ಸಾರಾಂಶ
- ಶ್ರೀ ರುದ್ರೇಶ್ವರ ಪ್ರೌಢಶಾಲೆಯಲ್ಲಿ ಪರಿಸರ ಮಾಹಿತಿ-ಸಸಿ ನಾಟಿ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಂಚಭೂತಗಳು ಮುನಿಸಿಕೊಳ್ಳುವುದನ್ನು ತಡೆಗಟ್ಟಲು ಮರ-ಗಿಡಗಳು ಪ್ರಕೃತಿಯಲ್ಲಿ ಸಮೃದ್ಧವಾಗಿ ಇರಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಪರಿಸರ ಕಾಪಾಡಿದಲ್ಲಿ ಶುದ್ಧ ಗಾಳಿ -ಬೆಳಕು ಸಿಗುವುದು. ಕಾಲಮಾನಕ್ಕೆ ತಕ್ಕಂತೆ ಮಳೆಯಾಗಬಲ್ಲದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಎ.ಜಿ.ಪ್ರವೀಣ್ ಹೇಳಿದರು.ತಾಲೂಕಿನ ಗೊಪ್ಪೇನಹಳ್ಳಿ-ಪಾಂಡೋಮಟ್ಟಿ ಗ್ರಾಮದ ಮಧ್ಯದಲ್ಲಿರುವ ಶ್ರೀ ರುದ್ರೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ಮಾಹಿತಿ ಮತ್ತು ಸಸಿ ನಾಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಕಾಡಿನಲ್ಲಿರುವ ಮರಗಳು ನಶಿಸಿ ಹೋಗುತ್ತಿದ್ದು, ನಾಡಿನಲ್ಲಿಯೇ ಕಾಡನ್ನು ಬೆಳೆಸುವತ್ತ ಪ್ರತಿಯೊಬ್ಬರು ಮುಂದಾಗಬೇಕಾಗಿದೆ. ಪ್ರಕೃತಿ ಪರಿಸರಕ್ಕೆ ಬೇಕಾದಂತಹ ಹಣ್ಣಿನ ಗಿಡಗಳು, ಮರ-ಗಿಡಗಳು ಮತ್ತು ಮನುಷ್ಯ ಸ್ನೇಹಿ ಗಿಡಗಳನ್ನು ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.ತುಮ್ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಸಮಾರಂಭದ ಉದ್ಘಾಟಿಸಿ ಮಾತನಾಡಿ, ನಾವು ಪ್ರತಿದಿನ ಸೇವಿಸುವಂತಹ ಗಾಳಿಯಲ್ಲಿ ಹಲವಾರು ಪ್ರಕಾರಗಳ ರಾಸಾಯನಿಕ ಅಂಶಗಳು ಸೇರಿಕೊಂಡಿರುತ್ತವೆ. ಇದರಿಂದ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ. ಇವುಗಳನ್ನು ನಿವಾರಣೆ ಮಾಡಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಸಿನಾಟಿ ಮಾಡುವ ಕಾರ್ಯಕ್ರಮಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಹಾಕಿಕೊಂಡಿರುವುದು ಸಮಾಜದ ಮೇಲಿರುವ ಕಳಕಳಿ ತೋರುತ್ತಿದೆ. ಇಂತಹ ಉತ್ತಮ ಕೆಲಸವನ್ನು ಮಾಡುತ್ತಿರುವ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಂಸ್ಥೆ ಅಭಿನಂದನೀಯ ಎಂದರು.
ಅಧ್ಯಕ್ಷತೆಯನ್ನು ರುದ್ರೇಶ್ವರ ಪ್ರೌಢಶಾಲೆ ಸಲಹಾ ಸಮಿತಿ ಅಧ್ಯಕ್ಷ ಪ್ರಭುಲಿಂಗಪ್ಪ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಯೋಜನೆ ನಿರ್ದೇಶಕ ದಿನೇಶ್ ಪುಜಾರಿ, ಆರಣ್ಯ ಇಲಾಖೆಯ ಹಾಲಪ್ಪ, ಮುಖ್ಯಶಿಕ್ಷಕ ಕೆ.ಬಿ.ಶಿವರಾಜ್, ಯೋಜನೆ ಕೃಷಿ ಅಧಿಕಾರಿ ಅಜ್ಜಪ್ಪ, ರೈತ ಸಂಘದ ಅಧ್ಯಕ್ಷ ಮಲಹಾಳ್ ತಿಪ್ಪೇಶಪ್ಪ ಹಾಜರಿದ್ದರು.- - - -2ಕೆಸಿಎನ್‌ಜಿ2:
ಚನ್ನಗಿರಿ ತಾಲೂಕಿನ ಗೊಪ್ಪೇನಹಳ್ಳಿ- ಪಾಂಡೋಮಟ್ಟಿ ಗ್ರಾಮದ ಮಧ್ಯದಲ್ಲಿರುವ ಶ್ರೀ ರುದ್ರೇಶ್ವರ ಪ್ರೌಢಶಾಲೆ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಿಸರ ಮಾಹಿತಿ ಮತ್ತು ಸಸಿ ನಾಟಿ ಕಾರ್ಯಕ್ರಮ ನಡೆಯಿತು.