ಕಾಂಗ್ರೆಸ್ ಪ್ರಣಾಳಿಕೆ ಜನರ ಭಾವನೆಗಳ ಪ್ರತಿರೂಪ

| Published : Apr 29 2024, 01:37 AM IST

ಸಾರಾಂಶ

ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ನಮ್ಮ ಸರ್ಕಾರ ನುಡಿದಂತೆ ನಡೆದ ಸರ್ಕಾರವಾಗಿದೆ

ಗದಗ: ಕಾಂಗ್ರೆಸ್ ಪ್ರಣಾಳಿಕೆ ಬಡವರ ಜೀವನ ಮಟ್ಟ ಸುಧಾರಿಸುವ ಹಾಗೂ ಭಾರತ ಜೋಡೋ ಸೇರಿದಂತೆ ರಾಹುಲ್ ಗಾಂಧಿ ನಡೆಸಿದ ಐತಿಹಾಸಿಕ ಪಾದಯಾತ್ರೆಯಲ್ಲಿ ಜನರಿಂದ ವ್ಯಕ್ತವಾದ ಅಭಿಪ್ರಾಯ, ಭಾವನೆಗಳ ಪ್ರತಿರೂಪವಾಗಿದೆ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ ಹೇಳಿದರು.

ಅವರು ಭಾನುವಾರ ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಯುವ ಚೈತನ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಿಂದ ಕಳೆದ ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ 25 ಜನ ಸಂಸದರು ಒಮ್ಮೆಯೂ ಲೋಕಸಭೆಯಲ್ಲಿ ಮಾತನಾಡಲಿಲ್ಲ, ಅವರನ್ನು ಶಾಶ್ವತವಾಗಿ ಮನೆಗೆ ಕಳಿಸುವ ಕೆಲಸ ಯುವ ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕಿದೆ.

ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ನಮ್ಮ ಸರ್ಕಾರ ನುಡಿದಂತೆ ನಡೆದ ಸರ್ಕಾರವಾಗಿದೆ. ಆದರೆ ಈ ಹಿಂದೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ 40% ಕಮೀಶನ್ ಸರ್ಕಾರವಾಗಿತ್ತು, ಅದನ್ನು ಕಿತ್ತೊಗೆದಂತೆ ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಕಿತ್ತು ಹಾಕಬೇಕು. ಪ್ರಧಾನಿ ಮೋದಿ ಮಾತೆತ್ತಿದರೆ ಪಾಕಿಸ್ತಾನದ ಬಗ್ಗೆ ದೊಡ್ಡ ಭಾಷಣ ಮಾಡುತ್ತಾರೆ. ಆದರೆ ಇಲೆಕ್ಟ್ರೋಲ್ ಬಾಂಡ್ ಗಳ ಮೂಲಕ ಪಾಕಿಸ್ತಾನದ ಕಂಪನಿಯಿಂದಲೇ ಕೋಟಿ ಕೋಟಿ ಹಣ ಪಡೆದಿದ್ದಾರೆ. ಇವರಿಗೆ ನೇರವಾಗಿ ಇಲೆಕ್ಷನ್ ಮಾಡಲು ತಾಕತ್ತು ಇಲ್ಲ, ಇಡಿ, ಸಿಬಿಐ ಮೂಲಕ ಚುನಾವಣೆ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹ್ಯಾರಿಸ್ ನಲ್ಪಾಡ ಮಾತನಾಡಿ, ಅಚ್ಚೆ ದಿನ ಯಾರಿಗೆ ಬಂದಿದೆ? ಯುವಕರಿಗೆ ಉದ್ಯೋಗ ಸೃಷ್ಟಿಯಲ್ಲಿ ಪ್ರಗತಿಯಾಗಿಲ್ಲ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದ ಅವರು, ಅಬ್ ಕಿ ಬಾರ್ ಚಾರ್ ಸೋ ಪಾರ್ ಎನ್ನುತ್ತಿದ್ದಾರೆ. ಈ ಬಾರಿ ಇವರು ನಾಲ್ಕು ದಾಟಿದರೆ ಪೆಟ್ರೋಲ್, ಡಿಸೈಲ್ ಸೇರಿದಂತೆ ಎಲ್ಲವೂ 400 ದಾಟುತ್ತವೆ ಎಂದರು.

ಕಾರ್ಯಕ್ರಮ ಆಯೋಜಕ ಕೃಷ್ಣಗೌಡ ಪಾಟೀಲ ಪ್ರಾಸ್ತಾವಿಕಾವಾಗಿ ಮಾತನಾಡಿದರು.

ರೋಣ ಶಾಸಕ ಜಿ.ಎಸ್. ಪಾಟೀಲ, ಹಿರಿಯ ನಾಯಕ ಸಲೀಂ ಅಹ್ಮದ, ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಅಭ್ಯರ್ಥಿ ಆನಂದ ಗಡ್ಡದೇವಮಠ ಮುಂತಾದವರು ಮಾತನಾಡಿದರು.

ಜಿಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಬಿ.ಬಿ. ಅಸೂಟಿ, ಬಸವರಾಜ ಸುಂಕಾಪೂರ, ಪೀರಸಾಬ್‌ ಕೌತಾಳ, ನೀಲಮ್ಮ ಬೊಳನವರ, ಅಕ್ಬರಸಾಬ್‌ ಬಬರ್ಚಿ, ಜಿ.ಎಸ್. ಗಡ್ಡದೇವರಮಠ ಸೇರಿದಂತೆ ಅನೇಕ ಹಿರಿಯ ನಾಯಕರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ ಮಂದಾಲಿ ಸ್ವಾಗತಿಸಿದರು. ಬಾಹುಬಲಿ ಜೈನರ್‌ ನಿರೂಪಿಸಿದರು.