ಆತ್ಮಹತ್ಯೆ, ಭ್ರಷ್ಟಾಚಾರದ ಭಾಗ್ಯ ನೀಡಿದ ಕಾಂಗ್ರೆಸ್ ಸರ್ಕಾರ

| Published : Jan 07 2025, 12:15 AM IST

ಸಾರಾಂಶ

ರಾಜ್ಯದಲ್ಲಿ ಸಂಭವಿಸುತ್ತಿರುವ ಬಾಣಂತಿಯರ ಸಾವು, ಅಧಿಕಾರಿಗಳು, ಗುತ್ತಿಗೆದಾರರ ಆತ್ಮಹತ್ಯೆ, ಬಸ್ ಪ್ರಯಾಣ ದರ ಏರಿಕೆ, ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಆಡಳಿತ ಖಂಡಿಸಿ ಜಿಲ್ಲಾ ಬಿಜೆಪಿ ಹಾಗೂ ಬಿಜಿಪಿ ಮಹಿಳಾ ಮೋರ್ಚಾದಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ, ತುಮಕೂರುರಾಜ್ಯದಲ್ಲಿ ಸಂಭವಿಸುತ್ತಿರುವ ಬಾಣಂತಿಯರ ಸಾವು, ಅಧಿಕಾರಿಗಳು, ಗುತ್ತಿಗೆದಾರರ ಆತ್ಮಹತ್ಯೆ, ಬಸ್ ಪ್ರಯಾಣ ದರ ಏರಿಕೆ, ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಆಡಳಿತ ಖಂಡಿಸಿ ಜಿಲ್ಲಾ ಬಿಜೆಪಿ ಹಾಗೂ ಬಿಜಿಪಿ ಮಹಿಳಾ ಮೋರ್ಚಾದಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸರಣಿ ಹಗರಣ, ಸರಣಿ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಲೇ ಇವೆ. ಇದರ ವಿರುದ್ಧ ಬಿಜೆಪಿಯಿಂದ ಸಾಕಷ್ಟು ಪ್ರತಿಭಟನೆ ನಡೆದಿವೆ. ಇಷ್ಟಾಗಿಯೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಟೀಕಿಸಿದರು.ರಾಜ್ಯದಲ್ಲಿ ಬಾಣಂತಿಯರ ಸಾವಿನ ಪ್ರಕರಣಗಳು ಆತಂಕ ಮೂಡಿಸಿವೆ. ಸರ್ಕಾರ ಆರೋಗ್ಯ ಸೇವೆಯನ್ನು ಸಮರ್ಪಕವಾಗಿ ಒದಗಿಸುತ್ತಿಲ್ಲ, ಆರೋಗ್ಯ ಇಲಾಖೆಯ ತಿಮಿಂಗಿಲಗಳು ಬಾಣಂತಿಯರನ್ನು ನುಂಗುತ್ತಿವೆ. ಇದಕ್ಕೆಲ್ಲಾ ಸರ್ಕಾರವೇ ನೇರ ಹೊಣೆ. ಗುತ್ತಿಗೆದಾರ ಸಚಿನ್ ಆತ್ಯಹತ್ಯೆ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಕಾರಣವೆಂಬ ಆರೋಪವಿದೆ. ಎಷ್ಟೋ ಹಗರಣಗಳನ್ನು ಮಾಡಿಯೂ ರಾಜೀನಾಮೆ ನೀಡದ ಭಂಡ ಸರ್ಕಾರ ರಾಜ್ಯದಲ್ಲಿದೆ ಎಂದರು.ಗ್ಯಾರಂಟಿ ಯೋಜನೆಗಳನ್ನು ನಿರ್ವಹಣೆ ಮಾಡಲಾಗದೆ ಬಸ್ ಪ್ರಯಾಣ ದರ ಹೆಚ್ಚು ಮಾಡಿ ಜನಸಾಮಾನ್ಯರಿಗೆ ಹೊರೆ ಮಾಡಿದೆ, ಹಾಲಿನ ದರ ಹೆಚ್ಚು ಮಾಡಲು ಹೊರಟಿದ್ದಾರೆ. ಹಾಲಿನ ಸಹಾಯಧನ ಸಾವಿರಾರು ಕೋಟಿ ರು. ಬಾಕಿ ಇದೆ. ಅದನ್ನು ಹಾಲು ಉತ್ಪಾದಕರಿಗೆ ನೀಡದ ಸರ್ಕಾರ, ಈಗ ಹಾಲಿನ ದರ ಹೆಚ್ಚು ಮಾಡಿ ಆ ದುಡ್ಡನ್ನು ಭ್ರಷ್ಟಾಚಾರಕ್ಕೆ ಬಳಿಸಿಕೊಳ್ಳು ಹೊರಟಿರುವ ಸಿದ್ಧರಾಮಯ್ಯ ಸರ್ಕಾರ ಜನರ ಕಣ್ಣಿಗೆ ಮಣ್ಣೆರೆಚಿದೆ. ಇಂತಹ ಆಡಳಿತದ ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಬಳಿಕ ರಾಜ್ಯ ಸರ್ಕಾರ ಆತ್ಯಹತ್ಯೆ ಭಾಗ್ಯ ಕರುಣಿಸಿದೆ. ಭ್ರಷ್ಟಾಚಾರ ಬಯಲಾದುದರಿಂದ ವಾಲ್ಮೀಕಿ ನಿಗಮದ ಅಕೌಂಟೆಂಟ್ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡರು, ಬಳಿಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಬರೆದಿಟ್ಟು ರುದ್ರಣ್ಣ ಯಡವಣ್ಣವರ್ ಆತ್ಮಹತ್ಯೆ ಮಾಡಿಕೊಂಡರು, ದಾವಣಗೆರೆ ಗುತ್ತಿಗೆದಾರರೊಬ್ಬರು ಬಾಕಿ ಹಣ ನೀಡದ ಕಾರಣ ನೊಂದು ಆತ್ಮಹತ್ಯಗೆ ಶರಣಾದರು. ಮಾಗಡಿಯಲ್ಲಿ ಕ್ರಷರ್ ಲಾರಿ ಮಾಲೀಕರೊಬ್ಬರು ಲಂಚ ಕೊಡಲಾಗದೆ ಆತ್ಯಹತ್ಯೆ ಮಾಡಿಕೊಂಡರು. ಯಾದಗಿರಿ ಪಿಎಸ್‌ಐ ಪರಶುರಾಮ ಸ್ಥಳೀಯ ಶಾಸಕರ ಪುತ್ರನ ಒತ್ತಡ ತಡೆಯಲಾಗದೆ ಆತ್ಮಹತ್ಯೆ ಮಾಡಿಕೊಂಡರು. ಬೀದರ್‌ನ ಗುತ್ತಿಗೆದಾರ ಸಚಿನ್ ಸೇರಿದಂತೆ ಹಲವರು ಕಾಂಗ್ರೆಸ್ ಸರ್ಕಾರದ ಕಿರುಕುಳಕ್ಕೆ ಪ್ರಾಣ ತ್ಯಾಗ ಮಾಡಿದರು ಎಂದು ಹೇಳಿದರು.ರೈತ ಮೋರ್ಚಾ ಮುಖಂಡ ಎಸ್.ಶಿವಪ್ರಸಾದ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಭ್ರಷ್ಟಾಚಾರ, ಸಾವುನೋವು, ಗಲಭೆ ಗಲಾಟೆಗಳೇ ಹೆಚ್ಚಾಗಿವೆ. ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ಹಾಳಾಗಿದೆ. ಬಾಣಂತಿಯರ ಸಾವು, ಆಧಿಕಾರಿ, ಗುತ್ತಿಗೆದಾರರ ಆತ್ಯಹತ್ಯೆ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಇಂತಹ ಜನವಿರೋಧಿ ಸರ್ಕಾರ ಕೂಡಲೇ ಅಧಿಕಾರ ತ್ಯಜಿಸಬೇಕು ಎಂದು ಒತ್ತಾಯಿಸಿದರು.ಮಹಿಳಾ ಮೋರ್ಚಾ ನಾಯಕಿ ವಿಜಯಲಕ್ಷ್ಮಿ ಆನಂದ್, ಕಾನೂನು ಪ್ರಕೋಷ್ಠ ರಾಜ್ಯ ಸಂಚಾಲಕ ವಸಂತಕುಮಾರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಸಂದೀಪ್‌ಗೌಡ, ಕಾರ್ಯದರ್ಶಿ ಜ್ಯೋತಿ ತಿಪ್ಪೇಸ್ವಾಮಿ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ರಮ್ಯಾ, ಸಂಧ್ಯಾ, ನಗರ ಅಧ್ಯಕ್ಷ ಟಿ.ಹೆಚ್.ಹನುಮಂತರಾಜು, ಎಸ್.ಸಿ. ಮೋರ್ಚಾ ಜಿಲ್ಲಾ ಅಧ್ಯಕ್ಷ ಆಂಜನಪ್ಪ, ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ವೇದಮೂರ್ತಿ, ಯುವ ಮೋರ್ಚಾ ಅಧ್ಯಕ್ಷ ಚೇತನ್, ಮುಖಂಡರಾದ ಬನಶಂಕರಿ ಬಾಬು, ಮಲ್ಲಿಕಾರ್ಜುನ್, ಬಿ.ಜಿ.ಕ,ಷ್ಣಪ್ಪ, ಸಿ.ಎನ್.ರಮೇಶ್, ಸತ್ಯತಮಂಗಲ ಜಗದೀಶ್, ದರ್ಶನ್, ಕೆ.ಪಿ.ಮಹೇಶ್, ಪ್ರೇಮ ಹೆಗಡೆ, ಆದ್ಯಾಗೌಡ, ಕೋಮಲಾ, ಡಾ.ಫರ್ಜಾನ ಬೇನಂ, ರೇಖಾಕುಮಾರ್, ವೆಂಕಟೇಶ್ ಆಚಾರ್, ಹನುಮಂತರಾಜು ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.