ಸಾರಾಂಶ
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಹಗಲು-ಇರುಳೆನ್ನದೇ ಪ್ರತಿದಿನ ನಗರ ಹಾಗೂ ಪಟ್ಟಣಗಳ ಸ್ವಚ್ಛತಾ ಕಾರ್ಯದಲ್ಲಿ ನಿರಂತರವಾಗಿ ಪೌರಕಾರ್ಮಿಕರ ಸೇವೆ ಅನನ್ಯ ಹಾಗೂ ಅವೀಸ್ಮರಣೀಯವಾದದ್ದು ಎಂದು ಎಂ.ಎಸ್.ಐ.ಎಲ್ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಹೇಳಿದರು.ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ನಗರಸಭೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ವಿಶ್ವಗುರು ಬಸವಣ್ಣನವರು ಕಾಯಕವೇ ಕೈಲಾಸ ಎಂದರು. ಅದನ್ನು ಚಾಚುತಪ್ಪದೇ ಪಾಲಿಸುವ ಪೌರಕಾರ್ಮಿಕರ ದಿನಾಚರಣೆಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ. ಇದು ಪೌರಕಾರ್ಮಿಕರಿಗೆ ಉತ್ತೇಜನ ತುಂಬುವ ಕೆಲಸವಾಗಿದೆ. ದಿನಾಚರಣೆ ಆಚರಿಸುವ ಮೂಲಕ ಪೌರಕಾರ್ಮಿಕರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುತ್ತದೆ. ಅವರ ಶ್ರೇಯೋಭಿವೃದ್ಧಿಗಾಗಿ ಯೋಜನೆಗಳನ್ನು ಜಾರಿಗೊಳಿಸಿದೆ. ಪೌರಕಾರ್ಮಿಕರಿಗೆ ಉಚಿತವಾಗಿ ನಿವೇಶನ, ಆರೋಗ್ಯ ತಪಾಸಣೆ, ಗೃಹಭಾಗ್ಯ ಯೋಜನೆಯಡಿ ಮನೆಗಳನ್ನು ನೀಡುತ್ತಿದೆ. ಪೌರಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಒಟ್ಟಾರೆ ಸರ್ಕಾರವು ಪೌರಕಾರ್ಮಿಕರ ಪರವಾಗಿದೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಗುತ್ತಿಗೆ ಹಾಗೂ ನೇರ ಪಾವತಿ ಪೌರಕಾರ್ಮಿಕರ ಹುದ್ದೆ ಕಾಯಂಗೊಳಿಸಲು ಘೋಷಣೆ ಮಾಡಿದ್ದಾರೆ. ನಗರದಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವ ೬೫ ಪೌರಕಾರ್ಮಿಕರಿಗೆ ಯಡಬೆಟ್ಟದಲ್ಲಿ ನಿವೇಶನಗಳನ್ನು ನೀಡಿದ್ದು, ಗೃಹ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದೆ. ಪೌರಕಾರ್ಮಿಕರ ಮಕ್ಕಳು ಪೌರಕಾರ್ಮಿಕರಾಗದೇ ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಸದೃಢರಾಗಬೇಕು. ಉನ್ನತ ಹುದ್ದೆಗಳನ್ನು ಅಲಂಕರಿಸಿ ಇತರರಿಗೆ ಮಾದರಿಯಾಗಬೇಕು. ಪೌರಕಾರ್ಮಿಕರು ನಗರ, ಪಟ್ಟಣಗಳ ಸ್ವಚ್ಛತಾ ಕಾರ್ಯದಲ್ಲಿ ಸಾರ್ಥಕತೆ ಕಾಣಬೇಕು ಎಂದು ತಿಳಿಸಿದರು.
ನಗರಸಭಾ ಅಧ್ಯಕ್ಷದ ಸುರೇಶ್ ಮಾತನಾಡಿ, ಪಟ್ಟಣವನ್ನು ಸ್ವಚ್ಛತೆಯಿಂದ ಕಾಪಾಡುವಲ್ಲಿ ಪೌರಕಾರ್ಮಿಕರ ಸಹಕಾರ ಅಭೂತಪೂರ್ವವಾಗಿದೆ. ಹೀಗಾಗಿ ಪೌರಕಾರ್ಮಿಕರು ಸ್ವಚ್ಛತಾ ಸೇನಾನಿಗಳಾಗಿದ್ದಾರೆ. ದೇಶಾದ್ಯಂತ ಸ್ವಚ್ಛತಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು, ಸರ್ಕಾರವು ಸ್ವಚ್ಛ ಭಾರತ್ ಯೋಜನೆಯಡಿ ಅನೇಕ ಅರಿವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಪೌರಕಾರ್ಮಿಕರು ಸರ್ಕಾರ ಜಾರಿ ಮಾಡಿರುವ ಯೋಜನೆ, ಕಾರ್ಯಕ್ರಮಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.ಪೌರಾಯುಕ್ತ ಎಸ್.ವಿ. ರಾಮದಾಸ್ ಮಾತನಾಡಿ, ಪೌರಕಾರ್ಮಿಕರ ಶ್ರಮದಿಂದಾಗಿ ನಗರವು ಸ್ವಚ್ಛತೆಯಿಂದ ಕೂಡಿದೆ. ದಿನೇ ದಿನೇ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ನಗರದ ಸ್ವಚ್ಛತೆಗೆ 180 ಜನ ಪೌರಕಾರ್ಮಿಕರ ಅಗತ್ಯವಿದ್ದು, 50 ಕಾರ್ಮಿಕ ನೌಕರರು, 82 ಜನರು ದಿನಗೂಲಿ ಮತ್ತು ಹೊರಗುತ್ತಿಗೆ ನೌಕರರು ಸೇರಿ 132 ಜನ ಕಾರ್ಮಿಕರು ನಗರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಪೌರಕಾರ್ಮಿಕ ನೌಕರರಿಗೆ ನಗರದ ಹೊರಹೊಲಯದಲ್ಲಿರುವ ಯಡಬೆಟ್ಟದಲ್ಲಿ ನಿವೇಶನ ನೀಡಿದ್ದು, ಮನೆ ನಿರ್ಮಿಸಲು ಸಹಾಯಧನ ನೀಡಲಾಗುತ್ತಿದೆ. ಆರೋಗ್ಯ ಕವಚ ಯೋಜನೆಯಡಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಶಾಸಕ ಸಿ. ಪುಟ್ಟರಂಗಶೆಟ್ಟಿ ಸಾಂಕೇತಿಕವಾಗಿ ಪೌರಕಾರ್ಮಿಕರಿಗೆ ತಲಾ ಒಂದು ಸಾವಿರ ರು.ಗಳ ಸಹಾಯಧನವನ್ನು ವಿತರಿಸಿದರು. ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೆ ಉತ್ತಮ ಸೇವಾಕಾರ್ಯಗೈದ ಪೌರಕಾರ್ಮಿಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ನಗರಸಭೆಯ ಉಪಾಧ್ಯಕ್ಷೆ ಮಮತ, ನಗರಸಭೆಯ ಸದಸ್ಯರಾದ ಅಬ್ರಾರ್ ಅಹಮ್ಮದ್, ಎಂ. ಮಹೇಶ್, ಚಿನ್ನಮ್ಮ, ನೀಲಮ್ಮ, ಗಾಯತ್ರಿ, ಕುಮುದಾ, ಆಶಾ, ಕಲೀಂ, ಬಸವಣ್ಣ, ನಾಮನಿರ್ದೇಶಿತ ಸದಸ್ಯರಾದ ಸ್ವಾಮಿ, ಪೌರಕಾರ್ಮಿಕ ನೌಕರ ಸಂಘದ ಅಧ್ಯಕ್ಷ ಪಳನಿ ಸ್ವಾಮಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರಸಭೆಯ ಕಚೇರಿಯ ಮುಂಭಾಗದಿಂದ ವಾಲ್ಮೀಕಿ ಭವನದವರೆಗೆ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಜಾಥಾ ನಡೆಯಿತು. ಜಾಥಾದಲ್ಲಿ ನಗರಸಭೆ ಅಧ್ಯಕ್ಷರಾದ ಎಸ್. ಸುರೇಶ್, ಉಪಾಧ್ಯಕ್ಷೆ ಮಮತಾ, ಸದಸ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು.