ದಲಿತನ ಮೇಲಿನ ಹಲ್ಲೆ ಪ್ರಕರಣಕ್ಕೆ ರೆಕ್ಕೆ ಪುಕ್ಕ ಬೆಳೆಸುವುದು ಬೇಡ

| Published : Jan 05 2024, 01:45 AM IST

ದಲಿತನ ಮೇಲಿನ ಹಲ್ಲೆ ಪ್ರಕರಣಕ್ಕೆ ರೆಕ್ಕೆ ಪುಕ್ಕ ಬೆಳೆಸುವುದು ಬೇಡ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಕಿನ ಗೇರಮರಡಿಯಲ್ಲಿ ದಲಿತಯುವಕನ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘ ತೀವ್ರ ಖಂಡಿಸಿದೆ.

ಚಿತ್ರದುರ್ಗ: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಕಿನ ಗೇರಮರಡಿಯಲ್ಲಿ ದಲಿತಯುವಕನ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘ ತೀವ್ರ ಖಂಡಿಸಿದೆ. ಘಟನೆಯನ್ನು ಶಾಂತಿಯುತವಾಗಿ ಬಗೆ ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡೋಣ. ಹೊರಗಿನವರು ಮತ್ತು ಘಟನೆಯ ಬಗ್ಗೆ ಮಾಹಿತಿ ಇಲ್ಲದವರು ಉಪ್ಪು ಕಾರ ಹಚ್ಚಿ, ರೆಕ್ಕೆ ಪುಕ್ಕ ಬೆಳೆಸಿ ದೊಡ್ಡದಾಗಿಸಬೇಡಿ ಎಂದು ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಶಿವು ಯಾದವ್ ಮನವಿ ಮಾಡಿದ್ದಾರೆ.

ಇತ್ತೀಚೆಗೆ ಇಂತಹ ಘಟನೆಗಳು ರಾಜ್ಯದಲ್ಲಿ ಯಾವ ಗೊಲ್ಲರಹಟ್ಟಿಗಳಲ್ಲಿ ನಡೆದಿರಲಿಲ್ಲ. ಜೊತೆಗೆ ರಾಜ್ಯ ಸರ್ಕಾರ ಮತ್ತು ನಮ್ಮ ಸಂಘಟನೆ ಅಲ್ಲಲ್ಲಿ ಕೆಲವು ಗೊಲ್ಲರಹಟ್ಟಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.

ಕೃಷ್ಣ, ಜಾಂಬವಂತನ ಮಗಳಾದ ಜಾಂಬವತಿಯನ್ನು ವಿವಾಹವಾಗಿರುವುದರಿಂದ ನಾವು ಆದಿಕರ್ನಾಟಕ ಜನಾಂಗದವರು ನೆಂಟರು ಬಂಟರು ಆಗಿದ್ದೆವೆ. ಈಗಿರುವಾಗ ಅವರನ್ನು ನಮ್ಮ ಮನೆಯಿಂದ ಹೊರಗೆ ಇಡುವ ಪ್ರವೃತ್ತಿ ಸರಿಯಲ್ಲ. ಕಾನೂನಿನ ಅಡಿಯಲ್ಲಿ ಎಲ್ಲರೂ ಸಮಾನರು. ಅವರಿಗೆ ಬಹಿಷ್ಕಾರ ಹಾಕಿದರೆ ಕಾನೂನಿನ ಪ್ರಕಾರ ಅಪರಾದವಾಗುತ್ತದೆ. ಯಾರೋ ಮಾಡಿದ ತಪ್ಪಿಗೆ ಇಡೀ ಸಮಾಜ ತಲೆ ತಗ್ಗಿಸಬೇಕಾಗುತ್ತದೆ ಅದ್ದರಿಂದ ಕಾಡುಗೊಲ್ಲರು ಕಾನೂನು ಅರಿತು ಜೀವನ ನಿರ್ವಹಣೆ ಮಾಡಬೇಕು ಎಂದಿದ್ದಾರೆ.

ಗೊಲ್ಲರಹಟ್ಟಿಗಳಲ್ಲಿ ನಮ್ಮ ಜನಗಳಿಗೆ ದೇವರ ಮೇಲೆ ಇರುವ ಅಪಾರ ನಂಬಿಕೆಯೇ ಇಂತಹ ಮೂಢನಂಬಿಕೆಗೆ ಕಾರಣವಾಗಿದೆ. ದೇವರಿಗೆ ಅಂಟು ಮುಂಟು ಆಗಬಾರದು, ದೇವರಿಗೆ ಸೂತಕ ಆಗಬಾರದು ಎಂಬ ದೃಷ್ಟಿಯಿಂದ ಮತ್ತು ನಂಬಿಕೆಯಿಂದ ಇಂತಹ ಸಂವಿಧಾನ ಬಾಹಿರ ಕೃತ್ಯಗಳು ನಡೆಯುತ್ತವೆ. ಕಾಡುಗೊಲ್ಲ ಜನಾಂಗವು ಬುದ್ದ ಬಸವ, ಅಂಬೇಡ್ಕರ್ ರವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತ ಈ ನೆಲದ ಕಾನೂನಿಗೆ ಗೌರವ ನೀಡುವ ನೀಡಬೇಕು. ಜಿಲ್ಲಾಡಳಿತ ಕೂಡಲೇ ಎರಡೂ ಕೋಮುಗಳ ಮಧ್ಯ ಶಾಂತಿ ಸಭೆ ನಡೆಸಿ ಸೌಹಾರ್ದತೆ ಕಾಪಾಡಬೇಕು.

ಈಗಾಗಲೇ ಪೋಲಿಸ್ ನವರು ಮಧ್ಯ ಪ್ರವೇಶ ಮಾಡಿ ದೂರು ದಾಖಲಿಸಿಕೊಂಡಿದ್ದಾರೆ. ಅವರು ತನಿಖೆ ನಡೆಸಿ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಲು ಅನುವು ಮಾಡಿಕೊಡಬೇಕೆಂದು ಶಿವುಯಾದವ್ ವಿನಂತಿಸಿದ್ದಾರೆ.