ಸಾರಾಂಶ
2023-24ನೇ ಸಾಲಲ್ಲಿ ಶೇ.88.67 ರಿಸಲ್ಟ್‌ನಿಂದ 29ರಿಂದ 3ನೇ ಸ್ಥಾನಕ್ಕೆ ಜಿಗಿದಿರುವ ಜಿಲ್ಲೆ । ಮೊದಲ ಸ್ಥಾನಕ್ಕೆ ಅಧಿಕಾರಿಗಳ ನಾನಾ ಕಸರತ್ತು
ಗಣೇಶ್ ತಮ್ಮಡಿಹಳ್ಳಿಕನ್ನಡಪ್ರಭ ವಾರ್ತೆ ಶಿವಮೊಗ್ಗ
ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಪ್ರಸಕ್ತ ವರ್ಷದಂತೆಯೇ ಸ್ಥಿರತೆ ಕಾಯ್ದುಕೊಂಡು ಇನ್ನಷ್ಟು ಸುಧಾರಣೆ ಮಾಡುವ ಸವಾಲಿನ ಕೆಲಸ ಇದೀಗ ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಗಳ ಮೇಲಿದೆ.ಈ ಸಲ ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹೆಚ್ಚಿನ ಸುಧಾರಣೆ ಕಂಡಿದೆ. ಜಿಲ್ಲೆಯು ರಾಜ್ಯ ಮಟ್ಟದಲ್ಲಿ 29ನೇ ಸ್ಥಾನದಿಂದ ಶಿವಮೊಗ್ಗ ಏಕಾಏಕಿ 3ನೇ ಸ್ಥಾನಕ್ಕೆ ಜಿಗಿದಿದೆ. ಎಸ್‌ಎಸ್‌ಎಲ್‌ಸಿಯ 2023-24ನೇ ಶೈಕ್ಷಣಿಕ ವರ್ಷದ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆಯು ಶೇ.88.67 ಪಡೆಯುವ ಮೂಲಕ 3ನೇ ಸ್ಥಾನ ಪಡೆದಿದೆ.
2002ರಲ್ಲಿ 8ನೇ ಸ್ಥಾನಕ್ಕೇರಿದ್ದು ಬಿಟ್ಟರೆ ಶಿವಮೊಗ್ಗ ಜಿಲ್ಲೆಯು ಈ ಹಿಂದೆಂದೂ ಮೂರನೇ ಸ್ಥಾನವನ್ನು ಅಲಂಕರಿಸಿದ್ದೇ ಇಲ್ಲ. ಈ ಬಾರಿ 3ನೇ ಸ್ಥಾನ ಪಡೆದಿರುವುದರಿಂದ ವಿದ್ಯಾರ್ಥಿಗಳು ಸಂಭ್ರಮಗೊಂಡಿದ್ದರೆ, ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಸಮಾಧಾನಗೊಂಡಿದ್ದಾರೆ.‘ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯು ರಾಜ್ಯದ ಅಗ್ರ 5 ಜಿಲ್ಲೆಗಳಲ್ಲಿ ಸ್ಥಾನ ಪಡೆಯುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕೆಡಿಪಿ ಸಭೆಯಲ್ಲಿ ಗುರಿ ನೀಡಿದ್ದರು. ಈ ಗುರಿ ಮುಟ್ಟುವುದು ಅಷ್ಟು ಸುಲಭವಾಗಿರಲಿಲ್ಲ. ಶಿಕ್ಷಣ ಇಲಾಖೆಯ ಅವಿರತ ಶ್ರಮ ಜಿಲ್ಲೆಯನ್ನು 3ನೇ ಸ್ಥಾನಕ್ಕೇರುವಂತೆ ಮಾಡಿದೆ. ಒಂದೇ ವರ್ಷದಲ್ಲೇ ದೊಡ್ಡ ಮಟ್ಟದ ಮುನ್ನಡೆಯಾಗಿದೆ. ಕಳೆದ ವರ್ಷಕ್ಕಿಂತ ಬರೋಬ್ಬರಿ 25 ಸ್ಥಾನ ಏರಿಕೆ ಕಂಡಿದೆ. ಇದರೊಂದಿಗೆ ರಾಜ್ಯ ಮಟ್ಟದಲ್ಲಿ ಅಗ್ರ 5ರೊಳಗೆ ಸ್ಥಾನ ಪಡೆದುಕೊಂಡಿದೆ. ಇದು ಸಣ್ಣ ಸಾಧನೆಯಂತೂ ಅಲ್ಲ. ಆದರೆ, ಈ ಫಲಿತಾಂಶದ ಸ್ಥಿರತೆ ಕಾಯ್ದುಕೊಂಡು, ಇನ್ನಷ್ಟು ಸುಧಾರಣೆ ಮಾಡುವ ಸವಾಲು ಇದೆ.
