ಸಾರಾಂಶ
ಸಂವಿಧಾನ ರಚನೆಯ ವೇಳೆ ಅನೇಕ ರಾಜಕಾರಣ ನಡೆದವು. ಅದಾಗ್ಯೂ ಡಾ. ಅಂಬೇಡ್ಕರ್ ಅವರು, ಪ್ರವಾಹದ ವಿರುದ್ಧ ಈಜಿ, ಬಂದ ಎಲ್ಲ ಅಡೆತಡೆ ಮೀರಿ ಸಂವಿಧಾನ ರಚಿಸುವಲ್ಲಿ ಯಶಸ್ವಿಯಾದರು.
ಹುಬ್ಬಳ್ಳಿ:
ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದ ವೇಳೆ ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನೇ ಅಮಾನತ್ತಿನಲ್ಲಿಟ್ಟು ಅಧಿಕಾರ ನಡೆಸಿದವರು. ಆದರೆ, ಈಗ ಕಾಂಗ್ರೆಸ್ ಸಂವಿಧಾನದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಆರ್‌ಎಸ್‌ಎಸ್‌ನ ಹಿರಿಯ ಪ್ರಚಾರಕ ವಾದಿರಾಜ ಹೇಳಿದರು. ಇಲ್ಲಿನ ಅರವಿಂದನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ "ಸಂವಿಧಾನದ ಸನ್ಮಾನ ಅಭಿಯಾನ " ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸ್ವಾತಂತ್ರ್ಯ ದೊರೆತ ಬಳಿಕ ಸಂವಿಧಾನದ ಮೂಲ ಆಶಯದ ದಿಕ್ಕು ತಪ್ಪಿಸುವ ಮೂಲಕ 45 ವರ್ಷ ಒಂದೇ ಕುಟುಂಬ ಆಳ್ವಿಕೆ ಮಾಡಿದೆ. ಭಾರತದ ಸಂವಿಧಾನವನ್ನು ಬೇಕಾಬಿಟ್ಟಿಯಾಗಿ ದುರ್ಬಳಕೆ ಮಾಡಿಕೊಂಡವರು ಇದೇ ಕಾಂಗ್ರೆಸ್ಸಿನವರು. ಆದರೆ, ಈಗ ಇವರೇ ಸುಳ್ಳು ಹೇಳಿಕೆ ನೀಡುವ ಮೂಲಕ ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿರುವುದು ಖಂಡನಾರ್ಹ ಎಂದರು.
ಭಾರತದ ಸಂವಿಧಾನಕ್ಕೆ ಈ ವರೆಗೆ 106 ತಿದ್ದುಪಡಿಗಳಾಗಿವೆ. ಈ ಪೈಕಿ 75 ತಿದ್ದುಪಡಿ ಮಾಡಿರುವ ಕಾಂಗ್ರೆಸ್. 31 ಬಾರಿ ಕಾಂಗ್ರೆಸೇತರ ಸರ್ಕಾರಗಳು ತಿದ್ದುಪಡಿ ಮಾಡಿವೆ. ಕಾಂಗ್ರೆಸ್ ತನ್ನ ಸ್ವಾರ್ಥಕ್ಕಾಗಿ ಸಂವಿಧಾನ ಅಮಾನತು ಮಾಡ ಹೊರಟಿತ್ತು ಎಂದು ಆರೋಪಿಸಿದರು.ಮಾಹಿತಿಯೇ ಇಲ್ಲ:
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದು ಕೇವಲ ಅಹಿಂಸೆಯಿಂದ ಮಾತ್ರವಲ್ಲ. ಭಗತ್‌ಸಿಂಗ್, ಸುಭಾಶ್ಚಂದ್ರ ಬೋಸ್ ಸೇರಿದಂತೆ ಅದೆಷ್ಟೋ ಹೋರಾಟಗಾರರ ಕ್ರಾಂತಿಕಾರಿ ಹೋರಾಟಗಳೂ ಸ್ವಾತಂತ್ರ ದೊರಕಲು ಸಹಕಾರಿಯಾಗಿವೆ. ಆದರೆ, ಇಂದು ಪಠ್ಯಪುಸ್ತಕಗಳಲ್ಲಿ ಮಹಾತ್ಮ ಗಾಂಧೀಜಿ ಅವರ ಅಹಿಂಸಾತ್ಮಕ ಹೋರಾಟದ ಬಗ್ಗೆ ಹೆಚ್ಚಾಗಿ ಕಾಣಸಿಗುತ್ತದೆ. ಇನ್ನುಳಿದ ಹೋರಾಟಗಾರರ ಕುರಿತ ಸರಿಯಾದ ಮಾಹಿತಿಯೇ ಇಲ್ಲ ಎಂದರು.ನಕಲು ಪ್ರತಿಯಲ್ಲ:
