ಸಾರಾಂಶ
ಬಿ. ರಾಮಪ್ರಸಾದ್ ಗಾಂಧಿ
ಹರಪನಹಳ್ಳಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹರಪನಹಳ್ಳಿ ಕ್ಷೇತ್ರದಲ್ಲಿ ಪಕ್ಷೇತರ (ಬಂಡಾಯ ಕಾಂಗ್ರೆಸ್) ಹಾಗೂ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ನಡುವಿನ ಸ್ಪರ್ಧೆಯಿಂದ ಇಬ್ಬಾಗವಾಗಿದ್ದ ಕಾಂಗ್ರೆಸ್ ಒಗ್ಗೂಡಿಸುವ ನಿಟ್ಟಿನಲ್ಲಿ ಪಟ್ಟಣದ ಹಿರಿಯ ಕಾಂಗ್ರೆಸ್ ಮುಖಂಡ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಸಿ. ಚಂದ್ರಶೇಖರ ಭಟ್ ನಿವಾಸದಲ್ಲಿ ಭಾನುವಾರ ಸಭೆ ನಡೆಯಿತು.2018ರಲ್ಲಿ ಎಂ.ಪಿ. ರವೀಂದ್ರ ಪರಾಭವಗೊಂಡು, ಆನಂತರ ದೈವಾಧೀನರಾದ ಮೇಲೆ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರು ಇಲ್ಲಿಗೆ ಆಗಮಿಸಿ, ಸತತವಾಗಿ ಕಾಂಗ್ರೆಸ್ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಸಾಕಷ್ಟು ಬಾರಿ ಹಳ್ಳಿ ಹಳ್ಳಿಗಳನ್ನು ಸುತ್ತಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಅರಸಿಕೇರಿ ಎನ್. ಕೊಟ್ರೇಶ ಅವರಿಗೆ ಲಭಿಸಿತು. ಅಷ್ಟೊತ್ತಿಗಾಗಲೆ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದ ಎಂ.ಪಿ. ಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕೆ ಧುಮಿಕಿದರು.ಆಗ ಕಾಂಗ್ರೆಸ್‌ನ ಕೆಲವು ಮುಖಂಡರು ಎಂ.ಪಿ. ಲತಾ ಅವರನ್ನು ಬೆಂಬಲಿಸಿದರೆ, ಇನ್ನೂ ಕೆಲವರು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಕೊಟ್ರೇಶ ಅವರನ್ನು ಬೆಂಬಲಿಸಿದರು. ಇದರಿಂದ ಕಾಂಗ್ರೆಸ್ ಕಾರ್ಯಕರ್ತರು ಇಬ್ಭಾಗವಾದರು.ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಎಂ.ಪಿ. ಲತಾ ಅಭೂತಪೂರ್ವ ಗೆಲುವು ಸಾಧಿಸಿದರು. ಗೆದ್ದ ಕೂಡಲೇ ರಾಜ್ಯದಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ಘೋಷಿಸಿದರು. ಕಾಂಗ್ರೆಸ್ ಶಾಸಕಾಂಗ ಸಭೆಯ ಸಹ ಸದಸ್ಯರಾಗಿ ಸದಸ್ಯತ್ವ ಪಡೆದರು.
ಅಲ್ಲಿಂದ ಈ ವರೆಗೂ ಹರಪನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಒಂದು ಕಡೆ, ಶಾಸಕರ ಬೆಂಬಲಿಗರು ಇನ್ನೊಂದು ಕಡೆ ಇದ್ದರು. ಇದೀಗ ಪುರಸಭಾ ಹಿರಿಯ ಸದಸ್ಯ ಎಂ.ವಿ. ಅಂಜಿನಪ್ಪ ಹಾಗೂ ಮೈದೂರು ಕುಬೇರಪ್ಪ ಅವರನ್ನು ಹರಪನಹಳ್ಳಿ ಹಾಗೂ ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಹೈ ಕಮಾಂಡ ನೇಮಕ ಮಾಡಿದ ಆನಂತರ ಕಾಂಗ್ರೆಸ್ ಒಗ್ಗೂಡುವಿಕೆಗೆ ಚಾಲನೆ ದೊರೆಯಿತು.ಎಂ.ವಿ. ಅಂಜಿನಪ್ಪ ಅವರು ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಾತಿ ಆದೇಶ ಪಡೆದು ತಾಲೂಕಿನಲ್ಲಿ ಹಿರಿಯ ಹಾಗೂ ಕಿರಿಯ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿ ಒಂದಾಗಿ ಹೋಗುವ ಬಗ್ಗೆ ಚರ್ಚಿಸಿದರು. ಈ ಬಗ್ಗೆ ಶಾಸಕರ ಬಳಿ ಸಹ ಮಾತನಾಡಿದರು.
