳೆ, ಗಾಳಿಗೆ ತೊಂದರೆ ಅನುಭವಿಸುವಂತಾಗಿದೆ.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ತಾಲೂಕಿನ ಖಾಜಿ ಬೂದಿಹಾಳ ಕ್ರಾಸ್‌ನಲ್ಲಿ ನಿರ್ಮಿಸಿದ ಬಸ್ ತಂಗುದಾಣದ ಚಾವಣಿಯ ಸೀಟುಗಳು ಗಾಳಿಗೆ ಹಾರಿ ಹೋಗಿ ವರ್ಷಗಳೇ ಕಳೆದರೂ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು ಇತ್ತ ಗಮನವನ್ನೇ ಹರಿಸಿಲ್ಲ. ಇದನ್ನು ದುರಸ್ತಿ ಮಾಡದ ಕಾರಣ ಪ್ರಯಾಣಿಕರು ಬಿಸಿಲು, ಮಳೆ, ಗಾಳಿಗೆ ತೊಂದರೆ ಅನುಭವಿಸುವಂತಾಗಿದೆ.

ಹೌದು. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಾದಾಮಿ ಮತಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಬಳಿಕ ನಿರ್ಮಿಸಿದ ತಂಗುದಾಣ ಇದು. ಕಬ್ಬಣದಿಂದ ನಿರ್ಮಿಸಿದ ಸಾಕಷ್ಟು ಭದ್ರವಾದ ಈ ತಂಗುದಾಣ, ಕೆಲವರ್ಷ ಚೆನ್ನಾಗಿಯೇ ಇತ್ತು. ಮುಂದೆ ಚುನಾವಣೆ ನೀತಿ ಸಂಹಿತೆ ಕಾರಣ ತಂಗುದಾಣದ ಮೇಲಿದ್ದ ಶಾಸಕರ ಭಾವಚಿತ್ರ ತೆಗೆದು ಹಾಕುವ ಸಂದರ್ಭದಲ್ಲಿ ಅದರ ಮೇಲಿನ ತಗಡಿನ ಸೀಟುಗಳು ಸಡಿಲಾಗಿ ಕೆಲ ದಿನಗಳ ನಂತರ ಗಾಳಿಗೆ ಹಾರಿಹೋಗಿವೆ. ಕೆರೂರ ಮತ್ತು ಗುಳೇದಗುಡ್ಡ ಕಡೆಗೆ ಪ್ರಯಾಣಿಸುವ ಖಾಜಿ-ಬೂದಿಹಾಳ ಮತ್ತು ರೈಲು ನಿಲ್ದಾಣದ ಅಕ್ಕಪಕ್ಕ ವಾಸವಾಗಿರುವ ಸಾರ್ವಜನಿಕರು ಬಸ್‌ಗಾಗಿ ಈ ಸ್ಥಳಕ್ಕೆ ಬಂದು ಕಾಯಬೇಕು. ಮಕ್ಕಳು, ಮಹಿಳೆಯರು, ವೃದ್ಧರು ಚಾವಣಿ ಇಲ್ಲದ ಈ ತಂಗುದಾಣದಲ್ಲೇ ಕುಳಿತುಕೊಳ್ಳಬೇಕು. ಮಳೆಗಾಲದಲ್ಲಿ ಮಳೆ ಬಂದರೆ ರಕ್ಷಣೆ ಇಲ್ಲ. ಸಾಕಷ್ಟು ಭದ್ರವಾಗಿರುವ ಬಸ್ ತಂಗುದಾಣಕ್ಕೆ ತಗಡಿನ ಸೀಟ್‌ ಹಾಕಿದರೆ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಅನುಕೂಲ ಆಗುತ್ತದೆ. ಆದರೆ ಸಂಬಂಧಪಟ್ಟ ಇಲಾಖೆಯವರು ಕಣ್ಣು ತೆರೆದು ನೋಡುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.

ಈ ಬಸ್ ತಂಗುದಾಣದ ಹಿಂದೆ ಅದಕ್ಕೆ ಹೊಂದಿಕೊಂಡು ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರ ಖಾಸಗಿ ಪ್ರೌಢಶಾಲೆಯೂ ಇದೆ. ಶಾಸಕರು ಅನೇಕ ಬಾರಿ ಈ ಮಾರ್ಗವಾಗಿ ಹೋಗುವಾಗ ಅವರ ಕಣ್ಣಿಗೆ ಬಸ್ ತಂಗುದಾಣ ದುಃಸ್ಥಿತಿ ಬೀಳದೇ ಇರುವುದು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ. ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಸಾಕಷ್ಟು ಸಲ ಇದೇ ಮಾರ್ಗವಾಗಿ ಹೋದರೂ ಈ ತಂಗುದಾಣ ನಿರ್ಲಕ್ಷ್ಯಕ್ಕೊಳಗಾಗಿದ್ದು ಗ್ರಾಮಸ್ಥರ ಅಕ್ರೋಶಕ್ಕೆ ಕಾರಣವಾಗಿದೆ.

ಈ ಭಾಗದ ಜನಪ್ರತಿನಿಧಿಗಳು ಈ ತಂಗುದಾಣವನ್ನು ಆದಷ್ಟು ಬೇಗ ಸುಧಾರಿಸಿ ದುರಸ್ತಿ ಮಾಡಿಕೊಡಲಿ. ಸಾರ್ವಜನಿಕರಿಗೆ ಈ ತಂಗುದಾಣ ಇದ್ದೂ ಪ್ರಯೋಜನವಾಗದಂತಾಗಿದೆ.

- ಮಹೇಶ, ರಮೇಶ ಕರಕಿಕಟ್ಟಿ ಹಾಗೂ ಗ್ರಾಮಸ್ಥರು ಖಾಜಿಬೂದಿಹಾಳ