ಫಲಿತಾಂಶ ಸ್ಥಿರತೆ ಕಾಪಾಡಿಕೊಳ್ಳಲು ನಾನಾ ಕಸರತ್ತು:ಕಳೆದ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 103 ಶಾಲೆಗಳಲ್ಲಿ ಶೇ. 70ಕ್ಕಿಂತ ಕಡಿಮೆ ಫಲಿತಾಂಶ ಬಂದಿತ್ತು. ಈ ಶಾಲೆಗಳಿಗೆ ವಿಶೇಷವಾದ ಒತ್ತು ನೀಡಲಾಗಿತ್ತು. ಇಲಾಖೆಯ ಅಧಿಕಾರಿಗಳು ನಿರಂತರವಾಗಿ ಆ ಶಾಲೆಗಳಲ್ಲಿನ ಶೈಕ್ಷಣಿಕ ಸುಧಾರಣೆಗೆ ನಿಗಾ ಇಟ್ಟಿದ್ದರು. ಮಾರ್ಗದರ್ಶನ ಮಾಡುತ್ತಿದ್ದರು. ಅದೀಗ ಫಲ ನೀಡಿದ್ದು, ಫಲಿತಾಂಶದಲ್ಲಿ ಏರಿಕೆ ಆಗಿದೆ. ಈ ಫಲಿತಾಂಶವನ್ನು ಉಳಿಸಿಕೊಂಡು 3 ರಿಂದ ಮೊದಲ ಸ್ಥಾನಕ್ಕೇರಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳ ಗುರಿಯಾಗಿದ್ದು, ಇದಕ್ಕಾಗಿ ನಾನಾ ಕಸರತ್ತು ಆರಂಭಿಸಿದ್ದಾರೆ.
ಪ್ರತಿವಾರ ಪ್ರತಿ ವಿಷಯದ ಕುರಿತು 25 ಅಂಕಗಳ ಕಿರು ಪರೀಕ್ಷೆ ತೆಗೆದುಕೊಳ್ಳಲಾಗಿದೆ. ಎಲ್ಲ ಶಾಲೆಗಳಿಗೆ ನೋಡಲ್ ಆಧಿಕಾರಿಗಳ ನೇಮಕ ಮಾಡಿ ವಿಷಯ ಪರಿವೀಕ್ಷಕರಿಂದ ತಿಂಗಳಿಗೊಮ್ಮೆ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ.ಡಿಸೆಂಬರ್ ತಿಂಗಳ ಅಂತ್ಯದಲ್ಲಿಯೇ ಪಠ್ಯಕ್ರಮ ಮುಗಿಸಲಾಗಿತ್ತು. ಜನವರಿಯಲ್ಲಿ ಒಟ್ಟು 4 ಪೂರ್ವ ಸಿದ್ದತಾ ಪರೀಕ್ಷೆಗಳ ತೆಗೆದುಕೊಳ್ಳಲಾಗಿದೆ. ತರಗತಿ ಪರೀಕ್ಷೆಗಳಲ್ಲಿ ಹಾಗೂ ಪೂರ್ವ ಸಿದ್ದತಾ ಪರೀಕ್ಷೆಗಳಲ್ಲಿ ಕಡಿಮೆ ಸಾಧನೆ ತೋರಿದ ವಿದ್ಯಾರ್ಥಿಗಳು ಕನಿಷ್ಠ ಅಂಕಗಳನ್ನು ಪಡೆದು ಉತ್ತೀರ್ಣರಾಗಲು ಅನುಕೂಲವಾಗುವಂತೆ ಅವರಿಗೆ 60 ಅಂಕಗಳಿಗೆ ಪೂರಕ ಸಾಹಿತ್ಯ ಸಿದ್ದಪಡಿಸಲಾಗಿದೆ.