ಫೆ. 24ರಂದು ಹಳೆಯ ಬಸ್ ನಿಲ್ದಾಣದಲ್ಲಿ ಪದಗ್ರಹಣ ಕಾರ್ಯಕ್ರಮ ಸಹ ಆಯೋಜನೆಗೊಂಡಿತು. ಇದಲ್ಲೆದರ ಫಲವಾಗಿ ಹಿರಿಯ ಕಾಂಗ್ರೆಸ್ ಧುರೀಣ, ರಾಜಕೀಯ ಮುತ್ಸದ್ದಿ ಸಿ. ಚಂದ್ರಶೇಖರ ಭಟ್ ಅವರ ನಿವಾಸದಲ್ಲಿ ಭಾನುವಾರ ಸಭೆ ನಿಗದಿಗೊಂಡು ಆ ಪ್ರಕಾರ ಜರುಗಿತು.ಈ ಸಂದರ್ಭದಲ್ಲಿ ಶಾಸಕಿ ಎಂ.ಪಿ. ಲತಾ ಮಾತನಾಡಿ, ನಾನು ಒಂದು ತಿಂಗಳು ಮಾತ್ರ ಆಷಾಢಕ್ಕೆ ಸೊಸೆ ತವರು ಮನೆಗೆ ಹೋದಂತೆ ಹೊರಗಿದ್ದೆ. ನಾನು, ನಮ್ಮ ತಂದೆ, ನಮ್ಮ ಸಹೋದರ ಕಾಂಗ್ರೆಸ್‌ನವರೇ , ಹಳೆಯದನ್ನೆಲ್ಲ ಮರೆತು ಎಲ್ಲರೂ ಸೇರಿ ಕಾಂಗ್ರೆಸ್ ಸದೃಢಗೊಳಿಸೋಣ. ಮುಂಬರುವ ಲೋಕಸಭೆ, ಜಿಪಂ, ತಾಪಂ ಚುನಾವಣೆ ಎದುರಿಸೋಣ, ಎಲ್ಲರ ಸಹಕಾರ ಇರಲಿ ಎಂದರು.
ಆನಂತರ ಸಿ. ಚಂದ್ರಶೇಖರ ಭಟ್, ಎಂ. ರಾಜಶೇಖರ, ಎಚ್.ಬಿ. ಪರಶುರಾಮಪ್ಪ, ಆಲದಹಳ್ಳಿ ಷಣ್ಮುಖಪ್ಪ ಇತರರು ಕಾಂಗ್ರೆಸ್ ಅಭಿವೃದ್ಧಿಗೆ ಶ್ರಮಿಸೋಣ ಎಂದು ಒಮ್ಮತಕ್ಕೆ ಬಂದರು.ಈ ಸಭೆಗೆ ಹಾಜರಿದ್ದರವರನ್ನು ಹೊರತುಪಡಿಸಿ ಇನ್ನೂ ಕೆಲವೊಂದಿಷ್ಟು ಜನರು ಮುಂದಿನ ಬೆಳವಣಿಗೆ ಕಾದು ನೋಡುತ್ತಿದ್ದಾರೆ. ಆದರೂ ಕಾಂಗ್ರೆಸ್ ಒಗ್ಗೂಡುವಿಕೆಗೆ ಈ ಸಭೆ ಮೊದಲ ಹೆಜ್ಜೆಯಾಗಿ ಪರಿಣಮಿಸಿದಂತೂ ಸತ್ಯ. ಸಭೆಯಲ್ಲಿ ಮತ್ತಿಹಳ್ಳಿ ಅಜ್ಜಣ್ಣ, ಬಂಡ್ರಿ ಗೋಣಿಬಸಪ್ಪ, ಅಲಮರಸಿಕೇರಿ ಪರಶುರಾಮ, ಲಾಟಿ ದಾದಾಪೀರ, ಉದ್ದಾರ ಗಣೇಶ, ಹುಲ್ಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ಚಿಕ್ಕೇರಿಬಸಪ್ಪ, ಉಪ್ಪಾರ ಅಂಜಿನಪ್ಪ, ವಿವಿಧ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ವಿ. ಅಂಜಿನಪ್ಪ, ಕುಬೇರಪ್ಪ ಇತರರು ಪಾಲ್ಗೊಂಡಿದ್ದರು.