ಸಾರಾಂಶ
ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಸಂವಿಧಾನದ ಫಲವನ್ನೂ ಕೇವಲ ಒಂದು ವರ್ಗಕ್ಕೆ ಸೀಮಿತವಾಗದೆ ದೇಶದ ಪ್ರತಿಯೊಬ್ಬ ಜಾತಿ, ಧರ್ಮದವರು ಈಗಾಗಲೇ ಪಡೆದು ಪ್ರಸನ್ನರಾಗಿದ್ದೇವೆ.
ಮೊಳಕಾಲ್ಮುರು: ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಸಂವಿಧಾನದ ಫಲವನ್ನೂ ಕೇವಲ ಒಂದು ವರ್ಗಕ್ಕೆ ಸೀಮಿತವಾಗದೆ ದೇಶದ ಪ್ರತಿಯೊಬ್ಬ ಜಾತಿ, ಧರ್ಮದವರು ಈಗಾಗಲೇ ಪಡೆದು ಪ್ರಸನ್ನರಾಗಿದ್ದೇವೆ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ತಿಳಿಸಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆಗಳ ಆಶ್ರಯದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರತಿ ಹಳ್ಳಿಯ ಜನರಿಗೂ ಹಾಗೂ ಶಾಲಾ ವಿದ್ಯಾರ್ಥಿಗಳಿಗೂ ಸಂವಿಧಾನದ ಆಶಯ ಹಾಗೂ ಧ್ಯೇಯವನ್ನು ತಪುಪಿಸುವ ನಿಟ್ಟಿನಲ್ಲಿ ಈ ಯಾತ್ರೆಯ ಜಾಥಾ ನಡೆಸಲಾಗುತ್ತಿದೆ. ಸಂವಿಧಾನವು ಎಲ್ಲಾ ಧರ್ಮ, ವರ್ಗದವರಿಗೂ ಸಮಾನತೆ ನೀಡಿ ವಿಶ್ವವೇ ಮೆಚ್ಚುವಂತಿದೆ ಎಂದರು.
ಪಟ್ಟಣದ ಕೆಇಬಿ ವೃತ್ತದಲ್ಲಿ ಜಾಥಾದ ಸ್ತಬ್ಧ ಚಿತ್ರವನ್ನು ಸ್ವಾಗತಿಸಿಕೊಳ್ಳಲಾಯಿತು, ಆನಂತರ ಮುಖ್ಯ ರಸ್ತೆಯ ಮೂಲಕ ವಿಜೃಂಭಣೆಯ ಮೆರವಣಿಗೆ ನಡೆಸಿ ಬಸ್ ನಿಲ್ದಾಣದಲ್ಲಿ ಸಮಾವೇಶಗೊಳ್ಳಲಾಯಿತು. ಮೆರವಣಿಗೆಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು, ನಾನಾ ಇಲಾಖೆಗಳ ಅಧಿಕಾರಿಗಳು, ಸಮುದಾಯದ ಮುಖಂಡರು, ಅಂಗನವಾಡಿ, ಆಶಾ ಕಾರ್ಯಕರ್ತರು ಪಾಲ್ಗೊಂಡಿದ್ದರು.ಕಾರ್ಯಕ್ರಮದಲ್ಲಿ ಪಶು ಸಂಗೋಪನಾ ಇಲಾಖೆ ಎಇಇ ಡಾ.ರಂಗಸ್ವಾಮಿ ಸಂವಿಧಾನದ ಪೀಠಿಕೆ ಬೋಧಿಸಿದರು.
ತಹಸೀಲ್ದಾರ್ ಟಿ.ಜಗದೀಶ್, ತಾಪಂ ಇಒ ಎಂ.ಆರ್.ಪ್ರಕಾಶ್, ಸಮಾಜ ಕಲ್ಯಾಣ ಇಲಾಖಾಧಿಕಾರಿ ಮಾಲತಿ, ಬಿಇಒ ಇ.ನಿರ್ಮಲಾದೇವಿ, ಕಸಾಪ ಅಧ್ಯಕ್ಷ ಜಿಂಕಾ ಶ್ರೀನಿವಾಸ್, ದಸಂಸ ಸಂಚಾಲಕರಾದ ಕೆರೆಕೊಂಡಾಪುರ ಪರಮೇಶ್ವರಪ್ಪ, ಬಿ.ಟಿ.ನಾಗಭೂಷಣ್, ಜಿ.ಶ್ರೀನಿವಾಸ ಮೂರ್ತಿ, ಜಿ.ಪ್ರಕಾಶ್, ಎಸ್.ಖಾದರ್, ಧನಂಜಯ, ಸಿದ್ದಾರ್ಥ, ನಾಗರಾಜ್, ವಾರ್ಡ್‌ನ ಹಾಲೇಶ್, ಗುರುಸಿದ್ದಪ್ಪ, ಆರ್ಐ ಮಲ್ಲಿಕಾರ್ಜುನ್, ಶಿಕ್ಷಕ ಮುಜಾಮಿಲ್, ಓಬಣ್ಣ ಇದ್ದರು.