ಕನ್ನಡಪ್ರಭ ವಾರ್ತೆ ಹಿರಿಯೂರು
ಶಾಲೆಗಳಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ಮಾಡುವುದರಿಂದ ಬಾಲ್ಯದಲ್ಲಿಯೇ ಮಕ್ಕಳಿಗೆ ವ್ಯವಹಾರ ಜ್ಞಾನ ಹಾಗೂ ದುಡಿಮೆಯ ಮಹತ್ವ ಅರಿವಾಗುವುದು ಎಂದು ಪೌರಾಯುಕ್ತ ಎ.ವಾಸಿಂ ಅಭಿಪ್ರಾಯಪಟ್ಟರು.ನಗರದ ಮೋಕ್ಷಗುಂಡo ವಿಶ್ವೇಶ್ವರಯ್ಯ ವಿದ್ಯಾ ಮಂದಿರ ಶಾಲೆಯಲ್ಲಿ ನಡೆದ ಮಕ್ಕಳ ಸಂತೆ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳಿಗೆ ಓದುವ ಅವಧಿಯಲ್ಲಿಯೇ ವ್ಯವಹಾರ ಜ್ಞಾನದ ಮಹತ್ವ ತಿಳಿಸಬೇಕಾಗಿದೆ. ಮಕ್ಕಳ ಸಂತೆಯoತಹ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ದುಡಿಮೆಯ ಶ್ರಮ ಮತ್ತು ಹಣದ ಮಹತ್ವ ಅರಿವಾಗಲಿದೆ. ಉದ್ಯಮಶೀಲತೆ ಕುರಿತು ಪ್ರಾಯೋಗಿಕ ಅರಿವು ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂತೆ ಮೇಳಗಳು ಉತ್ತಮ ವೇದಿಕೆಯಾಗಲಿವೆ. ಮಕ್ಕಳಿಗೆ ತಮ್ಮ ದುಡಿಯುವ ಪೋಷಕರ ಶ್ರಮ ಮತ್ತು ಅವರ ಕನಸಿನ ಅರಿವಾದರೆ ಅವರು ಇನ್ನಷ್ಟು ಜವಾಬ್ದಾರಿಯಿಂದ ವಿದ್ಯಾಭ್ಯಾಸದತ್ತ ಆಸಕ್ತಿ ವಹಿಸುತ್ತಾರೆ ಎಂದರು.ಸಂತೆ ಮೇಳದಲ್ಲಿ 429ಕ್ಕೂ ಹೆಚ್ಚು ಬಗೆಯ ಸ್ಟಾಲ್‌ಗಳನ್ನು ಹಾಕಿದ್ದು ಮಕ್ಕಳು ಸೊಪ್ಪು, ತರಕಾರಿ, ಡ್ರೈ ಫ್ರೂಟ್ಸ್, ಮೊಳಕೆ ಕಾಳು, ಹಣ್ಣು ಸ್ಟೇಷನರಿ ವಸ್ತುಗಳು, ಎಳನೀರು, ತೆಂಗಿನಕಾಯಿ, ಹೂವು, ತಂಪು ಪಾನೀಯ, ಪಾನಿಪುರಿ, ಶೇಂಗಾ ಬೀಜ, ಚಕ್ಕಲಿ ಕೋಡುಬಳೆ ಮುಂತಾದ ಹಲವು ಬಗೆಯ ವಸ್ತುಗಳನ್ನು ಮಾರಾಟ ಮಾಡಿ ಸಂಭ್ರಮಿಸಿದರು.
ಪೋಷಕರು, ಸಾರ್ವಜನಿಕರು, ಶಾಲೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು, ಶಿಕ್ಷಕರು ವಿದ್ಯಾರ್ಥಿಗಳಿಂದ ವಿವಿಧ ವಸ್ತುಗಳನ್ನು ಖರೀದಿಸುವ ಮೂಲಕ ಅವರನ್ನು ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎಂ.ಬಸವರಾಜಪ್ಪ, ಕಾರ್ಯದರ್ಶಿ ಎಚ್.ಎಂ.ಬಸವರಾಜ್, ಖಜಾಂಚಿ ಸಣ್ಣ ಭೀಮಣ್ಣ, ನಿರ್ದೇಶಕ ಕೆ.ಆರ್.ವೀರಭದ್ರಯ್ಯ, ಮುಖ್ಯ ಶಿಕ್ಷಕ ಜಿ.ತಿಪ್ಪೇಸ್ವಾಮಿ ಸೇರಿದಂತೆ ಶಾಲೆಯ ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ಹಾಗೂ ಪೋಷಕರು ಹಾಜರಿದ್ದರು.