ಸಾರಾಂಶ
ಶಿರಸಿ: ಪತ್ನಿಯ ಶೀಲ ಶಂಕಿಸಿ, ಕೊಲೆ ಮಾಡಿದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರದ ೧ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.ಹಳಿಯಾಳದ ಗಾಂಧಿಕೇರಿಗಲ್ಲಿಯ ಸುಭಾಷ ನಾಗಪ್ಪ ಮಾದರಗೆ ಜೀವಾವಧಿ ಶಿಕ್ಷೆ ಹಾಗ ೨೭ ಸಾವಿರ ರು. ದಂಡ ಹಾಗೂ ೫೦ ಸಾವಿರ ರು. ಮೃತರ ಅವಲಂಬಿತರಾದ ಮಕ್ಕಳಿಗೆ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.ಈತ ಹಳಿಯಾಳ ಗಾಂಧಿಕೇರಿಗಲ್ಲಿಯ ಆಪಾದಿತನು 2007ರ ಫೆ. 7ರಂದು ಮದುವೆ ಮಾಡಿಕೊಂಡವನು ತನ್ನ ಹೆಂಡತಿ ಶೀಲದ ಬಗ್ಗೆ ಸಂಶಯ ಮಾಡುತ್ತಿದ್ದ. ಇದರಿಂದ ನೊಂದ ಪತ್ನಿ ತನ್ನ ಎರಡು ಸಣ್ಣ ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದಳು. ಆಗ ಪತ್ನಿಯ ಮನವೊಲಿಸಿ ಮರಳಿ ಕರೆದುಕೊಂಡು ಬಂದಿದ್ದ. 2007ರ ಮೇ ೧೯ರಂದು ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿದ್ದ. ಹಳಿಯಾಳ ಪೊಲೀಸ್ ವೃತ್ತ ನಿರೀಕ್ಷಕ ಸುಂದ್ರೇಶ ಹೊಳೆವರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡು ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣವನ್ನು ವಿಚಾರಣೆ ನಡೆಸಿದ ಶಿರಸಿ ನಗರದ ೧ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ರಾಜೇಶ್ ಎಂ. ಮಳಗಿಕರ್ ಅವರು ವಾದ ಮಂಡಿಸಿದ್ದರು.ಅಪಘಾತ: ಸವಾರರಿಬ್ಬರಿಗೆ ಗಾಯಶಿರಸಿ: ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಬನವಾಸಿ ಸಮೀಪದ ಈಡೂರ ಕ್ರಾಸ್ ಬಳಿ ನಡೆದಿದೆ.ಬೈಕ್ ಸವಾರ ನಯಾಜ್‌ಉಲ್ಲಾ ಅಬ್ದುಲ್ ಮುನಾಫ್ ಸಾಬ್ ಹಾಗೂ ಹಿಂಬದಿ ಸವಾರನಾದ ರಹೀಮ್ ಸತಾರ್ ಸಾಬ್ ಗಾಯಗೊಂಡವರಾಗಿದ್ದಾರೆ. ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.