ದನ ಮೇಯಿಸಿಕೊಂಡು ಇದ್ದ ನನ್ನಂತಹ ಹುಡುಗ ಈಗ ಇಲ್ಲಿ ಕುಲಪತಿಗಳಾಗಿ ನಿಂತಿರಲು ಕಾರಣ ಸಂವಿಧಾನವೇ ಆಗಿದೆ.

ಕನ್ನಡಪ್ರಭ ವಾರ್ತೆ ಕೋಲಾರ

ನಿಜವಾದ ಸ್ವಾತಂತ್ರ್ಯ ನಮಗೆ ಬಂದಿರುವುದು ಸಂವಿಧಾನ ಜಾರಿಯಾದ ಮೇಲೆಯೇ, ಅದಕ್ಕಿಂತ ಮೊದಲು ಎಸ್ಸಿ, ಎಸ್ಟಿ, ಓಬಿಸಿ ಸಮುದಾಯಗಳ ಬದುಕು ಅತ್ಯಂತ ಶೋಚನೀಯವಾಗಿತ್ತು. ಸಂವಿಧಾನ ಇಂತಹ ಶೋಷಿತರಿಗೆ ನಿಜವಾದ ಬದುಕುವ ಹಕ್ಕು ಕೊಟ್ಟಿದೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ. ರವಿ ಅಭಿಪ್ರಾಯಪಟ್ಟರು.

ಕೋಲಾರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕೋಶ, ರಾಜ್ಯಶಾಸ್ತ್ರ ವಿಭಾಗ ಮತ್ತು ಸಮಾಜಕಾರ್ಯ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಮಂಗಸಂದ್ರದ ವಿವಿಯ ಸುವರ್ಣಗಂಗೆ ಆವರಣದಲ್ಲಿ ನಡೆದ ಸಂವಿಧಾನ ದಿನಾಚರಣೆ-೨೦೨೬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ದನ ಮೇಯಿಸಿಕೊಂಡು ಇದ್ದ ನನ್ನಂತಹ ಹುಡುಗ ಈಗ ಇಲ್ಲಿ ಕುಲಪತಿಗಳಾಗಿ ನಿಂತಿರಲು ಕಾರಣ ಸಂವಿಧಾನವೇ ಆಗಿದೆ ಎಂದರು.

ಸಂವಿಧಾನ ಪೀಠಿಕೆ ಫಲಕ ಉದ್ಘಾಟನೆ

ವೇದಿಕೆ ಕಾರ್ಯಕ್ರಮಕ್ಕೆ ಮೊದಲು ಸಂವಿಧಾನ ಪೀಠಿಕೆ ಶಿಲಾನ್ಯಾಸ ಫಲಕವನ್ನು ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿಗಳೂ ಆದ ಪ್ರಭು ನೀಲಾಚಾರಿ ಬಡಿಗೇರಿ ಮಾತನಾಡಿ, ಸಂವಿಧಾನ ನಮ್ಮ ಶಕ್ತಿ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ಕೊಟ್ಟ ಅಮೂಲ್ಯ ಕೊಡುಗೆ ಸಂವಿಧಾನ ಎಂದರು.

ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯರಾದ ಸೀಸಂದ್ರ ಗೋಪಾಲಗೌಡ, ಜೈದೀಪ್, ಅರ್ಬಾಜ್ ಪಾಷಾ, ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾದ ಕಲ್ಲಂಡೂರು ಲೋಕೇಶ್, ಮುನಿಶಾಮಿ ಗೌಡ ಅವರು, ವಕೀಲರ ಸಂಘದ ಉಪಾಧ್ಯಕ್ಷ ಸುಬ್ರಮಣಿ, ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಪ್ರೊ. ಡಿ .ಕುಮದಾ, ರಾಜ್ಯಶಾಸ್ತ್ರ ವಿಭಾಗದ ಸಹಪ್ರಾಧ್ಯಪಕ ಡಾ.ಎಂ.ಎನ್.ರಮೇಶ್ ಉಪಸ್ಥಿತರಿದ್ದರು.