ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಮ್ಮ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮಕ್ಕಳು ಚಳಿ, ಬಿಸಿಲು ಹಾಗೂ ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಹಾಸನಾಂಬೆ ಜಾತ್ರಾ ಮಹೋತ್ಸವ ಹಾಗೂ ಶ್ರವಣಬೆಳಗೊಳದ ಜಾತ್ರೆ ಸೇರಿದಂತೆ ವಿವಿಧ ಸೇವಾ ಚಟುವಟಿಕೆಯಲ್ಲಿ ಪಾಲ್ಗೊಂಡು ಜನರ ಸೇವೆಯಲ್ಲಿಯೇ ದೇವರನ್ನು ಕಂಡಿದ್ದಾರೆ ಎಂದು ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತರು ಹಾಗೂ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಶ್ಲಾಘಿಸಿದರು.ನಗರದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಭವನದ ಆವರಣದಲ್ಲಿ ನಡೆದ ರಾಜ್ಯ ಮಟ್ಟದ ಐತಿಹಾಸಿಕ ಸ್ಥಳಗಳ ಪರಿಚಯ ಮತ್ತು ವೀಕ್ಷಣಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ಗೆ ೭೫ ವರ್ಷಗಳು, ಭಾರತದ ಇತಿಹಾಸದಲ್ಲಿ ಏಳುವರೆ ಲಕ್ಷ ರೀಚ್ ಆಗಿರುವುದು ಇದೇ ಮೊದಲ ಬಾರಿಗೆ. ಇದರ ಕ್ರೆಡಿಟ್ ಹಾಸನ ಜಿಲ್ಲೆಯ ಸಂಸ್ಥೆಯವರಿಗೆ ಸಲ್ಲಬೇಕು. ಹಾಸನ ಜಿಲ್ಲೆಗೆ ಟಾರ್ಗೆಟ್ ಗಣತಿ ನೀಡಿದ್ದೆವು, ಅದರಲ್ಲಿ ನೂರಕ್ಕೆ ನೂರರಷ್ಟು ರೀಚ್ ಮಾಡಿದ್ದಾರೆ. ಪ್ರತಿವರ್ಷ ನಡೆಯುವ ಹಾಸನಾಂಬೆ ಜಾತ್ರೆಯಲ್ಲಿ ನಮ್ಮ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ನ ನೂರಾರು ಮಕ್ಕಳು ಆ ಸಂದರ್ಭದಲ್ಲಿ ಚಳಿ, ಬಿಸಿಲು ಲೆಕ್ಕಿಸದೇ ಸೇವೆ ಮಾಡಿ ಜನರಲ್ಲಿ ದೇವರನ್ನು ಕಾಣುತ್ತಾರೆ ಎಂದರು.
ಇನ್ನು ಹಾಸನಾಂಬೆ ದೇವಾಲಯದ ಬಾಗಿಲು ಹಾಕಿದ ಮೇಲೆ ಕಾಣಿಕೆ ಹುಂಡಿಯ ಹಣ ಎಣಿಕೆ ಮಾಡಲು ಕೂಡ ಮಕ್ಕಳು ಮುಂದಾಗುತ್ತಾರೆ. ಈ ವರ್ಷ ೧೩ ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದೆ. ಸರ್ಕಾರದ ಅನೇಕ ಇಲಾಖೆಗಳಿವೆ. ಆದರೆ ಪ್ರಾಮಾಣಿಕರು ಎಂದು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮಕ್ಕಳಿಗೂ ಹುಂಡಿ ಎಣಿಕೆ ಮಾಡಲು ಕೊಡುತ್ತಾರೆ. ನಿಮ್ಮ ಸೇವೆಯ ಒಂದು ಭಾಗ ಇದಾಗಿದೆ ಎಂದು ಶ್ಲಾಘಿಸಿದರು.ಸುಮಾರು ಆರು ವರ್ಷಗಳ ಹಿಂದೆ ಶ್ರವಣಬೆಳಗೊಳದಲ್ಲಿ ಜೈನರ ದೊಡ್ಡ ಜಾತ್ರೆ ನಡೆದಿತ್ತು. ಸುಮಾರು ೪ ಸಾವಿರಕ್ಕೂ ಹೆಚ್ಚು ರೋವರ್ಸ್, ರೇಜರ್ಸ್ ನಮ್ಮ ಮಕ್ಕಳು ಬಂದು ಒಂದು ತಿಂಗಳ ಕಾಲ ಬಿಸಿಲಿನಲ್ಲಿ ಜನರ ಸೇವೆ ಮಾಡಿದ್ದಾರೆ. ಇದೇ ತರಹ ವಿವಿಧ ಸೇವಾ ಚಟುವಟಿಕೆಯಲ್ಲಿ ಪಾಲ್ಗೊಂಡು ತಮ್ಮದೇ ಆದ ಸೇವೆಯನ್ನು ಸಮಾಜಕ್ಕೆ ಕೊಡುತ್ತಿದ್ದಾರೆ ಎಂದು ಹೇಳಿದರು. ನಮ್ಮ ಜಿಲ್ಲೆಯಲ್ಲಿ ವಿವಿಧ ಐತಿಹಾಸಿಕ ಸ್ಥಳಗಳಿವೆ. ಈ ಜಾಗಗಳಿಗೆ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿರುವ ಮಕ್ಕಳು ವೀಕ್ಷಣೆ ಮತ್ತು ಪರಿಚಯ ಮಾಡಿಕೊಳ್ಳುವ ಶಿಬಿರವನ್ನು ಮಾರ್ಚ್ ೨೨ರಿಂದ ಮಾರ್ಚ್ ೨೪ರವರೆಗೂ ಹಾಸನ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಪರಿಚಯ ಮತ್ತು ವೀಕ್ಷಣಾ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಪರಿಚಯ ಮತ್ತು ವೀಕ್ಷಣಾ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಸರ್ಟಿಫಿಕೇಟ್ ಅನ್ನು ಸ್ಕೌಟ್ ಅಂಡ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತರು ವಿತರಿಸಿದರು. ಪ್ರವಾಸದ ಅನುಭವವನ್ನು ಮಕ್ಕಳು ಇದೇ ವೇಳೆ ಹಂಚಿಕೊಂಡರು. ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಮೂರು ದಿವಸದ ಶಿಬಿರದ ಬಗ್ಗೆ ಮಾಹಿತಿ ನೀಡಿದರು.ಇದೇ ಸಂದರ್ಭದಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ವೈ.ಎಸ್. ವೀರಭದ್ರಪ್ಪ, ಜಿಲ್ಲಾ ಆಯುಕ್ತರು ಸ್ಟೀಫನ್ ಪ್ರಕಾಶ್, ಆಯುಕ್ತರು ಜಯರಮೇಶ್, ಹಿರಿಯರಾದ ಕಾಂಚನಮಾಲಾ, ಜಿಲ್ಲಾ ಖಜಾಂಚಿ ರಮೇಶ್, ಜಂಟಿ ಕಾರ್ಯದರ್ಶಿ ಸೌಮ್ಯ, ರೇಂಜರ್ ವಿದ್ಯಾ, ಆಯುಕ್ತರು ಪ್ರೇಮ ಪ್ರಕಾಶ್, ರಾಜ್ಯ ಸಂಘಟನೆಯ ಪ್ರಿಯಾಂಕ, ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ, ರೋವರ್ಸ್ ಗಿರೀಶ್, ಇತರರು ಉಪಸ್ಥಿತರಿದ್ದರು.