ಗ್ರಾಮಾಂತರ ಮತ್ತು ನಗರ ಪ್ರದೇಶದಲ್ಲಿ ಇಂಗ್ಲಿಷ್ ಭಾಷೆ ಹಾಗೂ ಕೋರ್ ವಿಷಯಗಳಲ್ಲಿ ಫಲಿತಾಂಶ ಹೆಚ್ಚಳಕ್ಕೆ ನುರಿತ ಶಿಕ್ಷಕರಿಂದ ವಿಶೇಷ ತರಗತಿಗಳನ್ನು ನಡೆಸಲಾಗಿದೆ. ಹೋಬಳಿ ಮಟ್ಟದಲ್ಲಿ ನೇರ್ ಫೋನ್ ಇನ್ ಕಾರ್ಯಕ್ರಮ ನಡೆಸಿ ಮಕ್ಕಳ ಕಲಿಕಾ ಸಮಸ್ಯೆಗಳನ್ನು ಪರಿಹರಿಸಲಾಗಿದೆ.ಕಳೆದ ವರ್ಷ ಶೇ 70ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಹಾಗೂ ಸಿ ಗ್ರೇಡ್ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ವಿಷಯವಾರು ಶಿಕ್ಷಕರ ಸಭೆಯನ್ನು ಪ್ರತಿ ತಿಂಗಳು ನಡೆಸಿ ಫಲಿತಾಂಶ ಸುಧಾರಣೆ ಮಾಡುವ ಕುರಿತು ಸಮರ್ಪಕವಾದ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಡಿಡಿಪಿಐ ಮಂಜುನಾಥ್ ತಿಳಿಸಿದ್ದಾರೆ.
ಹಿಂದುಳಿದ ಸರ್ಕಾರಿ ಶಾಲೆಗಳು:ಸರ್ಕಾರಿ ಶಾಲೆ ಫಲಿತಾಂಶಕ್ಕಿಂತ ಖಾಸಗಿ ಶಾಲೆಗಳ ಫಲಿತಾಂಶ ಹೆಚ್ಚಿದೆ. ಇದರಲ್ಲಿ ಸಮತೋಲನ ತರಬೇಕಿದ್ದು, ಸರ್ಕಾರಿ ಶಾಲೆಗಳ ಫಲಿತಾಂಶ ಹೆಚ್ಚಳ, ಗುಣಮಟ್ಟ ಶಿಕ್ಷಣ ನೀಡಲು ಹೆಚ್ಚಿನ ಆದ್ಯತೆ ನೀಡಬೇಕಿದೆ.
ಕಳೆದ ಬಾರಿ ಜಿಲ್ಲೆಗೆ ಉತ್ತಮ ಫಲಿತಾಂಶ ಬಂದಿದೆ. ಈ ಬಾರಿಯೂ ಫಲಿತಾಂಶದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವುದರೊಂದಿಗೆ ಇನ್ನಷ್ಟು ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಲಾಗುವುದು. ಈಗಾಗಲೇ ಬಿಇಒ ಅಧಿಕಾರಿಗಳು, ಡಯಟ್ ಸಂಸ್ಥೆ ಅಧಿಕಾರಿಗಳ ಸಹಕಾರದೊಂದಿಗೆ ಈಗಾಗಲೇ ಅನೇಕ ಚಟುವಟಿಕೆಗಳನ್ನು ಆರಂಭಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗಲು ವಿಶೇಷ ಚಟುವಟಿಕೆಯನ್ನು ಕೈಗೊಳ್ಳಲಾಗಿದೆ.ಎಸ್.ಆರ್.ಮಂಜುನಾಥ್, ಉಪ ನಿರ್ದೇಶಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ.