ರಾಜ್ಯದ ಜನತೆಗೆ ತುಟ್ಟಿ ಭಾಗ್ಯದ ಬರೆ ಕೊಟ್ಟ ಕಾಂಗ್ರೆಸ್ ಸರ್ಕಾರ: ಮಾಜಿ ಶಾಸಕ ಶಿವರಾಜ ಸಜ್ಜನರ ಕಿಡಿ

| Published : Jun 20 2024, 01:02 AM IST

ರಾಜ್ಯದ ಜನತೆಗೆ ತುಟ್ಟಿ ಭಾಗ್ಯದ ಬರೆ ಕೊಟ್ಟ ಕಾಂಗ್ರೆಸ್ ಸರ್ಕಾರ: ಮಾಜಿ ಶಾಸಕ ಶಿವರಾಜ ಸಜ್ಜನರ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಹಾನಗಲ್ಲಿನ ಮಹಾತ್ಮಾಗಾಂಧಿ ವೃತ್ತದಲ್ಲಿ, ಪೆಟ್ರೋಲ್, ಡೀಸೆಲ್ ಹಾಗೂ ಇತರೆ ಎಲ್ಲ ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನಾ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಹಾನಗಲ್ಲ

ಬಿಟ್ಟಿ ಭಾಗ್ಯಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ರಾಜ್ಯದ ಕಾಂಗ್ರೆಸ್ ಸರಕಾರ ಇಡೀ ರಾಜ್ಯದ ಜನತೆಗೆ ತುಟ್ಟಿ ಭಾಗ್ಯದ ಬರೆ ಕೊಟ್ಟು, ರೈತರು, ಬಡವರ ಬದುಕನ್ನು ಅಸ್ಥಿರಗೊಳಿಸಿ ₹೨ ಸಾವಿರ ನೀಡಿ ₹೧೦ ಸಾವಿರ ಕಸಿಯುತ್ತಿರುವುದು ರಾಜ್ಯದ ಜನತೆಗೆ ಮಾಡಿದ ಮೋಸ ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ಕಿಡಿ ಕಾರಿದರು.

ಬುಧವಾರ ಹಾನಗಲ್ಲಿನ ಮಹಾತ್ಮಾಗಾಂಧಿ ವೃತ್ತದಲ್ಲಿ, ಪೆಟ್ರೋಲ್, ಡೀಸೆಲ್ ಹಾಗೂ ಇತರೆ ಎಲ್ಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಅಧಿಕಾರ ಕೊಡಿ ಬೆಲೆ ಇಳಿಸುತ್ತೇವೆ ಎಂದ ಸಿದ್ಧರಾಮಯ್ಯ ಲೋಕಸಭೆ ಚುನಾವಣೆಯ ಹಿಂದೆ ಮುಂದೆ ಕೇವಲ ಬೆಲೆ ಏರಿಕೆಯ ದೊಡ್ಡ ಆಂದೋಲನವನ್ನೇ ಕೈಕೊಂಡಿದ್ದಾರೆ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ಎಲ್ಲ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಲಿದೆ. ಇದು ರಾಜ್ಯದ ಜನತೆಗೆ ಮಾಡಿದ ಮೋಸ. ನಿತ್ಯ ಹಗರಣಗಳ ಸುಳಿಯಲ್ಲಿರುವ ಕಾಂಗ್ರೆಸ್ ಬೆಲೆ ಏರಿಕೆ ಮೂಲಕ ರಾಜ್ಯದ ಜನತೆಯನ್ನು ಸುಲಿಗೆ ಮಾಡುತ್ತಿದೆ. ಸಾಮಾಜಿಕ ವ್ಯವಸ್ಥೆಯನ್ನು ಅಸ್ಥಿರಗೊಳಿಸುತ್ತಿದೆ. ರಾಜ್ಯದ ಜನತೆ ನಂಬಿ ಮೋಸ ಹೋಗಿದ್ದಾರೆ ಎಂದರು.

ತಾಪಂ ಮಾಜಿ ಅಧ್ಯಕ್ಷ ಚಂದ್ರಪ್ಪ ಹರಿಜನ ಮಾತನಾಡಿ, ಹಿಂದುಳಿದ ವರ್ಗಕ್ಕೆ ದೊಡ್ಡ ಅನ್ಯಾಯ ಮಾಡಿದ ಈ ಕಾಂಗ್ರೆಸ್ ಸರಕಾರಕ್ಕೆ ರಾಜ್ಯದ ಜನತೆಯ ಹಿತ ಬೇಕಾಗಿಲ್ಲ. ಇದು ದಲಿತ ವಿರೋಧಿ ಸರಕಾರ. ದಲಿತರಿಗೆ ಇರುವ ಅನುದಾನವನ್ನು ಲೂಟಿ ಮಾಡುತ್ತಿದ್ದಾರೆ. ಗಂಗಾ ಕಲ್ಯಾಣದಂತಹ ಯೋಜನೆಗಳು ಬಂದ್ ಆಗಿವೆ. ಹಿಂದುಳಿದ ವರ್ಗಗಳ ಮಕ್ಕಳಿಗೆ ಸ್ಕಾಲರ್‌ಶಿಪ್ ಸಿಗುತ್ತಿಲ್ಲ. ರಾಜ್ಯದ ಜನತೆಗೆ ಯಾವುದೇ ನ್ಯಾಯ ಒದಗಿಸದ ಕಾಂಗ್ರೆಸ್ ಸರಕಾರ ಬೆಲೆ ಏರಿಕೆಯ ದೊಡ್ಡ ಅನ್ಯಾಯ ಮಾಡಿದೆ ಎಂದರು.

ನ್ಯಾಯವಾದಿ ಸೋಮಶೇಖರ ಕೋತಂಬರಿ ಮಾತನಾಡಿ, ಈ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ. ನಿತ್ಯ ಕೊಲೆ ಸುಲಿಗೆಗಳೇ ಈ ಸರಕಾರದ ಭಾಗ್ಯಗಳಾಗಿವೆ. ರೈತರ ಹಿತ ಕಾಯುವ ಗ್ಯಾರಂಟಿ, ಆರೋಗ್ಯ ಗ್ಯಾರಂಟಿ, ಅಭಿವೃದ್ಧಿ ಗ್ಯಾರಂಟಿ ನೀಡಬೇಕಾದ ಸರಕಾರ ಸುಳ್ಳು ಗ್ಯಾರಂಟಿಗಳ ಮೂಲಕ ಕಾಲ ದೂಡುತ್ತಿದೆ. ರಾಜ್ಯದ ಸರಕಾರ ತಮ್ಮ ಅನುಕೂಲಕ್ಕಾಗಿರುವ ಅಕ್ರಮ ಸಕ್ರಮ ಸರಕಾರ. ಆದರೆ, ರೈತರ ಪಂಪಸೆಟ್ ಅಕ್ರಮ ಸಕ್ರಮಕ್ಕೆ ದೊಡ್ಡ ಬೆಲೆ ನಿಗದಿಪಡಿಸಿ ರೈತರ ಗೋಳಿಗೆ ಕಾರಣವಾಗಿದೆ. ರೈತರ ಶಾಪಕ್ಕೆ ಈ ಸರಕಾರ ಗುರಿಯಾಗಿದೆ ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಮಹೇಶ ಕಮಡೊಳ್ಳಿ, ಜೆಡಿಎಸ್ ತಾಲೂಕು ಅಧ್ಯಕ್ಷ ರಾಮನಗೌಡ ಪಾಟೀಲ, ಮಾಜಿ ಜಿಪಂ ಸದಸ್ಯ ಮಾಲತೇಶ ಸೊಪ್ಪಿನ, ಬಿಜೆಪಿಯ ಕಲ್ಯಾಣಕುಮಾರ ಶೆಟ್ಟರ ಮಾತನಾಡಿದರು. ಜಿಪಂ ಮಾಜಿ ಸದಸ್ಯ ರಾಘವೇಂದ್ರ ತಹಶೀಲ್ದಾರ, ಬಸಣ್ಣ ಸೂರಗೊಂಡರ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ನಿಂಗಪ್ಪ ಗೊಬ್ಬೇರ, ಭೋಜರಾಜ ಕರೂದಿ, ಮಲ್ಲಿಕಾರ್ಜುನ ಅಗಡಿ, ಮಾಲತೇಶ ಗಂಟಿ, ಶಿವಯೋಗಿ ಹಿರೇಮಠ, ಬಸವಣ್ಣೆಪ್ಪ ಸಂಸಿ, ಈರಣ್ಣ ನಿಂಬಣ್ಣನವರ, ರಾಜು ಗೌಳಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.