ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇತಿಹಾಸ ಪ್ರತೀಕ ಸೇತುವೆಯನ್ನು ಸ್ಮಾರಕವಾಗಿ ಉಳಿಸಿಕೊಳ್ಳುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತುಂಗಾ ಸೇತುವೆ ಈಗ ದುಸ್ಥಿತಿಯಲ್ಲಿದೆ.ನಗರದ ಬೆಕ್ಕಿನಕಲ್ಮಠ ಬಳಿಯ ತುಂಗಾ ಸೇತುವೆಯನ್ನು ಬ್ರಿಟಿಷರ ಕಾಲದಲ್ಲಿ ಈ ಸೇತುವೆ ನಿರ್ಮಿಸಲಾಗಿದ್ದು, ತನ್ನ ಅಂದ ಕಳೆದುಕೊಂಡಿದ್ದು ಬಿಟ್ಟರೆ, ಇಂದಿಗೂ ಗಟ್ಟಿಮುಟ್ಟಾಗಿದೆ. ಆದರೆ, ಹೊಸ ನೀರು ಬಂದ ಮೇಲೆ ಹಳೆ ನೀರು ಕೊಚ್ಚಿಹೋಯಿತು ಎಂಬಂತೆ ಹೊಸ ಸೇತುವೆ ನಿರ್ಮಾಣದ ಬಳಿಕ ಹಳೆಯ ಸೇತುವೆ ನಿರ್ವಹಣೆಗೆ ಯಾರೂ ಮುಂದಾಗಿಲ್ಲ. ಸೇತುವೆಯನ್ನು ಇನ್ನೂ ಬಳಸಲಾಗುತ್ತಿದೆ. ಆದರೆ, ಆಳೆತ್ತರ ಬೆಳೆದ ಗಿಡಗಳು ಸೇತುವೆ ನಿರ್ವಹಣೆಯಲ್ಲಿನ ನಿರ್ಲಕ್ಷ್ಯಕ್ಕೆ ಕನ್ನಡಿಯಾಗಿದೆ.
ಸೇತುವೆ ಎರಡೂ ಬದಿಯಲ್ಲಿ ಗಿಡಗಳು ಬೃಹದಾಕಾರವಾಗಿ ಬೆಳೆದಿರುವುದರಿಂದ ಸೇತುವೆ ಪಕ್ಕದ ಸ್ಪ್ಯಾಬ್‌ಗಳು ಕುಸಿಯುವ ಹಂತ ತಲುಪಿವೆ. ಆದರೂ ಅಧಿಕಾರಿಗಳು ಗಮನಹರಿಸಿಲ್ಲ. ಸದ್ಯ ಈ ಸೇತುವೆಯಲ್ಲಿ ಭಾರಿ ವಾಹನಗಳ ಓಡಾಟವನ್ನು ನಿಲ್ಲಿಸಲಾಗಿದೆ. ಲಘು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ, ಸೇತುವೆ ಬದಿಯಲ್ಲಿ ಬೆಳೆದಿರುವ ಅರಳಿ ಗಿಡಗಳನ್ನು ಬುಡ ಸಮೇತ ಕಿತ್ತು ಹಾಕದೆ ಇದ್ದೆ, ಮುಂದೆ ದಿನ ದಿನಕ್ಕೆ ಮರ ಬೆಳೆಯತ್ತಲೇ ಹೋಗಿ ಅದರ ಬೇರುಗಳು ಆಳವಾಗಿ ನೆಲೆಯೂರುವುದರಿಂದ ಸೇತುವೆ ಬಿರುಕು ಬಿಡುವ ಸಾಧ್ಯತೆಗಳು ಹೆಚ್ಚಾಗಿದೆ. ಹೀಗಾಗಿ ಈ ಗಿಡಗಳನ್ನು ಕತ್ತರಿಸಿದರೆ ಸಾಲದು, ಬುಡ ಸಮೇತ ಕಿತ್ತು ಹಾಕಬೇಕು ಎಂಬುದು ಸಾರ್ವಜನಿಕರ ಒತ್ತಾಯಶತಮಾನದ ಸೇತುವೆ:
ಸುಮಾರು 137 ವರ್ಷಗಳ ಹಿಂದೆ ಈ ಸೇತುವೆ ನಿರ್ಮಿಸಲಾಗಿದೆ. ನಗರದಿಂದ ನೆರೆಯ ಜಿಲ್ಲೆ ಹಾಗೂ ರಾಜ್ಯ ಸೇರಿದಂತೆ ಹಳ್ಳಿಗಳಿಗೆ ಹೋಗಬೇಕಾದರೆ, ಈ ಸೇತುವೆಯೇ ಸಂಪರ್ಕ ಸಾಧನ. ಇಷ್ಟೊಂದು ಪ್ರಮುಖವಾದ ಸೇತುವೆಯ ಎರಡೂ ಬದಿಯಲ್ಲಿ ಗಿಡಗಳ ಬೇರುಗಳಿಂದ ಬಿರುಕು ಕಾಣಿಸಿಕೊಂಡಿದೆ.ಈ ಹಿಂದೆ ಮಳೆಗಾಲದಲ್ಲಿ ಬಿರುಕುಗಳ ಮೂಲಕ ನೀರು ಹರಿದು ಪಿಲ್ಲರ್‌ಗಳು ಹಾಳಾಗಿದ್ದವು. ಈಚೆಗೆ ಅವುಗಳ ರಿಪೇರಿ ಮಾಡಲಾಗಿದೆ. ಆದರೆ, ಈ ಮತ್ತೆ ಸೇತುವೆ ಉದ್ದಕ್ಕೂ ಮೇಲ್ಭಾಗದಲ್ಲಿ ಬೆಳೆಯುತ್ತಿರುವ ಅರಳಿ ಗಿಡಗಳ ಬೇರುಗಳಿಂದಾಗಿ ಮತ್ತೆ ಪಿಲ್ಲರ್‌ಗಳಿಗೆ ಹಾನಿಯಾಗುವ ಸಾಧ್ಯತೆ ಇದೆ.
--ಅಧಿಕಾರಿಗಳ ನಿರ್ಲಕ್ಷ್ಯಸೇತುವೆ ದುಸ್ಥಿತಿ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಲಾಗಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ದುರಸ್ತಿ ಮಾಡುವ ಕೆಲಸವಾಗಿಲ್ಲ. ಕೂಡಲೇ ಗಿಡಗಳ ಬೇರು ಸಹಿತ ತೆಗೆಸಿ, ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಸಾರ್ವಜನಿಕರ ಒತ್ತಾಯ.
---------------ಸೇತುವೆ ಬದಿಯ ಗಿಡ ಕತ್ತರಿಸಲಾಗುತ್ತಿದೆ. ಸೇತುವೆ ದುರಸ್ತಿಗೆ ಲಕ್ಷಾಂತರ ರುಪಾಯಿ ಹಣ ಖರ್ಚಾಗುತ್ತದೆ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಲಾಗಿದ್ದು, ಶಾಶ್ವತ ಪರಿಹಾರಕ್ಕೆ ಚಿಂತಿಸಲಾಗುತ್ತಿದೆ.ಸಹಾಯಕ ಕಾರ್ಯಪಾಲಕ ಇಂಜಿನಿಯರ್