ಪ್ರಜಾತಂತ್ರ ಯಶಸ್ಸಿಗೆ ಸಂವಿಧಾನವೇ ಕಾರಣ

| Published : Sep 16 2025, 12:03 AM IST

ಸಾರಾಂಶ

ಈ ದೇಶದ ಕಟ್ಟಕಡೆಯ ವ್ಯಕ್ತಿಗೆ ಸಮಾನ ಅವಕಾಶ, ಹಕ್ಕುಗಳು, ನ್ಯಾಯ,ಸಮಾನತೆ ದೊರೆಯಬೇಕೆಂದರೆ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮುಂದುವರೆಯಲೇಬೇಕು. ಇಲ್ಲವಾದಲ್ಲಿ ಆರ್ಥಿಕ, ಸಾಮಾಜಿಕ,ಶೈಕ್ಷಣಿಕ ಮತ್ತು ರಾಜಕೀಯ ತಾರತಮ್ಯ,ಮೇಲು ಕೀಳುಗಳು ಹೆಚ್ಚಾಗಿ ದೇಶ ಅಭಿವೃದ್ಧಿಯಲ್ಲಿ ಹಿಂದೆ ಸರಿಯುತ್ತದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಗತ್ತಿನಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ರಾಷ್ಟ್ರವಾಗಿ ಯಶಸ್ಸು ಪಡೆದಿರುವ ಭಾರತ ಮುಂದುವರಿಯಲು ಕಾರಣ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನ ಕಾರಣ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಸೋಮವಾರ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿ, ಭಾರತ ರತ್ನ ಡಾ ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನಕ್ಕೆ ವಿಶ್ವವೇ ಮೆಚ್ಚುಗೆ ವ್ಯಕ್ತಿಪಡಿಸಿದೆ ಎಂದರು.

ಸಮ ಸಮಾಜವೇ ಸಂವಿಧಾನ

ರಾಜ್ಯ ಸರಕಾರವು ‘''''ನಮ್ಮ ಮತ ನಮ್ಮ ಹಕ್ಕು’ ಘೋಷಣೆಯಡಿ ಪ್ರಜಾಪ್ರಭುತ್ವವನ್ನು ಆಚರಿಸುವ ಮೂಲಕ ನಾವೆಲ್ಲರೂ ಒಟ್ಟಿಗೆ ಇರಬೇಕು ಎಂಬ ನಿಟ್ಟಿನಲ್ಲಿ ಡಾ.ಬಿ. ಅರ್. ಅಂಬೇಡ್ಕರ್ ಅವರು ನಮ್ಮ ಅಖಂಡ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಹೊಸ ಸಮಾಜ ನಿರ್ಮಾಣವಾಗಬೇಕು ಎಂದು ರಚನೆಯಾದ ಸರ್ವ ಸಮಾನತೆ, ಸಮ ಸಮಾಜದ ಸಂವಿಧಾನವಾಗಿದೆ ಎಂದರು.

ಈ ದೇಶದ ಕಟ್ಟಕಡೆಯ ವ್ಯಕ್ತಿಗೆ ಸಮಾನ ಅವಕಾಶ, ಹಕ್ಕುಗಳು, ನ್ಯಾಯ,ಸಮಾನತೆ ದೊರೆಯಬೇಕೆಂದರೆ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮುಂದುವರೆಯಲೇಬೇಕು. ಇಲ್ಲವಾದಲ್ಲಿ ಆರ್ಥಿಕ, ಸಾಮಾಜಿಕ,ಶೈಕ್ಷಣಿಕ ಮತ್ತು ರಾಜಕೀಯ ತಾರತಮ್ಯ,ಮೇಲು ಕೀಳುಗಳು ಹೆಚ್ಚಾಗಿ ದೇಶ ಅಭಿವೃದ್ಧಿಯಲ್ಲಿ ಹಿಂದೆ ಸರಿಯುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಸಾರ್ವಜನಿಕರ ಹಕ್ಕು . ದೇಶದ ಅಭಿವೃದ್ಧಿಗೆ ನಮ್ಮ ಮತ ನಿಮ್ಮ ಹಕ್ಕು ನಮ್ಮ ಸಾಂವಿಧಾನಿಕ ಕರ್ತವ್ಯ. ನಾವೆಲ್ಲರೂ ಮರೆಯದೆ ನಿಮ್ಮ ಮತ ಚಲಾಯಿಸಿಬೇಕು ಎಂದರು.

ಕಡ್ಡಾಯವಾಗಿ ಮತದಾನ ಮಾಡಿ

ನಿಮ್ಮ ಒಂದು ಮತ ಸದೃಢ ಭಾರತ ನಿರ್ಮಾಣಕೆ ಆಧಾರ. ಯಾವುದೆ ಆಮಿಷಕೆ ಒಳಗಾಗದೆ ನಿರ್ಭಯವಾಗಿ ಪಾರದರ್ಶಕವಾಗಿ ಮತ ಚಲಾಯಿಸುವುದರ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಿ. ದೇಶವನ್ನು ಭ್ರಷ್ಟಮುಕ್ತಗೊಳಿಸಲು ಉತ್ತಮ ಜನಪ್ರತಿನಿಧಿಗಳನ್ನು ಚುನಾಯಿಸಿ. ನಿಮ್ಮ ಅಮೂಲ್ಯ ಮತವನ್ನು ಮಾರಾಟ ಮಾಡಿಕೊಳ್ಳಬೇಡಿ. ಉತ್ತಮ ಸಮಾಜ ನಿರ್ಮಾಣವಾಗಲು ನಾಯಕರಿಂದಲೆ ಸಾಧ್ಯ. ಆದ್ದರಿಂದ ಮತದಾರರು ಜವಾಬ್ದಾರಿಯಿಂದ ಮತ ಚಲಾಯಿಸಿ ಅರ್ಹ ಜನಪರ ಪ್ರತಿನಿಧಿಗಳನ್ನು ಆಯ್ಕೆಮಾಡಬೇಕು ಎಂದು ಸಲಹೆ ನೀಡಿದರು.

ವಿಶ್ವಸಂಸ್ಥೆಯಿಂದ 2007ರ ಸೆಪ್ಟೆಂಬರ್ 15 ರಂದು ನಿರ್ಣಯವಾಗಿ 2008ರಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನ ಆಚರಣೆಯನ್ನು ಮಾಡಲಾಯಿತು. ಸಂವಿಧಾನದ ಪೀಠಿಕೆ, ಅದರ ಅರ್ಥ ಮತ್ತು ಮಹತ್ವದ ಬಗ್ಗೆ ಸಮಾಜದ ಮಕ್ಕಳಿಗೆ ಅರ್ಥೈಸುವ ಉದ್ದೇಶದಿಂದ ಸರ್ಕಾರ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು.

ಸಮಾನತೆ ಪ್ರಜಾತಂತ್ರದ ಜೀವಾಳ

ಇಂದಿನ ಮತ್ತು ಮುಂದಿನ ಪೀಳಿಗೆಗೆ ಪ್ರಜಾಪ್ರಭುತ್ವದ ಅರಿವು ಮತ್ತು ಪ್ರಾಮುಖ್ಯತೆ ಬಗ್ಗೆ ನಿರಂತರ ಅರಿವು ಮೂಡಿಸುವಂತಹ ಕರ್ತವ್ಯವು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರಜಾಪ್ರಭುತ್ವ ಉಳಿದರೆ ನಾವು ಉಳಿಯಲು ಸಾಧ್ಯ, ಸ್ವಾತಂತ್ರ್ಯ, ಸಮಾನತೆ, ಭಾತೃತ್ವ ಸಾಮಾಜಿಕ ನ್ಯಾಯ ಪ್ರಜಾಪ್ರಭುತ್ವದ ಜೀವಾಳವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚ ಗ್ಯಾರಂಟಿ ಯೋಜನೆ ಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಯಲುವಳ್ಳಿ ಎನ್. ರಮೇಶ್, ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಪಂ ಸಿಇಒ ಡಾ.ವೈ.ನವೀನ್ ಭಟ್, ಎಸ್ಪಿ ಕುಶಲ್ ಚೌಕ್ಷೆ, ಅಪರ ಡಿಸಿ ಡಾ.ಎನ್. ಭಾಸ್ಕರ್, ಜಿಪಂ ಉಪ ಕಾರ್ಯದರ್ಶಿ ಅತಿಕ್ ಪಾಷಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ತೇಜಾನಂದ ರೆಡ್ಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಇದ್ದರು.