ಸಂವಿಧಾನ ರಚನೆಯ ವೇಳೆ ಅನೇಕ ರಾಜಕಾರಣ ನಡೆದವು. ಅದಾಗ್ಯೂ ಡಾ. ಅಂಬೇಡ್ಕರ್ ಅವರು, ಪ್ರವಾಹದ ವಿರುದ್ಧ ಈಜಿ, ಬಂದ ಎಲ್ಲ ಅಡೆತಡೆ ಮೀರಿ ಸಂವಿಧಾನ ರಚಿಸುವಲ್ಲಿ ಯಶಸ್ವಿಯಾದರು. ಯಾರೇ ಆಗಲಿ ಸಂವಿಧಾನ ಕುರಿತು ಕೀಳುಮಟ್ಟದ ಹೇಳಿಕೆ ನೀಡುವುದು ಖಂಡನಾರ್ಹ. ಸಂವಿಧಾನ ಯಾವುದೇ ದೇಶದ ನಕಲು ಪ್ರತಿಯಲ್ಲ. 3 ವರ್ಷ, 300ಕ್ಕೂ ಹೆಚ್ಚು ಸಭೆ ಮಾಡಿ ರಚಿಸಿದ ಸಂವಿಧಾನ. ಅದಕ್ಕೆ ನಾವೆಲ್ಲರೂ ಗೌರವ ನೀಡಲೇಬೇಕು ಎಂದು ವಾದಿರಾಜ ಹೇಳಿದರು.ಸ್ವಂತಿಕೆಗಾಗಿ ಅಲ್ಲ:
ಬಿಜೆಪಿಯನ್ನು ಸಂವಿಧಾನ ವಿರೋಧಿ ಎನ್ನುವ ಕಾಂಗ್ರೆಸ್, ಸಂವಿಧಾನ ರಚನೆಗೆ ಹೋರಾಡಿ ಜೈಲಿನಲ್ಲೇ ಪ್ರಾಣಬಿಟ್ಟ ಶ್ಯಾಮಪ್ರಸಾದ ಮುಖರ್ಜಿ ಜನಸಂಘದವರು ಎಂಬುದನ್ನು ನೆನಪಿಸಿಕೊಳ್ಳಬೇಕು. ಅವರ ಹೋರಾಟದ ಫಲವಾಗಿಯೇ ಇಂದು ಜಮ್ಮು-ಕಾಶ್ಮೀರದಲ್ಲಿ ಭಾರತದ ಸಂವಿಧಾನ ಪಾಲನೆಯಾಗುತ್ತಿದೆ. ಬಿಜೆಪಿ ಅವಧಿಯಲ್ಲಿ ಹಲವು ತಿದ್ದುಪಡಿಗಳಾದರೂ, ಪ್ರಜಾಪ್ರಭುತ್ವ ಉಳಿವಿಗೆ, ದೇಶ ಜನರಿಗೋಸ್ಕರವೇ ಹೊರತು ಸ್ವಂತಿಕೆಗಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಅನೇಕ ಜನ, ಪ್ರಭಾವಶಾಲಿಗಳು ನೀಡಿದ ಕಷ್ಟಗಳನ್ನು ಮೆಟ್ಟಿನಿಂತು ಅಂಬೇಡ್ಕರ್ ಅವರು ಸಂವಿಧಾನ ರಚಿಸಿದರು. ಅಂತಹ ಮಹಾನ್ ವ್ಯಕ್ತಿಗೆ ಗೌರವ ನೀಡುವ ಉದ್ದೇಶದಿಂದ ಬೂತ್ ಮಟ್ಟದಲ್ಲಿ ಸಂವಿಧಾನದ ಸನ್ಮಾನ ಅಭಿಯಾನ ಮಾಡಲು ಪಕ್ಷ ನಿರ್ಧರಿಸಿದೆ ಎಂದರು.
ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ ಸಂವಿಧಾನ ಪೀಠಿಕೆ ಓದಿದರು. ಬಿಜೆಪಿ ಜಿಲ್ಲಾ ಮಹಾನಗರ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಮಹಾಂತೇಶ ಶ್ಯಾಗೋಟಿ, ಬಿಜೆಪಿ ಮುಖಂಡರಾದ ಶಿವಾಜಿ ಡೊಳ್ಳಿನ, ವಿನಾಯಕ ಚಿಕ್ಕಮಠ ಸೇರಿದಂತೆ ಹಲವರಿದ್ದರು.